ಮಂಗಳೂರು : ನೀತಿ ಸಂಹಿತೆಯ ನೆಪದಲ್ಲಿ ಜಿಲ್ಲೆಯ ಗಂಭೀರ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ 42 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಕಾಡುತ್ತಿದ್ದು ಸರಕಾರ ತಕ್ಷಣ ಸಮಸ್ಯೆಗೆ ಸ್ಪಂದಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ಒತ್ತಾಯಿಸಿದ್ದಾರೆ.
ಜಿಲ್ಲಾಡಳಿತ ಮತ್ತು ಸರಕಾರ ನೀರಿನ ಸಮಸ್ಯೆಗೆ ಯಾವುದೇ ಪರಿಹಾರ ಯೋಜನೆಗಳನ್ನು ಹಾಕಿಕೊಂಡಿಲ್ಲ. ಉಳ್ಳಾಲ, ಕೊಣಾಜೆ, ಪುದು ಮುಂತಾದೆಡೆ ನೀರಿನ ಗಂಭೀರ ಸಮಸ್ಯೆಗಳಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 26 ಗ್ರಾ.ಪಂ.ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ತು. ಈ ಬಾರಿ 42 ಗ್ರಾ.ಪಂ.ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಗುರುವಾರ ಅವರು ಪಕ್ಷದ ಕಚೇರಿಯಲ್ಲಿ ಪತ್ರಕರ್ತರಿಗೆ ತಿಳಿಸಿದರು.
ಇತ್ತೀಚೆಗೆ ಸುರಿದ ಅನಿರೀಕ್ಷಿತ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಕೃಷಿಕರು ಲಕ್ಷಾಂತರ ನಷ್ಟ ಅನುಭವಿಸಿದ್ದಾರೆ. ಮನೆಗಳು ಹಾನಿಗೊಂಡಿವೆ. ಅಡಿಕೆ, ಬಾಳೆಕೃಷಿ, ರಬ್ಬರ್ ಕೃಷಿ ಸಾಕಷ್ಟು ಹಾನಿಗೊಂಡಿದ್ದು ಜಿಲ್ಲಾಡಳಿತ ತಕ್ಷಣ ಪರಿಹಾರ ನೀಡಬೇಕು ಎಂದು ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಇತ್ತೀಚೆಗೆ ಶೃಂಗೇರಿಯ ತನಿಗೋಡು ಬಳಿ ನಡೆದ ಆಕಸ್ಮಿಕ ಘಟನೆಯಲ್ಲಿ ಮೃತಪಟ್ಟಾತನಿಗೆ ಸರಕಾರ 10 ಲಕ್ಷ ಪರಿಹಾರ ಘೋಷಿಸಿದೆ. ಜಿಲ್ಲೆಯ ಸಮಸ್ಯೆಗೆ ಸ್ಪಂದಿಸಲು ನೀತಿ ಸಂಹಿತೆ ಅಡ್ಡಿಯಾಗುತ್ತದೆ ಎಂದಾದರೆ ಪರಿಹಾರ ಮೊತ್ತ ಬಿಡುಗಡೆ ಮಾಡಲು ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲವೇ? ಎಂದು ನಾಯಕ್ ಪ್ರಶ್ನಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ಸರಕಾರ ಚರ್ಚಿಸಿ ಸರಿಯಾದ ಕ್ರಮ ಕೈಗೊಳ್ಳಬೇಕಿತ್ತು. ಆದರೆ ವೈಭವೀಕರಿಸುತ್ತಿದೆ. ಜಿಲ್ಲೆಯ ಸಚಿವರು ವಿಭಿನ್ನ ಹೇಳಿಕೆಯನ್ನು ನೀಡುತ್ತಿದ್ದಾರೆ. ಪರಿಹಾರದ ಮೊತ್ತ ಹೆಚ್ಚಿಸುವ ಮೂಲಕ ಘಟನೆಯನ್ನು ಹರಾಜು ಹಾಕುತ್ತಿದ್ದಾರೆ. ಅಲ್ಲದೆ ರಾಜಕೀಯ ಮತ್ತು ಧರ್ಮದ ಹೆಸರಿನಲ್ಲಿ ಲಾಭ ಪಡೆದುಕೊಳ್ಳುವ ಯತ್ನ ಸಾಗುತ್ತಿದೆ. ಗೃಹಸಚಿವರ ತೀರ್ಮಾನವನ್ನೇ ಪ್ರಶ್ನಿಸುವ ಸಚಿವರು ತಮ್ಮ ಸರಕಾರದ ಮೇಲೆಯೇ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ನಿಕ್, ಪಕ್ಷದ ಪ್ರಮುಖರಾದ ಸತೀಶ್ ಪ್ರಭು ದಿವಾಕರ್ ಸಾಮಾನಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English