ಲೋಕಸಮರ: ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ, 4 ಹಾಲಿ ಸಂಸದರಿಗೆ ಕೊಕ್

3:27 PM, Saturday, March 8th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

BJPನವದೆಹಲಿ: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿಯು ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದ್ದು, ಮೊದಲ ಪಟ್ಟಿಯಲ್ಲಿ ನಾಲ್ವರು ಹಾಲಿ ಸಂಸದರಿಗೆ ಕೊಕ್ ನೀಡಲಾಗಿದೆ.

ಅಭ್ಯರ್ಥಿಗಳ ಆಯ್ಕೆ ಸಂಬಂಧ ಇಂದು ದೆಹಲಿಯಲ್ಲಿ ನಡೆದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ 20 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಂತಿಮಗೊಳಿಸಲಾಯಿತು. ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಅವರು ಮೊದಲ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. ಪಕ್ಷದ ಹಿರಿಯ ಮುಖಂಡರಾದ ಅನಂತ್ ಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಹಾಲಿ ಸಂಸತ್ ಸದಸ್ಯರಾದ ಡಿ.ಬಿ.ಚಂದ್ರೇಗೌಡ, ಬಿ.ವೈ.ರಾಘವೇಂದ್ರ, ಶಿವರಾಮೆಗೌಡ ಹಾಗೂ ಸಣ್ಣಫಕೀರಪ್ಪ ಅವರಿಗೆ ಈ ಬಾರಿ ಟಿಕೆಟ್ ನಿರಾಕರಿಸಲಾಗಿದೆ.

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಡಿ.ಬಿ.ಚಂದ್ರೇಗೌಡ ಅವರ ಬದಲಿಗೆ ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಶಿವಮೊಗ್ಗ ಕ್ಷೇತ್ರ ಬಿ.ವೈ.ರಾಘವೇಂದ್ರ ಅವರ ಬದಲಿಗೆ ಅವರ ತಂದೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಅದೇ ರೀತಿ ಕೊಪ್ಪಳ ಕ್ಷೇತ್ರದಲ್ಲಿ ಶಿವರಾಮೆಗೌಡ ಅವರ ಬದಲಿಗೆ ಮಾಜಿ ಶಾಸಕ ಕರಡಿ ಸಂಗಣ್ಣ ಅವರಿಗೆ ಹಾಗೂ ರಾಯಚೂರು ಕ್ಷೇತ್ರದಲ್ಲಿ ಸಣ್ಣಫಕೀರಪ್ಪ ಅವರ ಬದಲಿಗೆ ಮಾಜಿ ಸಚಿವ ಶಿವನಗೌಡ ನಾಯಕ್ ಅವರಿಗೆ ಟಿಕೆಟ್ ನೀಡಲಾಗಿದೆ.

ತುಮಕೂರು, ಚಿಕ್ಕಮಗಳೂರು-ಉಡುಪಿ ಸೇರಿದಂತೆ ಸುಮಾರು ಎಂಟು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕೆಲವು ಗೊಂದಲಗಳಿದ್ದು, ಇನ್ನು ಎರಡು ಮೂರು ದಿನದಲ್ಲಿ ಈ ಎಲ್ಲ ಗೊಂದಲಗಳಿಗೆ ಪರಿಹಾರ ಕಂಡುಕೊಂಡು, ಎರಡನೇ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಬಿಜೆಪಿ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳು

ಬೆಂಗಳೂರು ದಕ್ಷಿಣ-ಎಚ್.ಎನ್.ಆನಂತ್‌ಕುಮಾರ್
ಬೆಂಗಳೂರು ಉತ್ತರ- ಡಿ.ವಿ.ಸದಾನಂದಗೌಡ
ಬೆಂಗಳೂರು ಕೇಂದ್ರ- ಪಿ.ಸಿ.ಮೋಹನ್
ಬೆಂಗಳೂರು ಗ್ರಾಮಾಂತರ- ಸಿ.ಮುನಿರಾಜು
ಶಿವಮೊಗ್ಗ- ಬಿ.ಎಸ್.ಯಡಿಯೂರಪ್ಪ
ದಕ್ಷಿಣ ಕನ್ನಡ- ನಳಿನ್ ಕುಮಾರ್ ಕಟೀಲು
ಕೊಪ್ಪಳ- ಸಂಗಣ್ಣ ಕರಡಿ
ಗುಲ್ಬರ್ಗಾ- ರೇವುನಾಯಕ್ ಬೆಳಮಗಿ
ಬೆಳಗಾವಿ- ಸುರೇಶ್ ಅಂಗಡಿ
ಚಿಕ್ಕೋಡಿ- ರಮೇಶ್ ಕತ್ತಿ
ಧಾರವಾಡ- ಪ್ರಹ್ಲಾದ್ ಜೋಶಿ
ಬಾಗಲಕೋಟೆ- ಗದ್ದಿಗೌಡರ
ದಾವಣಗೆರೆ- ಜಿ.ಎಂ.ಸಿದ್ದೇಶ್
ಚಿತ್ರದುರ್ಗ-ಜನಾರ್ಧನ್ ಸ್ವಾಮಿ
ಚಾಮರಾಜನಗರ- ಎ.ಕೃಷ್ಣಮೂರ್ತಿ
ಹಾವೇರಿ- ಶಿವಕುಮಾರ್ ಉದಾಸಿ
ಬಿಜಾಪುರ- ರಮೇಶ್ ಜಿಗಜಿಣಗಿ
ಚಿಕ್ಕಬಳ್ಳಾಪುರ- ಬಿ.ಎನ್.ಬಚ್ಚೇಗೌಡ
ಉತ್ತರ ಕನ್ನಡ- ಅನಂತಕುಮಾರ್ ಹೆಗಡೆ
ರಾಯಚೂರು- ಶಿವನಗೌಡ ನಾಯಕ್

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English