ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 76.67 ಮತದಾನ

11:07 AM, Friday, April 18th, 2014
Share
1 Star2 Stars3 Stars4 Stars5 Stars
(No Ratings Yet)
Loading...

lok sabha Dakshin Kannada

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಗುರುವಾರ ನಡೆದ ಚುನಾವಣೆ ಸಂಪೂರ್ಣ ಶಾಂತಿಯುತವಾಗಿದ್ದು ಶೇ. 76.67 ಮತದಾನವಾಗಿದೆ. ಒಟ್ಟು 15,64,114 ಮತದಾರನಲ್ಲಿ 11,96,531 ಮಂದಿ ಮತದಾನ ಮಾಡಿದ್ದಾರೆ. ಒಂದೆರಡು ಕಡೆ ಮತಯಂತ್ರಗಳ ತಾಂತ್ರಿಕ ದೋಷದಿಂದ ಸ್ವಲ್ಪ ವಿಳಂಬ‌ ವಾದ ಬಗ್ಗೆ ವರದಿಯಾಗಿದೆ.

ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಮಂಗಳೂರಿನ ಲೇಡಿಹಿಲ್ ನ ಮತಗಟ್ಟೆಯೊಂದರಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು. ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಬೆಳಗ್ಗೆಯೇ ಬಂಟ್ವಾಳದಲ್ಲಿನ ಮತದಾನ ಕೇಂದ್ರವೊಂದರಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಬೆಳ್ತಂಗಡಿಯಲ್ಲಿ ಶಾಸಕ ವಸಂತ ಬಂಗೇರ, ಧರ್ಮಸ್ಥಳದಲ್ಲಿ ಡಾ.ಡಿ. ವೀರೇಂದ್ರ ಹೆಗ್ಗಡೆ ಯವರು ಕುಟುಂಬ ಸಮೇತರಾಗಿ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು.

ಬೋಳಿಯಾರ್ ನಲ್ಲಿ ಸಚಿವ ಯು.ಟಿ. ಖಾದರ್ ತಮ್ಮ ಪತ್ನಿಯೊಂದಿಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಸಿಪಿಐ(ಎಂ) ಅಭ್ಯರ್ಥಿ ಯಾದವ ಶೆಟ್ಟಿ ಮೂಡಬಿದ್ರೆಯಲ್ಲಿ ಪತ್ನಿ ಸಮೇತರಾಗಿ ತಮ್ಮ ಮತ ಚಲಾಯಿಸಿದರು.

ಸುಳ್ಯದಲ್ಲಿ ಶೇ. 83.76 ಮತದಾನವಾಗಿದ್ದು ಪ್ರಥಮ ಸ್ಥಾನದಲ್ಲಿದೆ. ಇಲ್ಲಿ 1,86,015 ಮತದಾರರಲ್ಲಿ 1,55,819 ಮಂದಿ ಮತ ಚಲಾಯಿಸಿದ್ದಾರೆ.

ಬೆಳ್ತಂಗಡಿಯಲ್ಲಿ 200686 ಮತದಾರರರಲ್ಲಿ 1,54,067 ಮಂದಿ ಚಲಾಯಿಸಿದ್ದು ಶೇ. 76.65 ಮತದಾನವಾಗಿದೆ. ಮೂಡಬಿದಿರೆಯಲ್ಲಿ 1,81,084 ಮತದಾರರಲ್ಲಿ 1,35,151 ಮತದಾರರು ಮತ ಚಲಾಯಸಿದ್ದು ಶೇ.74.63 ಮತದಾನವಾಗಿದೆ.

ಮಂಗಳೂರು ಉತ್ತರದಲ್ಲಿ 215659 ಮತದಾರರಲ್ಲಿ 151132 ಮಂದಿ ಮತ ಚಲಾಯಿಸಿದ್ದು ಶೇ.70.08 ಮತದಾನವಾಗಿದೆ. ಮಂಗಳೂರು ನಗರ ದಕ್ಷಿಣದಲ್ಲಿ 2,17,429 ಮತದಾರರಲ್ಲಿ 1,52, 329 ಮಂದಿ ಮತ ಚಲಾಯಿಸಿದ್ದು ಶೇ. 70.13 ಮತದಾನವಾಗಿದೆ.ಮಂಗಳೂರಿನಲ್ಲಿ 175499 ರಲ್ಲಿ 130751 ಮತಗಳು ಚಲಾವಣೆಯಾಗಿದ್ದು ಶೇ.74.50 ಮತದಾನವಾಗಿದೆ. ಬಂಟ್ವಾಳದಲ್ಲಿ 201433ರಲ್ಲಿ 1,63,341 ಮತಗಳು ಚಲಾವಣೆಯಾಗಿದ್ದು, ಶೇ. 81 ಮತದಾನವಾಗಿದೆ. ಪುತ್ತೂರಿನಲ್ಲಿ 1,86,309 ರಲ್ಲಿ 1,53,941 ಮತಗಳು ಚಲಾವಣೆಯಾಗಿದ್ದು ಶೇ. 82.63 ಮತದಾನವಾಗಿದೆ.

