ಬಿಜೆಪಿಯಲ್ಲಿ ಟಿಕೆಟ್ ಗೊಂದಲ ಮೋದಿ ಪಾಲಿಗೆ ವಾರಣಸಿ ಪಕ್ಕಾ ಅಟಲ್‌ರ ಲಖನೌ ಲಕ್ ಯಾರಿಗೆ?

10:04 AM, Monday, March 10th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Murli-Manohar-Joshiನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಉತ್ತರಪ್ರದೇಶದ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸುವ ಬಗೆಗಿನ ಗೊಂದಲಗಳಿಗೆ ಭಾನುವಾರ ಬಹುತೇಕ ತೆರೆ ಬಿದ್ದಿದೆ. ಕೇಂದ್ರದ ಮಾಜಿ ಸಚಿವ, ಹಾಲಿ ಸಂಸದ ಡಾ. ಮುರಳಿ ಮನೋಹರ ಜೋಶಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ಪಕ್ಷದ ವರಿಷ್ಠರು ಯಾವುದೇ ನಿರ್ಧಾರ ಕೈಗೊಂಡರೂ ಅದನ್ನು ನಾನು ಪಾಲಿಸುತ್ತೇನೆ’ ಎಂದು ಅವರು ನವದೆಹಲಿಯಲ್ಲಿ ತಿಳಿಸಿದ್ದಾರೆ.

13ರ ಸಭೆಯಲ್ಲಿ ನಿರ್ಧಾರ: ಮಾ.13ರಂದು ನವದೆಹಲಿಯಲ್ಲಿ ಬಿಜೆಪಿಯ ಕೇಂದ್ರೀಯ ಚುನಾವಣಾ ಸಮಿತಿ ಸಭೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.  ‘ನಾನು ಪಕ್ಷದ ಶಿಸ್ತಿನ ಸಿಪಾಯಿ. ನನ್ನ ನಾಯಕರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಅದನ್ನು ನಾನು ನಿಷ್ಠೆಯಿಂದ ಪಾಲಿಸುತ್ತೇನೆ’ ಎಂದು ಹೇಳುವ ಮೂಲಕ ನರೇಂದ್ರ ಮೋದಿ ಸ್ಪರ್ಧೆಗೆ ಎದುರಾಗಿದೆ ಎಂದು ಹೇಳಲಾಗಿದ್ದ ವಿವಾದಕ್ಕೆ ತೆರೆ ಎಳೆಯಲು ಡಾ.ಮುರಳಿ ಮನೋಹರ ಜೋಶಿ ಮುಂದಾಗಿದ್ದಾರೆ.

ಎಲ್ಲ ಮಾಧ್ಯಮಗಳದ್ದೇ ಸೃಷ್ಟಿ: ವಾರಾಣಸಿ ಕ್ಷೇತ್ರದಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಬಗ್ಗೆ  ಬಿಜೆಪಿಯಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ. ಈ ಬಗ್ಗೆ ಕೆಲ ಮಾಧ್ಯಮಗಳ ವರದಿಯಲ್ಲಿ ಸತ್ಯಾಂಶಗಳಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಎಲ್ಲ ವಿಚಾರಗಳೂ ಮಾಧ್ಯಮಗಳದ್ದೇ ಸೃಷ್ಟಿ ಎಂದು ಡಾ.ಜೋಶಿ ಸ್ಪಷ್ಟನೆ ನೀಡಿದ್ದಾರೆ.

ಇದೇ ವಿವಾದದ ಬಗ್ಗೆ ಮಧ್ಯಪ್ರದೇಶದ ವಿದಿಶಾದಲ್ಲಿ ಸ್ಪಷ್ಟನೆ ನೀಡಿರುವ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಸ್ಪರ್ಧೆ ವಿಚಾರಕ್ಕೆ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಮೋದಿಗಾದರೆ ಬಿಟ್ಟು ಕೊಡುವೆ: ಪ್ರತಿಷ್ಠಿತ ಲಖನೌ ಕ್ಷೇತ್ರದಿಂದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸ್ಪರ್ಧಿಸುವುದಾದರೆ ಮಾತ್ರ ತಾವು ಸ್ಥಾನ ತೆರವುಗೊಳಿಸುವುದಾಗಿ ಹಾಲಿ ಸಂಸದ ಮತ್ತು ವಾಜಪೇಯಿ ಅವರ ನಿಕಟವರ್ತಿ ಲಾಲ್‌ಜಿ ಟಂಡನ್ ಪ್ರಕಟಿಸಿದ್ದಾರೆ. ಇದೇ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಕೂಡ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ಮೋದಿಗೆ ಎಂಎನ್‌ಎಸ್ ಬೆಂಬಲ: ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಹೊಸ ಮಿತ್ರ ಪಕ್ಷವೊಂದು ದೊರಕಲಿದೆಯೇ? ಅಂಥದ್ದೊಂದು ಬೆಳವಣಿಗೆಗೆ ಭಾನುವಾರ ಪುಷ್ಟಿ ದೊರಕಿದೆ. ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ ಎಸ್) ನಾಯಕ ರಾಜ್ ಠಾಕ್ರೆ ಮೋದಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸ್ಪರ್ಧೆ ಹಾಗೂ ಬಿಜೆಪಿಯ ಆಂತರಿಕ ಭಿನ್ನಾಭಿಪ್ರಾಯ ಕುರಿತಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಹಾಗೂ ಸರಸಂಘ ಚಾಲಕ ಮೋಹನ್ ಭಾಗವತ್ ಮಹತ್ವದ ಚರ್ಚೆ ನಡೆಸಿದ್ದಾರೆ. ಆರ್‌ಎಸ್‌ಎಸ್‌ನ ರಾಷ್ಟ್ರೀಯ ಪ್ರತಿನಿಧಿಗಳ ಸಭೆ ಮುಕ್ತಾಯಗೊಂಡ ಬಳಿಕ ಮೋಹನ್ ಭಾಗವತ್ ಹಾಗೂ ರಾಜನಾಥ್ ಸಿಂಗ್ ಅವರು ಸುಮಾರು ಒಂದು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದರು. ಲೋಕಸಭೆ ಚುನಾವಣೆ, ಟಿಕೆಟ್ ಹಂಚಿಕೆ ಹಾಗೂ ಹಿರಿಯ ನಾಯಕರ ಕ್ಷೇತ್ರ ಕುರಿತಂತೆ ಪ್ರಮುಖವಾಗಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಉತ್ತರ ಪ್ರದೇಶದ ವಾರಾಣಸಿಯಿಂದ ನರೇಂದ್ರ ಮೋದಿ ಸ್ಪರ್ಧೆ, ಹಿರಿಯ ನಾಯಕರ ಅಸಮಾಧಾನ ಕುರಿತಂತೆ ಚರ್ಚೆ ನಡೆಸಲಾಗಿದೆ. ಹಿರಿಯ ನಾಯಕರ ಅಸಮಾಧಾನವನ್ನು ತಿಳಿಗೊಳಿಸಲು ಮಧ್ಯಪ್ರವೇಶಿಸುವಂತೆ ಆರ್‌ಎಸ್‌ಎಸ್ ಮುಖಂಡರಲ್ಲಿ ಕೋರಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English