ಮಂಗಳೂರು : ಕಲ್ಲು ಕಂಡಲ್ಲಿ ಹೂ ಹಾಕುವುದು, ಗುಂಡ ಕಂಡಲ್ಲಿ ಅಡ್ಡ ಬೀಳುವುದು ಯಾಕೆಂಬ ಹಲವರ ಪ್ರಶ್ನೆಗಳಿಗೆ ಅಣು ರೇಣು ತೃಣ ಕಾಷ್ಠ ಜಂಗಮ ಸ್ಥಾವರದಲ್ಲಿ ನಾವು ದೇವರನ್ನು ಕಾಣುತ್ತೇವೆ ಎಂಬ ಸತ್ಯದಡಿಯಲ್ಲಿ ನಾವು ಬದುಕುತ್ತೇವೆ ಎಂಬ ಅರಿವಾಗಬೇಕು ಎಂದು ಜಿಲ್ಲಾ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ದಯಾನಂದ ಕತ್ತಲ್ಸಾರ್ ಅಭಿಪ್ರಾಯಪಟ್ಟರು.
ವರ್ಕಾಡಿ ತೌಡುಗೋಳಿಯ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಭಾನುವಾರ ನಡೆದ ವಿಷು ವಿಶೇಷ ಪೂಜೆಯ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು.
ಕಣ್ಣಿಗೆ ಕಾಣುವುದು ಸತ್ಯ, ಕಣ್ಣಿಗೆ ಕಾಣದಿರುವುದು ಸುಳ್ಳು ಎಂಬ ನಂಬಿಕೆಯಡಿಯಲ್ಲಿ ಬದುಕುತ್ತಿರುವ ನಾವು ದೈವ ದೇವರ ಆರಾಧನೆಯಲ್ಲಿ ಸತ್ಯವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಬದುಕು ನಡೆಸುತ್ತಿದ್ದೇವೆ. ಪ್ರಪಂಚದ ಎಲ್ಲ ಭಾಗದಲ್ಲಿ ಸುನಾಮಿ, ಭೂಕಂಪ ಮೊದಲಾದ ಪ್ರಕೃತಿ ವೈಚಿತ್ರ್ಯ ನಡೆಯುತ್ತಿರುತ್ತದೆ. ಆದರೆ ರಾಮೇಶ್ವರದಿಂದ ನಿಲೇಶ್ವರ ಗಡಿ ನೀಲೆಶ್ವರದಿಂದ ಅಂಕೋಲಾ ಗಡಿಯ ತನಕ ಕನ್ನಡ, ಕೊಂಕಣಿ, ಮಲಯಾಳಿ, ಮರಾಠಿ, ತುಳು ಸೇರಿದಂತೆ ವಿವಿಧ ಭಾಷೆ ಮಾತನಾಡುವ ನಾವು ಕಡಲ ಬದಿಯ, ತೋಡಿನ ಪಕ್ಕದಿ ಮುಕ್ಕಾಲು ಭಾಗ ನೀರಿನಿಂದಾವೃತವಾದ ಕಾಲು ಭಾಗ ಭೂಮಿಯನ್ನು ಹೊಂದಿರುವ ಈ ತುಳುನಾಡ ದೇವರ ಮಡಿಲಲ್ಲಿ ಬದುಕುತ್ತಿದ್ದು ನಮಗೆ ಇದುವರೆಗೆ ಆಂತಹ ಯಾವ ಘಟನೆಗಳೂ ಎದುರಾಗಿಲ್ಲ ಎಂಬುದಕ್ಕೆ ಎಲ್ಲಿ ದೈವಾರಾಧನೆ ನಡೆಯುತ್ತದೆಯೋ, ಎಲ್ಲಿ ತಾಯಿಯನ್ನು ದೇವರ ಸ್ಥಾನದಲ್ಲಿ ನೋಡುತ್ತಾರೆಯೋ, ಎಲ್ಲಿ ಪ್ರಕೃತಿಯನ್ನು ಆರಾಧಿಸುತ್ತಾರೆಯೋ ಎಲ್ಲಿ ಗುರು ಹಿರಿಯರಿಗೆ ತಲೆ ತಗ್ಗಿಸಿ ನಡೆಯುತ್ತಾರೆಯೋ ಅಲ್ಲಿ ಅಂತಹ ದುರ್ಘಟನೆ ನಡೆಯದು ಎಂಬ ಸತ್ಯದ ಮುಂದೆ ನಾವಿದ್ದೇವೆ ಎಂದರು.