ಮತ ಯಂತ್ರಗಳಲ್ಲಿ ಕೆಲವು ತಾಂತ್ರಿಕ ದೋಷಗಳನ್ನು ಹೊರತು ಪಡಿಸಿದರೆ ಬೆಳಗಿನಿಂದ ಸಂಜೆ 6 ಗಂಟೆಯವರೆಗೆ ಯಾವುದೇ ಗೊಂದಲವಿಲ್ಲದೆ ಮತದಾನ ಸುಸೂತ್ರವಾಗಿ ನಡೆದಿದೆ. ಮುಕ್ತ ಮತದಾನಕ್ಕೆ ಅವಕಾಶ ಕಲ್ಪಿಸುವ ದೃಷ್ಠಿಯಿಂದ ಕ್ಷೇತ್ರದ 1766 ಮತಗಟ್ಟೆಗಳಲ್ಲಿ ಬಿಗುಬಂದೋಬಸ್ತ್ ಮಾಡಲಾಗಿತ್ತು. ಕ್ಷೇತ್ರದಲ್ಲಿ ಒಟ್ಟು 17 ಮತಯಂತ್ರಗಳಲ್ಲಿ ದೋಷ ಕಂಡುಬಂದ ಹಿನ್ನಲೆಯಲ್ಲಿ ಅವುಗಳನ್ನು ಬದಲಾಯಿಸಲಾಯಿತು. 11 ಯಂತ್ರಗಳನ್ನು ಮತದಾನಕ್ಕೆ ಮೊದಲು ಹಾಗೂ 6 ಯಂತ್ರಗಳನ್ನು ಮತದಾನ ಪ್ರಕ್ರಿಯೆ ವೇಳೆ ಬದಲಾಯಿಸಲಾಯಿತು ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದರು. ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿರುವ ಪ್ರಕರಣಗಳು ಕನಿಷ್ಠವಾಗಿದೆ.ಜಿಲ್ಲೆಯಲ್ಲಿ ಅತ್ಯಂತ ಶಾಂತಿಯುತ ಮತದಾನವಾಗಿದ್ದು ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ಎಂದರು.

ಆರಂಭವಾದ ಬಳಿಕ ಆಯಾಯ ಮತಗಟ್ಟೆಗಳ ಹೊರಗೆ ಗಂಟೆಗೊಮ್ಮೆ ಮತದಾನದ ವಿವರ ಫಲಕಗಳಲ್ಲಿ ಪ್ರಕಟಿಸಲಾಗುತ್ತಿತ್ತು. ಇದರಿಂದಾಗಿ ಸಾರ್ವಜನಿಕರು ಮತದಾನದ ಅಂಕಿಅಂಶಗಳನ್ನು ತಿಳಿಯಲು ಸಾಧ್ಯವಾಗುತ್ತಿತ್ತು. 367 ಮತಗಟ್ಟೆಗಳಲ್ಲಿ ವೆಬ್‌ ಕಾಸ್ಟಿಂಗ್‌ ಮೂಲಕ ನೇರಪ್ರಸಾರ ಮಾಡಲಾಗುತ್ತಿತ್ತು.

ಶೇಕಡಾವಾರು ಮತದಾನ
ದಕ್ಷಿಣ ಕನ್ನಡ – 76.67 ( 2009ರಲ್ಲಿ ಆದ ಮತದಾನ-74.44)
ಬೆಳ್ತಂಗಡಿ -76.65 ( 2009ರಲ್ಲಿ 72.66)
ಮೂಡಬಿದಿರೆ- 74.63 ( 71.20)
ಮಂಗಳೂರು ಉತ್ತರ- 70.08 (73.23)
ಮಂಗಳೂರು ದಕ್ಷಿಣ – 70.13 ( 68.26)
ಮಂಗಳೂರು-74.50 (74.61)
ಬಂಟ್ವಾಳ-81.00 (77.63)
ಪುತ್ತೂರು- 82.63 (78.47 )
ಸುಳ್ಯ- 83.76 ( 80.21)
ಕಳೆದ ಬಾರಿಗಿಂತ ಶೇ. 2 ಅಧಿಕ

2009 ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶೇ.2 ರಷ್ಟು ಹೆಚ್ಚು ಮತದಾನವಾಗಿದೆ. 2013 ರ ವಿಧಾನಸಭಾ ಚುನಾವಣೆಯಲ್ಲೂ ಚಲಾವಣೆಯಾದ ಮತಗಳಿಗೆ ಹೋಲಿಸಿದರೆ ಶೇ.2 ರಷ್ಟು ಹೆಚ್ಚು ಮತದಾನವಾಗಿದೆ.

lok sabha Dakshin Kannada

lok sabha Dakshin Kannada

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English