ಲೋಕಸಮರ: ಚಿಕ್ಕಬಳ್ಳಾಪುರದ ಮೇಲೆ ರಾಹುಲ್ ಕಣ್ಣು

2:59 PM, Thursday, March 13th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Rahul-Gandhiಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದ್ದು, ಇದು ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಉಂಟು ಮಾಡಿದೆ.

ರಾಹುಲ್ ಗಾಂಧಿ ಅವರು ತಮ್ಮ ಸ್ವಕ್ಷೇತ್ರ ಉತ್ತರ ಪ್ರದೇಶ ಅಮೇಥಿಯ ಜತೆಗೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದಲೂ ಸ್ಪರ್ಧಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದು, ಈ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡರ ಜತೆ ಈಗಾಗಲೇ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.

ಚಿಕ್ಕಬಳ್ಳಾಪುರದಿಂದ ರಾಹುಲ್ ಗಾಂಧಿ ಸ್ಪರ್ಧೆಗೆ ರಾಜ್ಯ ಕಾಂಗ್ರೆಸ್ ಮುಖಂಡರೂ ಸಹ ಬೆಂಬಲ ಸೂಚಿಸಿದ್ದಾರೆ. ಒಂದು ವೇಳೆ ರಾಹುಲ್ ಗಾಂಧಿ ಅವರು ಕರ್ನಾಟಕದಿಂದ ಸ್ಪರ್ಧಿಸಿದರೆ ರಾಜ್ಯದ ಇತರೆ ಕ್ಷೇತ್ರಗಳಲ್ಲೂ ಪಕ್ಷಕ್ಕೆ ಪೂರಕವಾದ ವಾತಾವರಣ ಸೃಷ್ಟಿಯಾಗಲಿದೆ ಎಂಬುದು ಕಾಂಗ್ರೆಸ್ ಮುಖಂಡರ ಅಭಿಪ್ರಾಯವಾಗಿದೆ. ಅಲ್ಲದೆ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವಂತೆ ರಾಹುಲ್ ಗಾಂಧಿಗೆ ಸ್ವತಃ ಪ್ರಸ್ತುತ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಅವರೇ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.

ಈ ಬಾರಿ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರು ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದಿಂದ ಪ್ರಬಲ ಸ್ಪರ್ಧೆಯನ್ನು ಎದುರಿಸಬೇಕಾಗಿದ್ದು, ಮುಂಜಾಗೃತಾ ಕ್ರಮವಾಗಿ ಚಿಕ್ಕಬಳ್ಳಾಪುರದಿಂದಲೂ ಸ್ಪರ್ಧಿಸುವುದು ಸೂಕ್ತ ಎಂದು ರಾಹುಲ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವೀರಪ್ಪ ಮೊಯಿಲಿ ಅವರೇ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ಪ್ರಕಟಿಸಿರುವ ಮೊದಲ ಪಟ್ಟಿಯಲ್ಲಿ ಮೊಯಿಲಿ ಅವರ ಹೆಸರಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಚಿಕ್ಕಬಳ್ಳಾಪುರದಿಂದ ರಾಹುಲ್ ಗಾಂಧಿ ಸ್ಪರ್ಧಿಸುವ ಸಾಧ್ಯತೆ ಬಗ್ಗೆ ಈಗಾಗಲೇ ಮುನ್ಸೂಚನೆ ಪಡೆದಿರುವ ಬಿಜೆಪಿ ಮತ್ತು ಜೆಡಿಎಸ್ ಪ್ರತಿ ರಣತಂತ್ರ  ರೂಪಿಸಲು ಮುಂದಾಗಿವೆ. ಚಿಕ್ಕಬಳ್ಳಾಪುರದಿಂದ ರಾಹುಲ್ ಗಾಂಧಿ ಅವರು ಸ್ಪರ್ಧಿಸಿದ್ದೇಯಾದರೆ ಅವರ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿ ತಾವೇ ಸ್ಪರ್ಧಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ. ಇನ್ನು ಬಿಜೆಪಿ ಈ ಕ್ಷೇತ್ರದಲ್ಲಿ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಅವರನ್ನು ಅಭ್ಯರ್ಥಿ ಎಂದು ಪ್ರಕಟಿಸಿದ್ದರೂ, ಕೊನೆ ಕ್ಷಣದಲ್ಲಿ ಅಭ್ಯರ್ಥಿಯನ್ನು ಬದಲಿಸುವ ಸಾಧ್ಯತೆ ಇದೆ.

ಕಾಂಗ್ರೆಸ್ ಪ್ರಕಟಿಸಿರುವ ಮೊದಲ ಪಟ್ಟಿಯಲ್ಲಿ ವೀರಪ್ಪ ಮೊಯಿಲಿ ಅವರ ಹೆಸರು ಇಲ್ಲದೇ ಇರುವುದು ಹಲವಾರು ರೀತಿಯ ಉಹಾಪೋಹಗಳಿಗೆ ಕಾರಣವಾಗಿದೆ. ತೆಲುಗು ಸೂಪರ್ ಸ್ಟಾರ್ ಹಾಗೂ ಕೇಂದ್ರ ಸಚಿವ ಚಿರಂಜೀವಿ ಅವರು ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂಬ ಸುದ್ದಿಯೂ ಹರಿದಾಡುತ್ತಿವೆ.

ಒಂದು ವೇಳೆ ರಾಹುಲ್ ಗಾಂಧಿ ಅವರು ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಿದ್ದೇಯಾದರೆ, ಕರ್ನಾಟಕದಿಂದ ಸ್ಪರ್ಧಿಸಲಿರುವ ನೆಹರು ಕುಟುಂಬದ ಮೂರನೇ ವ್ಯಕ್ತಿಯಾಗಲಿದ್ದಾರೆ. ಈ ಹಿಂದೆ 1978ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಹಾಗೂ 1999ರಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸ್ಪರ್ಧಿಸಿ ಜಯ ಗಳಿಸಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English