ಮಂಗಳೂರು : ಕಾಂಗ್ರೆಸ್ ಚುನಾವಣಾ ಪ್ರಚಾರ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ. ಜನಾರ್ದನ ಪೂಜಾರಿ ಜನರಿಗೆ ಬೇಡವಾದ ಪಿಸಿಪಿಐಆರ್ (ಪೆಟ್ರೋಕೆಮಿಕಲ್ ಆ್ಯಂಡ್ ಪೆಟ್ರೋ ಇನ್ವೆಸ್ಟ್‌ಮೆಂಟ್ ರೀಜನ್) ಅನುಷ್ಠಾನಗೊಳಿಸಲು ಹೋಗುವುದಿಲ್ಲ ಎಂದು ಹೇಳಿದರು.
ನಾನು ಲೋಕಸಭಾ ಸದಸ್ಯನಾಗಿ ಆಯ್ಕೆಯಾದರೆ, ಜನತೆ ಬಯಸಿದರೆ ಪಿಸಿಪಿಐಆರ್ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಹೇಳಿದ್ದೆ. ಆದರೆ ಈ ಯೋಜನೆ ನಮ್ಮ ಜಿಲ್ಲೆಗೆ ಬೇಡ ಎಂದು ನಾಗರಿಕ ಸಮಿತಿಯವರು ಹೇಳಿದ್ದಾರೆ. ಜನರಿಗೆ ಬೇಡವಾದ ಯೋಜನೆಗಳು ಪೂಜಾರಿಗೂ ಬೇಡ. ಕೊಟ್ಟ ಮಾತಿನಂತೆ ನಡೆಯುತ್ತೇನೆ ಎಂದರು.
ಎಲ್ಲ ವರ್ಗದ ಬಡವರಿಗೂ ಮೀಸಲಾತಿ ಸೌಲಭ್ಯ ನೀಡುವುದಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭರವಸೆ ನೀಡಿದ್ದಾರೆ. ಸಾಮಾಜಿಕ ನ್ಯಾಯದ ಸಾಕಾರದಲ್ಲಿ ಇದೊಂದು ಬಹುದೊಡ್ಡ ಕ್ರಮವಾಗಿದೆ. ಇದು ಅನುಷ್ಠಾನವಾಗಬೇಕಾದರೆ ಕಾಂಗ್ರೆಸ್‌ಗೆ ಜನತೆ ಶಕ್ತಿ ನೀಡಬೇಕು. ನಾನು ಸಂಸತ್ ಪ್ರವೇಶಿಸಿದರೆ ಇದು ಅನುಷ್ಠಾನಗೊಳ್ಳಲು ಹೋರಾಟ ನಡೆಸುತ್ತೇನೆ ಎಂದವರು ಹೇಳಿದರು.
ಬ್ರಾಹ್ಮಣ ಹಾಗೂ ಜಿಎಸ್‌ಬಿ ಸಮುದಾಯದ ಬಡವರಿಗೆ ಮೀಸಲಾತಿ ಸೌಲಭ್ಯ ನೀಡಬೇಕು ಎಂದು ಕಳೆದ 1 ವರ್ಷದಿಂದ ಪ್ರತಿಪಾದಿಸುತ್ತಾ ಬಂದಿದ್ದೆ. ಇದನ್ನು ನಾನು ಚುನಾವಣಾ ದೃಷ್ಟಿಯಿಟ್ಟು ಮಾಡಿಲ್ಲ. ಇದೀಗ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಇದನ್ನು ಸೇರಿಸಲಾಗಿದೆ ಎಂದರು.
