ನಕ್ಸಲ್ ರಕ್ತದೋಕುಳಿ 20 ಯೋಧರ ಹತ್ಯೆ

2:52 PM, Wednesday, March 12th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Naxalನವದೆಹಲಿ: ಛತ್ತೀಸ್‌ಗಡದಲ್ಲಿ ನಕ್ಸಲೀಯರು ಮತ್ತೆ ರಕ್ತದೋಕುಳಿ ಹರಿಸಿದ್ದಾರೆ. ಕೆಂಪು ಉಗ್ರರು ನಡೆಸಿದ ದಾಳಿಗೆ 20 ಮಂದಿ ಭದ್ರತಾ ಸಿಬ್ಬಂದಿ ಬಲಿಯಾಗಿದ್ದಾರೆ. ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯ ದಟ್ಟ ಅರಣ್ಯದಲ್ಲಿ ಮಂಗಳವಾರ ಈ ದುರ್ಘಟನೆ ನಡೆದಿದೆ.  ಬೆಳಗ್ಗೆ 10.30ರ ವೇಳೆಗೆ ನಕ್ಸಲರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 15 ಮಂದಿ ಸಿಆರ್‌ಪಿಎಫ್ ಯೋಧರು ಹಾಗೂ 5 ಮಂದಿ ಪೊಲೀಸರು ಸಾವಿಗೀಡಾಗಿದ್ದಾರೆ. ಕೆಲವು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಕ್ಸಲರ ಪ್ರಾಣಹಾನಿ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ.

ಭದ್ರತಾ ಪಡೆಗಳ ವಾಹನಗಳು ಸಂಚರಿಸಲು ಅನುಕೂಲವಾಗುವಂತೆ ಅರಣ್ಯದ ಟಾಂಗ್‌ಪಾಲ್‌ನಲ್ಲಿ ರಸ್ತೆ ನಿರ್ಮಿಸುವ ಜವಾಬ್ದಾರಿಯನ್ನು ಸಿಬ್ಬಂದಿಗೆ ವಹಿಸಲಾಗಿತ್ತು. ಅದರಂತೆ, ಬೆಳಗ್ಗೆ 9ಕ್ಕೆ  30 ಸಿಆರ್‌ಪಿಎಫ್ ಯೋಧರು, 14 ಮಂದಿ ಪೊಲೀಸರು ಸೇರಿದಂತೆ ಒಟ್ಟು 44 ಮಂದಿ ಭದ್ರತಾ ಸಿಬ್ಬಂದಿ ಕೆಲಸ ಆರಂಭಿಸಿದ್ದರು. ಅವರು ಮುಂದಕ್ಕೆ ಸಾಗುತ್ತಿದ್ದಂತೆಯೇ 200ರಷ್ಟಿದ್ದ ಶಸ್ತ್ರಸಜ್ಜಿತ ನಕ್ಸಲರು  ಸುತ್ತುವರಿದರು. ನಂತರ ಒಂದೇ ಸಮನೆ ಗುಂಡಿನ ಸುರಿಮಳೆಗೈದರು. ಜತೆಗೆ ನೆಲಬಾಂಬ್‌ಗಳನ್ನೂ ಸ್ಫೋಟಿಸಿದರು. ಯೋಧರೂ ಪ್ರತಿದಾಳಿ ನಡೆಸಿದರು. ಸುಮಾರು 30 ನಿಮಿಷಗಳವರೆಗೆ ಗುಂಡಿನ ಚಕಮಕಿ ನಡೆಯಿತು.

2010ರ ಏಪ್ರಿಲ್ ತಿಂಗಳಲ್ಲಿ ಇದೇ ಪ್ರದೇಶದಲ್ಲಿ ನಕ್ಸಲೀಯರು 76 ಮಂದಿ ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದಿದ್ದರು. 2010ರ ಮೇನಲ್ಲಿ ದಂತೇವಾಡದಲ್ಲಿ ಬಸ್‌ನಲ್ಲಿ ತೆರಳುತ್ತಿದ್ದ ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದ ನಕ್ಸಲರು 40ರಷ್ಟು ಪೊಲೀಸರನ್ನು ಕೊಂದುಹಾಕಿದ್ದರು.  ಸುಕ್ಮಾದ ಜೀರಂ ಘಾಟಿ ಎಂಬಲ್ಲಿ ಕಳೆದ ವರ್ಷದ ಮೇನಲ್ಲಿ  ಕಾಂಗ್ರೆಸ್ ಮುಖಂಡರ ಮೇಲೆ ನಕ್ಸಲರು ದಾಳಿ ನಡೆಸಿದ್ದರು.

ಘಟನೆಯನ್ನು ನಾವು ಖಂಡಿಸುತ್ತೇವೆ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ನಾವು ಮಾವೋವಾದಿಗಳನ್ನು ನೇರವಾಗಿ ಎದುರಿಸುತ್ತೇವೆ. ಇಂತಹ ಘಟನೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.

ಈ ದುರದೃಷ್ಟಕರ ಘಟನೆಯನ್ನು ನಾವು ಖಂಡಿಸುತ್ತೇವೆ. ಲೋಕಸಭೆ ಚುನಾವಣೆ ಮೇಲೆ ಪ್ರಭಾವ ಬೀರಲೆಂದು ನಕ್ಸಲೀಯರು ಇಂತಹ ದಾಳಿ ನಡೆಸುತ್ತಿದ್ದಾರೆ. ಈ ಹಿಂದೆಯೂ ಅವರು ಹೀಗೇ ಮಾಡಿದ್ದರು. ಆದರೆ ಇಂತಹ ಪ್ರಯತ್ನದಲ್ಲಿ ಅವರು ಯಶ ಕಾಣಲು ಸಾಧ್ಯವೇ ಇಲ್ಲ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English