ರಾಹುಲ್, ಕೇಜ್ರಿ ವಿರುದ್ಧ ದೂರು

11:40 AM, Monday, March 10th, 2014
Share
1 Star2 Stars3 Stars4 Stars5 Stars
(4 rating, 6 votes)
Loading...

Rahul-Gandhiನವದೆಹಲಿ: ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್ ವಿರುದ್ಧ ಭಾನುವಾರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.

ಆರ್‌ಎಸ್‌ಎಸ್ ಕಾರ್ಯಕರ್ತರಿಂದಲೇ ಮಹಾತ್ಮಾ ಗಾಂಧಿ ಹತ್ಯೆಯಾಯಿತು ಎಂಬ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪದಿಂದ ಕ್ರುದ್ಧಗೊಂಡಿರುವ ಬಿಜೆಪಿ ಅವರ ವಿರುದ್ಧ ಆಯೋಗಕ್ಕೆ ದೂರು ನೀಡಿದೆ. ಮಾತ್ರವಲ್ಲ ಕಾಂಗ್ರೆಸ್‌ನ ಮಾನ್ಯತೆ ರದ್ದುಮಾಡುವಂತೆ ಒತ್ತಾಯಿಸಿದೆ. ಕಾಂಗ್ರೆಸ್ ನಾಯಕ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ದೂರು ಸಲ್ಲಿಸಲಾಗಿದೆ ಎಂದು ಪಕ್ಷದ ವಕ್ತಾರ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ.

ಪದೇ ಪದೆ ಆರೋಪ: ಚುನಾವಣೆಗಳು ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೋಮು ಭಾವನೆಗಳನ್ನು ಕೆರಳಿಸುವಂಥ ಭಾಷಣ ಮಾಡುತ್ತಾರೆ. ಇದು ಅವರಿಗೆ ಅಭ್ಯಾಸವಾಗಿ ಹೋಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ನಖ್ವಿ ಹೇಳಿದ್ದಾರೆ. ರಾಹುಲ್ ತಮ್ಮ ಭಾಷಣದ ಮೂಲಕ ಜನರಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡುವೆ ದ್ವೇಷ ಭಾವನೆ ಮೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ನಖ್ವಿ ದೂರಿದ್ದಾರೆ.

ಕೇಜ್ರಿವಾಲ್ ವಿರುದ್ಧವೂ ದೂರು: ಪ್ರತಿಸ್ಪರ್ಧಿ ಅಭ್ಯರ್ಥಿಗಳನ್ನು ‘ಖರೀದಿಸುವ’ ಅಥವಾ ‘ಕೊಲ್ಲುವ’ ಮೂಲಕ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ 3 ವಿಧಾನಸಭಾ ಚುನಾವಣೆಗಳಲ್ಲಿ  ಜಯ ಸಾಧಿಸಿದ್ದರು ಎಂಬ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿಕೆ ವಿರುದ್ಧವೂ ಗುಜರಾತ್‌ನ ಬಿಜೆಪಿ ಘಟಕ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ದೆಹಲಿಯ ಮಾಜಿ ಸಿಎಂ ಹೇಳಿಕೆ ಅಸಂಸದೀಯವಾಗಿದೆ ಮಾತ್ರವಲ್ಲ ಕಾನೂನಿನ ಉಲ್ಲಂಘನೆ ಎಂದು ಗುಜರಾತ್ ಬಿಜೆಪಿ ಆರೋಪಿಸಿದೆ.

ಕಾಂಗ್ರೆಸ್‌ಗೆ ರಾಜಿನಾಮೆ ನೀಡಿರುವ ಕೇಂದ್ರದ ಮಾಜಿ ಸಚಿವ ವಿನೋದ್ ಶರ್ಮಾ ಬಿಜೆಪಿಗೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪೂರಕವಾಗಿ ಭಾನುವಾರ ಮಾತನಾಡಿದ ಅವರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಮತ್ತು ನಾಯಕತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಮೋದಿ ನೇತೃತ್ವದಲ್ಲಿನ ಸರ್ಕಾರದಿಂದಾಗಿ ದೇಶ ಅಭಿವೃದ್ಧಿಯತ್ತ ಸಾಗಲಿದೆ ಎಂದು ಕೊಂಡಾಡಿದ್ದಾರೆ. ಆದರೆ ಶರ್ಮಾ ಉತ್ಸಾಹಕ್ಕೆ ಬಿಜೆಪಿಯ ಹರ್ಯಾಣ ಘಟಕ ವಿರೋಧ ವ್ಯಕ್ತಪಡಿಸಿದೆ. ಅವರೊಬ್ಬ ಅವಕಾಶವಾದಿ ಎಂದು ಬಿಜೆಪಿ  ನಾಯಕ ರಾಮ್ ಬಿಲಾಸ್ ಶರ್ಮಾ ತಿಳಿಸಿದ್ದಾರೆ.

ಉತ್ತರಾಖಂಡ ಬಿಜೆಪಿಯಲ್ಲಿ ಒಡಕು ಮೂಡಿದ್ದು, ಹಿರಿಯ ಮುಖಂಡ ಬಚಿ ಸಿಂಗ್ ರಾವತ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ. ಲೋಕಸಭೆ ಚುನಾವಣೆಗಾಗಿ ಉತ್ತರಾಖಂಡದಿಂದ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಿಂದ ಅವರ ಹೆಸರು ಪರಿಗಣನೆ ಮಾಡದೇ ಇರುವುದರಿಂದ ಕ್ರುದ್ಧರಾಗಿರುವ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಈ ಮಾಹಿತಿ ಅವರು ಖಚಿತಪಡಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English