ಗುಜರಾತ್‌ನಲ್ಲಿ ಅಭಿವೃದ್ಧಿಯಾಗಿಲ್ಲ. ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದಾಯದಲ್ಲಿ ಕುಸಿತವಾಗಿದೆ. ಭ್ರಷ್ಟಚಾರ ತಾಂಡವಾಡುತ್ತಿದೆ. ಇದೆಲ್ಲಾ ಅಲ್ಲಿನ ಒಳಗಿನ ಸತ್ಯಗಳು. ಆದರೆ ಮೋದಿ ಸುಳ್ಳುಗಳನ್ನು ಪದೆಪದೆ ಹೇಳಿ ಅವುಗಳನ್ನು ಸತ್ಯಮಾಡಲು ಹೊರಟಿದ್ದಾರೆ. ಆದರೆ ಸತ್ಯ ಯಾವತ್ತೂ ಜಯಿಸುತ್ತದೆ ಎಂದು ಪೂಜಾರಿ ಟೀಕಾಪ್ರಹಾರಗೈದರು. ಮೋದಿ ಅವರ ವಿರುದ್ಧ ಇನ್ನೂ ಹಲವು ಪ್ರಕರಣಗಳು ನ್ಯಾಯಾಲಯದಲ್ಲಿದೆ. ನೈತಿಕತೆ ಬಗ್ಗೆ ಬಾರಿ ಮಾತನಾಡುವ ಅವರು ಸ್ಪರ್ಧಿಸಬಾರದಿತ್ತು ಎಂದರು.
ದಕ್ಷಿಣ ಕನ್ನಡದಲ್ಲಿ ಸ್ಪರ್ಧೆ ಇರುವುದು ಜನಾರ್ದನ ಪೂಜಾರಿ ಹಾಗೂ ನರೇಂದ್ರ ಮೋದಿ ನಡುವೆ ಎಂಬ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಶಾಂತಿ ಮತ್ತು ದ್ವೇಷದ ನಡುವೆ ಸ್ಪರ್ಧೆ ನಡೆಯುತ್ತಿದೆ. ನರೇಂದ್ರ ಮೋದಿ ಹಾಗೂ ಬಿಜೆಪಿಯವರು ದ್ವೇಷವನ್ನು ಪ್ರತಿಪಾದಿಸುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಪೂಜಾರಿ ಶಾಂತಿಯನ್ನು ಪ್ರತಿಪಾದಿಸುತ್ತಿದ್ದಾರೆ ಎಂದ ಅವರು, ಮೋದಿಯವರೆ ಗುಜರಾತ್ ರಾಜ್ಯವನ್ನು ನರಕ ಮಾಡಿದ್ದು ಸಾಕು, ನಮ್ಮ ದಕ್ಷಿಣ ಕನ್ನಡಕ್ಕೆ ನಿಮ್ಮ ನರಕ ಬೇಡ. ನಾನು ಸಂಸತ್ ಪ್ರವೇಶಿಸಿದರೆ ಈ ರೀತಿಯ ದ್ವೇಷದ ರಾಜಕೀಯಕ್ಕೆ ಸೂಕ್ತ ಉತ್ತರ ನೀಡುತ್ತೇನೆ ಎಂದು ಸವಾಲು ಎಸೆದರು.
ಶಾಸಕ ಮೊದೀನ್ ಬಾವಾ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ , ಡಿಸಿಸಿ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಕೆಪಿಸಿಸಿ ಕಾರ್ಯದರ್ಶಿ ಐವನ್ ಡಿ’ಸೋಜಾ, ಮುಖಂಡರಾದ ಎ.ಸಿ. ಭಂಡಾರಿ, ಕಳ್ಳಿಗೆ ತಾರನಾಥ ಶೆಟ್ಟಿ, ಹರಿಕೃಷ್ಣ ಬಂಟ್ವಾಳ, ಸದಾಶಿವ ಉಳ್ಳಾಲ, ನವೀನ್ ಡಿ’ಸೋಜಾ, ಕೃಪಾ ಆಳ್ವ, ಸಂತೋಷ್ ಶೆಟ್ಟಿ , ಸುಧೀರ್ ಟಿ.ಕೆ., ಮೋಹನ್ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English