ಬಂಟ್ವಾಳ: ಬಂಟ್ವಾಳ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಬ್ರಹ್ಮರಕೂಟ್ಲಿನ ಬಳಿ ಕಾರ್ಯಾಚರಿಸುತ್ತಿರುವ ಟೋಲ್ ಗೇಟನ್ನು ತಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿ ಶುಕ್ರವಾರ ಟೋಲ್ ಗೇಟ್ ಮುಂಬಾಗದಲ್ಲಿ ಹೆದ್ದಾರಿ ತಡೆ ಹಾಗೂ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ರಸ್ತೆಯಲ್ಲಿ ಕುಳಿತು ಹೆದ್ದಾರಿ ತಡೆ ನಡೆಸಿದರು ಬಳಿಕ ಪ್ರತಿಭಟನಾಕಾರರು ಟೋಲ್ ಸಂಗ್ರಹ ಕೇಂದ್ರದೆಡೆಗೆ ನುಗ್ಗಿ ಟೋಲ್ ಸಂಗ್ರಹವನ್ನು ತಡೆದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಜಿಲ್ಲಾ ಪಂಚಾಯತು ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ ಟೋಲ್ ಕೇಂದ್ರದ ಅವ್ಯವಸ್ಥೆ, ಸಿಬ್ಬಂದಿಗಳ ಅನಾಗರಿಕ ವರ್ತನೆ, ಅನಿಯಮಿತ ಶುಲ್ಕ ವಸೂಲಿಯನ್ನು ತಕ್ಷಣ ನಿಲ್ಲಿಸಬೇಕು. ಇದು ಅನಧೀಕೃತ ಟೋಲ್ ಸಂಗ್ರಹ ಕೇಂದ್ರವಾಗಿದ್ದು ಇದನ್ನು ತಕ್ಷಣ ಇಲ್ಲಿಂದ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಇಲ್ಲಿ ಯಾವುದೇ ಮೂಲಭೂತ ಸೌಕರ್ಯವನ್ನೂ ಕಲ್ಪಿಸಿಲ್ಲ. ಟೋಲ್ ಗೇಟಿಗೆ ಪೂರಕವಾದ ಸ್ಥಳಾವಕಾಶವೂ ಇಲ್ಲಿಲ್ಲ. ಚತುಷ್ಪಥ ರಸ್ತೆ ಪೂರ್ಣಗೊಳಿಸದೇ ಇಲ್ಲಿ ಟೋಲ್ ಸಂಗ್ರಹ ಕೇಂದ್ರ ಸ್ಥಾಪಿಸಲಾಗಿದೆ. ಬಂದೂಕು ತೋರಿಸಿ ಸುಂಕ ವಸೂಲಿ ಮಾಡುವ ಕೃತ್ಯವೂ ನಡೆಯುತ್ತಿದೆ ಎಂದು ಚಂದ್ರಪ್ರಕಾಶ್ ಶೆಟ್ಟಿ ಆರೋಪಿಸಿದರು.
ಸಮಿತಿಯ ಪ್ರಮುಖ ಹರಿಕೃಷ್ಣ ಬಂಟ್ವಾಳ್, ಜಿ.ಪಂ ಸದಸ್ಯರಾದ ಎಂ.ಎಸ್.ಮಹಮ್ಮದ್, ಮಮತ ಗಟ್ಟಿ, ಭೂ ಬ್ಯಾಂಕ್ ಅದ್ಯಕ್ಷ ಸುದರ್ಶನ್ ಜೈನ್, ಬಿ.ಪದ್ಮಶೇಖರ್ ಜೈನ್, ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಅಲಿ, ಪಿಯೂಸ್ ಎಲ್.ರೊಡ್ರಿಗಸ್, ಸದಾಶಿವ ಬಂಗೇರಾ, ಪ್ರಕಾಶ್ ಶೆಟ್ಟಿ ತುಂಬೆ, ಪರಮೇಶ್ವರ, ಬಿ.ಕೆ.ಇದಿನಬ್ಬ, ಮಧುಸೂಧನ್ ಶೆಣೈ, ಪ್ರಭಾಕರ ಪ್ರಭು, ರಾಮಕೃಷ್ಣ ಆಳ್ವ, ಮಾಧಮ ಮಾವೆ, ಮಹಮ್ಮದ್ ಶರೀಫ್, ಮಹಮ್ಮದ್ ನಂದರಬೆಟ್ಟು, ಪ್ರಶಾಂತ್ ಕುಲಾಲ್, ಜನಾರ್ದನ ಚೆಂಡ್ತಿಮಾರ್, ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಹಾಗೂ ಬಂಟ್ವಾಳ ತಾಲೂಕು ತಹಶೀಲ್ದಾರ ಮಲ್ಲೇಸ್ವಾಮಿ ಭೇಟಿ ನೀಡಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ರಸ್ತೆ ತಡೆ ಹಿನ್ನೆಲೆಯಲ್ಲಿ ಕೆಲಹೊತ್ತು ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತು. ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಭಾರೀ ಪೋಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಬ್ರಹ್ಮರಕೂಟ್ಲುವಿನ ಟೋಲ್ ಗೇಟ್ ನಲ್ಲಿ ನೇಮಿಸಲಾಗಿದ್ದ ಗನ್ ಮ್ಯಾನ್ ಗಳಿಂದ 2 ಬಂದೂಕುಗಳನ್ನು ತಾಲೂಕು ದಂಡಾಧಿಕಾರಿ ಮಲ್ಲೇಸ್ವಾಮೀ ವಶಕ್ಕೆ ಪಡೆದುಕೊಂಡು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
Click this button or press Ctrl+G to toggle between Kannada and English