ಬೆಂಗಳೂರು, : ಬೆಳಗ್ಗೆ ಬಿಜೆಪಿ ಸೇರಿ ಸಂಜೆ ಪಕ್ಷದಿಂದ ಹೊರಬಂದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಎರಡು ಕಡೆ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಪ್ರಮೋದ್ ಮುತಾಲಿಕ್ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ವಿರುದ್ಧ ಧಾರವಾಡ ಕ್ಷೇತ್ರದಲ್ಲಿ ಮತ್ತು ಅನಂತ್ ಕುಮಾರ್ ವಿರುದ್ಧ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು, ಎರಡೂ ನಾಮಪತ್ರಗಳು ಅಂಗೀಕೃತವಾಗಿದ್ದು, ಉಭಯ ನಾಯಕರಿಗೆ ಮುತಾಲಿಕ್ ಪೈಪೋಟಿ ನೀಡಲಿದ್ದಾರೆ.
ಮುತಾಲಿಕ್ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಮಾರ್ಚ್ 26ರ ಬುಧವಾರ ಎರಡೂ ಕ್ಷೇತ್ರದಲ್ಲಿ ಉಮೇದುವಾರಿಕೆ ಸಲ್ಲಿಸಿದ್ದರು. ಬೆಂಗಳೂರು ದಕ್ಷಿಣದಲ್ಲಿ ನಾಮಪತ್ರ ಸಲ್ಲಿಸುವೆ ವೇಳೆ ಅವರು ಹಾಜರಿರಲಿಲ್ಲ. ಆದ್ದರಿಂದ ಬಿಜೆಪಿ ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿತ್ತು. ಅಂತಿಮವಾಗಿ ನಾಮಪತ್ರ ಪರಿಶೀಲನೆ ನಡೆಸಿದ ಚುನಾವಣಾಧಿಕಾರಿಗಳು ಮುತಾಲಿಕ್ ನಾಮಪತ್ರವನ್ನು ಅಂಗೀಕರಿಸಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅನಂತ್ ಕುಮಾರ್ ವಿರುದ್ಧ ಸ್ಪರ್ಧಿಸಿದ ಬಗ್ಗೆ ಹೇಳಿಕೆ ನೀಡಿರುವ ಪ್ರಮೋದ್ ಮುತಾಲಿಕ್, ಬೇರೊಬ್ಬರ ಮೂಲಕ ಉಮೇದುವಾರಿಕೆ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ಅನಂತ್ ಕುಮಾರ್ ಬಿಎಸ್‌ಪಿ ಅಭ್ಯರ್ಥಿ ಖಾನ್ ಅಬ್ದುಲ್ ರಜಾಕ್ ಮತ್ತು ಪಕ್ಷೇತರ ಅಭ್ಯರ್ಥಿ ಸಯ್ಯದ್ ಎಂಬುವರ ಮೂಲಕ ಆಕ್ಷೇಪಣೆ ಸಲ್ಲಿಸಿದ್ದಾರೆ.
ಅನಂತ್ ಕುಮಾರ್ ಸೋದರ ನಂದ ಕುಮಾರ್, ವಕೀಲ ನರಹರಿ ಹಾಗೂ ಬಿಜೆಪಿಯ ಗಜೇಂದ್ರ ಎಂಬುವರು ಚುನಾವಣಾಧಿಕಾರಿಗಳ ಮುಂದೆ ತಮ್ಮ ನಾಮಪತ್ರದ ಬಗ್ಗೆ ತಕರಾರುಗಳನ್ನು ಸಲ್ಲಿಸಿ, ನಾಮಪತ್ರವನ್ನು ತಿರಸ್ಕೃತಗೊಳಿಸಲು ವಿಫಲ ಯತ್ನ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಕಾನೂನಿನ ಪ್ರಕಾರ ಚುನಾವಣಾಧಿಕಾರಿಗಳು ನನ್ನ ನಾಮಪತ್ರ ಅಂಗೀಕರಿಸಿದ್ದಾರೆ ಎಂದರು.
ಚುನಾವಣೆ ಪ್ರಚಾರದಲ್ಲಿ ಹಿಂದುತ್ವದ ಹೆಸರಿನಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ತಮ್ಮ ವಿರುದ್ಧ ಎತ್ತಿಕಟ್ಟುವ ಮೂಲಕ ಅನೂಕಲ ಸಿಂಧು ರಾಜಕಾರಣ ಮಾಡುವ ಬಿಜೆಪಿ ಅಭ್ಯರ್ಥಿಗಳ ಬಣ್ಣವನ್ನು ಬಯಲು ಮಾಡುವುದಾಗಿ ಮುತಾಲಿಕ್ ಎಚ್ಚರಿಸಿದರು.
ಬಿಜೆಪಿಗೆ ತಮ್ಮನ್ನು ಸೇರಿಸಿಕೊಂಡಿಲ್ಲ ಎಂಬ ಕಾರಣಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ವಿರುದ್ಧ ಪ್ರಮೋದ್ ಮುತಾಲಿಕ್ ಅಖಾಡಕ್ಕೆ ಇಳಿದಿದ್ದಾರೆ. ಈಗಾಗಲೇ ನಂದನ್ ನಿಲೇಕಣಿ, ಅನಂತ್ ಕುಮಾರ್ ಸ್ಪರ್ಧೆಯಿಂದ ಕುತೂಹಲ ಕೆರಳಿಸಿರುವ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಮುತಾಲಿಕ್ ಸಹ ಪಾದಾರ್ಪಣೆ ಮಾಡಿದ್ದಾರೆ.
Click this button or press Ctrl+G to toggle between Kannada and English