ದೀಪ ಪ್ರಜ್ವಲಿಸುವುದರ ಹಿಂದೆ ನಮ್ಮ ಬದುಕಿನಲ್ಲಿ ಆಶಾವಾದದ ಒಂದು ಕಿರಣವಿದೆ. ಕತ್ತಲೆ ತೊಲಗಿ ಬೆಳಕು ಬರಲಿ ಎಂಬುದಕ್ಕಿಂತಲೂ ಬೆಳಕಿರುವಷ್ಟು ಕಾಲವಾದರೂ ನಾವು ನಿಮ್ಮನ್ನು ನೀವು ನಮ್ಮನ್ನು ನೋಡಿಕೊಂಡು ಇರಬಹುದಲ್ಲಾ ಎಂಬ ಸತ್ಯವಿದೆ. ಜನರು ಒಂದು ನಂಬಿಕೆಯಡಿಯಲ್ಲಿ ಬದುಕುತ್ತಾರೆ. ಯಾಕೆಂದರೆ ತಗ್ಗು ಭಾಗದಲ್ಲಿ ಇರುವ ಗದ್ದೆಯಲ್ಲಿ ಮೂರು ಬೆಳೆ ಎಂಬುದು ಸತ್ಯ. ಗದ್ದೆಯಲ್ಲಿ ಬೀಜ ಬಿತ್ತುವಾಗಲೂ ದೈವ ದೇವರನ್ನು ನೆನಪಿಸಿಕೊಂಡು ಬೀಜ ಬಿತ್ತುವ ಶ್ರೇಷ್ಠ ಸಂಸ್ಕೃತಿಯಡಿಯಲ್ಲಿ ನಾವು ಬದುಕುತ್ತಿದ್ದೇವೆ ಎಂದು ನುಡಿದರು.
ತುಳುನಾಡಿನಲ್ಲಿ ಸತ್ತು ಹೋದವರು ದೈವ ಸ್ಥಾನಕ್ಕೇರಿದರು ಎಂಬ ತಪ್ಪು ಕಲ್ಪನೆ ಇದೆ. ಅದು ಸುಳ್ಳು. ಸತ್ತು ಹೋದವರೇ ಭೂತಗಳು ಸರಿ. ಆದರೆ ಸತ್ತು ಹೋದವರು ಭೂತಗಳಾಗುವುದಾದರೆ ಜೂಮಾದಿ, ಅಣ್ಣಪ್ಪಪಂಜುರ್ಲಿ , ಜಾರಂದಾಯ ಮೊದಲಾದವರ ಹುಟ್ಟು ಸಾವು ಯಾವಾಗ ಎಂಬುದು ಯಾರಿಗೆ ಗೊತ್ತು? ಹುಟ್ಟು ಸಾವಿಲ್ಲದವರು ದೈವ ದೇವರು. ಶೈಶವನ ನೋಡದವರು ದೈವ ಅಥವಾ ದೇವರು. ಇನ್ನು ಸಾತ್ವಿಕತೆಯಡಿಯಲ್ಲಿ ಆರಾಧನೆಗೊಳ್ಳುವುದು ದೇವರು. ಮಡಿವಂತಿಕೆ ಇಲ್ಲದೆ ಆರಾಧನೆಗೊಳಗಾಗುವುದು ದೈವಗಳು ಎಂದು ನುಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ ಧಾರ್ಮಿಕ ಭಾವನೆ ಬೆಳೆಯುವತ್ತ ಧಾರ್ಮಿಕ ಕಾರ್ಯಕ್ರಮಗಳ ಅನಿವಾರ್ಯತೆ ಹೆಚ್ಚಿದೆ ಎಂದು ನುಡಿದರು.
ವರ್ಕಾಡಿ ಮರಿಕಾಪು ಮಡಿಕತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಲಕ್ಷ್ಮೀ ನಾರಾಯಣ ಹೊಳ್ಳ ಮರಿಕಾಪು ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಗೋವಿಂದ ಗುರುಸ್ವಾಮಿ ತೌಡುಗೋಳಿ, ಡಾ. ಎಸ್. ಎಸ್. ರಾಮ್ ಕೈರಂಗಳ, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರ ಗಂಗಾಧರ ಉಳ್ಳಾಲ್, ಭಗವತೀ ಸಹಕಾರ ಬ್ಯಾಂಕ್ನ ನಿರ್ದೇಶಕ ಹರೀಶ್ ಇರಾ, ಶಾಂತಿಪಳಿಕೆ ಶ್ರೀ ಮಿತ್ತಮೊಗರಾಯ ಸೇವಾ ಸಮಿತಿಯ ಅಧ್ಯಕ್ಷ ಹರೀಶ್ ಕನ್ನಿಗುಳಿ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶರಣ್ಯ ಪಿ. ಬಂಗೇರ ಅವರಿಂದ ಭರತನಾಟ್ಯ ಭರತನಾಟ್ಯ ಪ್ರದರ್ಶನ ಹಾಗು ಮಾಸ್ಟರ್ ಸಹರ್ಷ್ ಅವರ ಇಂಗ್ಲಿಷ್ ಹಾಡು ಮನರಂಜನೆ ನೀಡಿತು. ಬಳಿಕ ಕೈರಂಗಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘದಿಂದ ಶ್ರೀ ದೇವಿ ಮಹಿಷ ಮರ್ಧಿನಿ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.
ಶ್ರೀ ಕ್ಷೇತ್ರದ ಅಧ್ಯಕ್ಷ ಶಿವಪ್ರಸಾದ್ ತೌಡುಗೋಳಿ ಸ್ವಾಗತಿಸಿದರು. ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾ ಕಾರ್ಯಕ್ರಮ ನಿರೂಪಿಸಿದರು. ಆನಂದ ಬಿ. ನೀರೊಳಿಕೆ ವಂದಿಸಿದರು.
Click this button or press Ctrl+G to toggle between Kannada and English