ಪ್ರತಾಪ್, ಶೋಭಾ ಸೇರಿ 5 ಮಂದಿಗೆ ಟಿಕೆಟ್ ಫೈನಲ್

11:24 AM, Thursday, March 13th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

BJPಬೆಂಗಳೂರು: ಅಂಕಣಕಾರ ಪ್ರತಾಪ್ ಸಿಂಹ ಸೇರಿದಂತೆ ಐವರು ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಬುಧವಾರ ಅಂತಿಮಗೊಳಿಸಿದ್ದು, 3 ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ದಿಲ್ಲಿ ನಾಯಕರ ಅಂಗಳ ತಲುಪಿದೆ.

ಬೀದರ್, ತುಮಕೂರು ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ದಿಲ್ಲಿಯಲ್ಲೇ ಆಗಲಿದೆ. ಗುರುವಾರ ಮಧ್ಯಾಹ್ನ ನಡೆಯುವ ಸಮಿತಿ ಸಭೆಯಲ್ಲಿ ಎಲ್ಲ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಅಧಿಕೃತವಾಗಿ ಹೊರಬೀಳಲಿದೆ. ಇದೇ ಸಂದರ್ಭದಲ್ಲಿ ಬಿಎಸ್‌ಆರ್ ವಿಲೀನ ಪ್ರಕ್ರಿಯೆ ಕುರಿತಂತೆಯೂ ಅಂತಿಮ ನಿರ್ಣಯವಾಗಲಿದೆ. ಬೆಂಗಳೂರಿನಲ್ಲಿ ಬುಧವಾರ ನಡೆದ ರಾಜ್ಯ ಕಾರ್ಯಕಾರಿಣಿಯಲ್ಲಿ ಮೈಸೂರು, ಉಡುಪಿ-ಚಿಕ್ಕಮಗಳೂರು, ಹಾಸನ, ಕೋಲಾರ ಹಾಗೂ ಮಂಡ್ಯ ಲೋಕಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಸೂಚಿಸಿ ಕೇಂದ್ರ ಚುನಾವಣೆ ಸಮಿತಿಗೆ ಕಳುಹಿಸಿಕೊಡಲಾಗಿದೆ.

ಮೈಸೂರು ಕ್ಷೇತ್ರದಿಂದ ‘ಕನ್ನಡಪ್ರಭ’ದ ಅಂಕಣಕಾರ ಪ್ರತಾಪ್ ಸಿಂಹ, ಉಡುಪಿ-ಚಿಕ್ಕಮಗಳೂರಿನಿಂದ ಶೋಭಾ ಕರಂದ್ಲಾಜೆ ಅವರ ಹೆಸರು ಅಂತಿಮಗೊಳಿಸಲಾಗಿದೆ. ಮೊದಲ ಹಂತದಲ್ಲಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿತ್ತು. ಆದರೆ ಉಳಿದ 8 ಕ್ಷೇತ್ರಗಳು ಬಿಜೆಪಿ ನಾಯಕರಿಗೆ ಕಗ್ಗಂಟಾಗಿ ಪರಿಣಮಿಸಿತ್ತು. ಇದರಲ್ಲಿ 5 ಸೀಟುಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ನಾಯಕರು ಯಶಸ್ವಿಯಾಗಿದ್ದಾರೆ.

ಅರ್ಧ ಗೆಲವು ಸಾಧಿಸಿದ ಬಿಎಸ್‌ವೈ: ಉಡುಪಿ-ಚಿಕ್ಕಮಗಳೂರು, ಬೀದರ್ ಹಾಗೂ ತುಮಕೂರು ಕ್ಷೇತ್ರಗಳಿಗೆ ತಾನು ಸೂಚಿಸಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂದು ಹಠ ಹಿಡಿದಿದ್ದ ಯಡಿಯೂರಪ್ಪ ಅರ್ಧ ಗೆಲವು ಸಾಧಿಸಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ತಮ್ಮ ಆಪ್ತೆ ಶೋಭಾ ಕರಂದ್ಲಾಜೆ ಅವರ ಹೆಸರನ್ನು ಅಂತಿಮಗೊಳಿಸಲು ಯಶಸ್ವಿಯಾಗಿದ್ದಾರೆ. ಆದರೆ ಬೀದರ್ ಹಾಗೂ ತುಮಕೂರು ಕ್ಷೇತ್ರದ ಗಲಾಟೆ ಮುಂದುವರಿದಿದ್ದು, ಬಿಎಸ್‌ವೈ ಹಠಕ್ಕೆ ಮಾನ್ಯತೆ ನೀಡಲು ಆರ್‌ಎಸ್‌ಎಸ್ ನಾಯಕರು ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಒಪ್ಪುತ್ತಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ ತುಮಕೂರು ಹಾಗೂ ಬೀದರ್ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಯ ಜವಾಬ್ದಾರಿಯನ್ನು ಕೇಂದ್ರ ಚುನಾವಣೆ ಸಮಿತಿಗೆ ನೀಡಲಾಗಿದೆ. ತುಮಕೂರಿನಿಂದ ಜಿ.ಎಸ್.ಬಸವರಾಜ್ ಹಾಗೂ ಬೀದರ್‌ನಿಂದ ಗುರುಪಾದಪ್ಪ ನಾಗಮಾರಪಲ್ಲಿ ಅವರ ಪುತ್ರನಿಗೆ ಟಿಕೆಟ್ ನೀಡಬೇಕು ಎನ್ನುವುದು ಯಡಿಯೂರಪ್ಪ ಅವರ ಹಠವಾಗಿದೆ. ಆದರೆ ಇವೆರಡು ಕ್ಷೇತ್ರಗಳಲ್ಲಿ ಬೇರೊಂದು ಅಭ್ಯರ್ಥಿಯ ಆಯ್ಕೆಗೆ ಬಿಜೆಪಿಯ ಇತರ ಮುಖಂಡರು ಒಲವು ತೋರಿಸಿದ್ದಾರೆ. ಇನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಬಿಜೆಪಿಯಲ್ಲಿ ಬಿಎಸ್‌ಆರ್ ವಿಲೀನದ ಮೇಲೆ ಅವಲಂಬಿಸಿದೆ. ವಿಲೀನವಾದರೆ ಮಾಜಿ ಸಚಿವ ಬಿ.ಶ್ರೀರಾಮುಲು ಅವರೆ ಬಿಜೆಪಿಯ ಅಭ್ಯರ್ಥಿಯಾಗಲಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English