ಮಂಗಳೂರು ಜ.5 : ಪೋಲಿಯೋದಂತಹ ಮಾರಕ ರೋಗ ನಿರ್ಮೂಲನೆಗೆ ಅವಿರತ ಪರಿಶ್ರಮದ ಅಗತ್ಯವಿದೆ. 2007ರಲ್ಲಿ ಬೆಂಗಳೂರಿನಲ್ಲಿ ಪೋಲಿಯೋ ಪತ್ತೆಯಾಗಿತ್ತು. ಬಳಿಕ ಇದುವರೆಗೆ ರಾಜ್ಯದಲ್ಲಿ ಪೋಲಿಯೋ ಪ್ರಕರಣ ವರದಿಯಾಗಿಲ್ಲ ಎಂದು ಡಾ ಸತೀಶ್ ಚಂದ್ರ ವಿವರಿಸಿದರು.
ಇಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಮಾಹಿತಿ ನೀಡಿದ ಪಲ್ಸ್ ಪೋಲಿಯೋ ಕಾರ್ಯಕ್ರಮದ ಉಸ್ತುವಾರಿ ಡಾಕ್ಟರ್ ಸತೀಶ್ ಚಂದ್ರ ಅವರು ಇದುವರೆಗಿನ ಅಂಕಿ ಅಂಶ ಹಾಗೂ ಮಾಹಿತಿ ನೀಡಿದರು. 2011 ಜನವರಿ ದ್ವಿತೀಯ ಸುತ್ತಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಜನವರಿ 23ರಂದು ಮತ್ತು ನಂತರದ ಎರಡು ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ವಲಸೆ ಕಾರ್ಮಿಕರು ಹಾಗೂ ಮೊಬೈಲ್ ಪಾಪ್ಯುಲೇಷನ್ ನ್ನು ಗಮನದಲ್ಲಿರಿಸಿ ಈ ಬಾರಿ ಪೋಲಿಯೋ ಕಾರ್ಯಕ್ರಮ ಯಶಸ್ಸಿಗೆ ಯೋಜನೆ ರೂಪಿಸಲಾಗಿದೆ ಎಂದ ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ ಶ್ರೀರಂಗಪ್ಪ ಅವರು ಯೋಜನೆಯ ಯಶಸ್ಸಿಗೆ ಅಡ್ಡಿಯಾಗುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದರು. ನಗರದ ಮೆಡಿಕಲ್ ಕಾಲೇಜು ಮತ್ತು ನರ್ಸಿಂಗ್ ಕಾಲೇಜುಗಳ ಪರಿಣಾಮಕಾರಿ ನೆರವು ಪಡೆಯಲು ಹಾಗೂ ತಾಲೂಕು ಮಟ್ಟದ ಕಾರ್ಯಪಡೆ ರಚಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು. ನಗರದಲ್ಲಿ ಪಲ್ಸ್ ಪೋಲಿಯೋ ಪರಿಣಾಮಕಾರಿಯಾಗಲು ಹಾಗೂ ಕಾಮರ್ಿಕರು ಇದರಲ್ಲಿ ಪಾಲ್ಗೊಳ್ಳಲು ನೆರವಾಗುವಂತೆ ಕಟ್ಟಡ ನಿರ್ಮಾಣಕಾರರ ಸಭೆ ಕರೆದು ಅವರಿಗೆ ವಿಷಯದ ಬಗ್ಗೆ ಅರಿವು ಮೂಡಿಸಲು ಮಹಾನಗರಪಾಲಿಕೆ ಆರೋಗ್ಯ ವಿಭಾಗಕ್ಕೆ ಸೂಚಿಸಿದರು. ನಗರದ ಬಹುಮಹಡಿ ಕಟ್ಟಡಗಳಿಗೆ ಆರೋಗ್ಯ ಕಾರ್ಯಕರ್ತರನ್ನು ಒಳಗೆ ಬಿಡುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದರು.
ಮೆಸ್ಕಾಂ ಈ ದಿನಗಳಲ್ಲಿ ವಿದ್ಯುತ್ ವ್ಯತ್ಯಯ ಮಾಡಬಾರದು ಎಂದ ಜಿಲ್ಲಾಧಿಕಾರಿಗಳು, ಸಂಪೂರ್ಣ ವ್ಯವಸ್ಥೆಯ ಉಸ್ತುವಾರಿ ಹಾಗೂ ವರದಿಗೆ ಅಧಿಕಾರಿಗಳನ್ನು ನಿಗದಿಪಡಿಸಲು ಆದೇಶಿಸಿದರು.ಪಲ್ಸ್ ಪೋಲಿಯೋ ಹೆಲ್ಪ್ ಲೈನ್ ಸ್ಥಾಪಿಸಲು ಸೂಚಿಸಿದರು. ಆರ್ ಸಿ ಎಚ್ ಡಾಕ್ಟರ್ ರುಕ್ಮಿಣಿ ಸ್ವಾಗತಿಸಿದರು. ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು, ಆರ್ ಟಿ ಒ ಶ್ರಿ ಸೇವಾ ನಾಯಕ್, ಡಿಡಿಪಿಐ ಶ್ರೀ ಚಾಮೇಗೌಡ, ಸಿಡಿಪಿಒಗಳು, ಸೇವಾ ಸಂಸ್ಥೆಗಳ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.
ಬಳಿಕ ಫೈಲೇರಿಯಾ ನಿರ್ಮೂಲನೆ ಸಂಬಂಧ ಜನವರಿ 10ರಂದು ನಡೆಯಲಿರುವ ಸಾಮೂಹಿಕ ಔಷಧ ವಿತರಣೆ ಸಭೆ ನಡೆಯಿತು.
Click this button or press Ctrl+G to toggle between Kannada and English