ಯೋಗೇಶ್ವರ್ ಕಾಂಗ್ರೆಸ್ ಗೆ ಸೇರ್ಪಡೆ

12:49 PM, Wednesday, March 12th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

CP-Yogeshwarನವದೆಹಲಿ: ಚನ್ನಪಟ್ಟಣ ಕ್ಷೇತ್ರದ ಸಮಾಜವಾದಿ ಪಕ್ಷದ ಏಕೈಕ ಶಾಸಕ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮಂಗಳವಾರ ಎಐಸಿಸಿ ಯೋಗೇಶ್ವರ್ಗೆ ಹಸಿರು ನಿಶಾನೆ ನೀಡಿದೆ. ತಕ್ಷಣಕ್ಕೆ ಜಾರಿಗೆ ಬರುವಂತೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ.

ಲೋಕಸಭಾ ಉಪ ಚುನಾವಣೆ ವೇಳೆ ಪರೋಕ್ಷವಾಗಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯೊಂದಿಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣಾ ಲೆಕ್ಕಾಚಾರಗಳು ಬದಲಾಗಿವೆ. ಜೆಡಿಎಸ್ ವಶದಲ್ಲಿದ್ದ ಆ ಕ್ಷೇತ್ರವನ್ನು ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಶಪಡಿಸಿಕೊಂಡಿತ್ತು. ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದರು. ಈಗ ಮತ್ತೆ ಡಿ.ಕೆ.ಸುರೇಶ್ ಕಾಂಗ್ರೆಸ್ ಅಭ್ಯರ್ಥಿ. ಬದ್ಧವೈರಿಗಳಾಗಿದ್ದ ಡಿ.ಕೆ. ಶಿವಕುಮಾರ್ ಹಾಗೂ ಸಿ.ಪಿ. ಯೋಗೇಶ್ವರ್ ನಡುವೆ ದೋಸ್ತಿ ಆಗಿರುವುದರಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಲೆಕ್ಕಾಚಾರಗಳು ಬದಲಾಗಿವೆ.

ಬಿಜೆಪಿಯಲ್ಲಿ ಸಚಿವರಾಗದ್ದ ಸಿ.ಪಿ. ಯೋಗೇಶ್ವರ್ ಕಳೆದ ವಿಧಾನಸಭಾ ಚುನಾವಣಾ ವೇಳೆ ಕಾಂಗ್ರೆಸ್ ಕದ ತಟ್ಟಿ ವಿಫಲರಾಗಿ ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದು ಗೆದ್ದಿದ್ದರು. ಎಚ್.ಡಿ.ಕುಮಾರಸ್ವಾಮಿ ಅವರು ವಿಧಾನಸಭೆ ಪ್ರವೇಶಿಸಿದ್ದರಿಂದ ತೆರವಾಗಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ವೇಳೆ ಡಿ.ಕೆ.ಶಿವಕುಮಾರ್ ಅವರು ಯೋಗೇಶ್ವರ್ ಜತೆ ಸಂಧಾನ ನಡೆಸಿ ಬೆಂಬಲ ಗಳಿಸಿ ಕ್ಷೇತ್ರವನ್ನು ಜೆಡ್ನಿಂದ ಕಸಿದುಕೊಂಡಿದ್ದರು.

ಸಮಾಜವಾದಿ ಪಕ್ಷ ಸೇರಿದ್ದ ಸಿ.ಪಿ. ಯೋಗೇಶ್ವರ್ ಮಾಜಿ ಪೊಲೀಸ್ ಅಧಿಕಾರಿ ಶಂಕರ ಬಿದರಿ, ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಕರೆತಂದು ಅವರ ಹಾದಿ ತಪ್ಪಿಸಿದ್ದರು. ಇಬ್ಬರೂ ತಿಂಗಳು ಮೀರಿ ಸಮಾಜವಾದಿ ಪಕ್ಷದಲ್ಲಿ ಉಳಿಯಲಿಲ್ಲ. ಈಗ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯೊಂದಿಗೆ ಕರ್ನಾಟಕ ಸಮಾಜವಾದಿ ಪಕ್ಷ ನಿಜವಾದ ಅರ್ಥದಲ್ಲಿ ಅನಾಥವಾಗಿದೆ. ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳಲು ತಾವೇ ಖುದ್ದು ಕಣಕ್ಕಿಳಿಯಲು ಚಿಂತಿಸುತ್ತಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English