ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರ ಚುನಾವಣೆಯ ಪ್ರಕ್ರಿಯೆಗಳ ಗೊಂದಲಗಳನ್ನು ಸರಿಪಡಿಸಲು ಜಿಲ್ಲಾಧಿಕಾರಿಗೆ ಮನವಿ

7:00 PM, Wednesday, April 30th, 2014
Share
1 Star2 Stars3 Stars4 Stars5 Stars
(5 rating, 3 votes)
Loading...

bjp memorandum

ಮಂಗಳೂರು : ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರ ಚುನಾವಣೆಯ ಪ್ರಕ್ರಿಯೆಗಳ ಗೊಂದಲಗಳನ್ನು ಕೂಡಲೇ ಸರಿಪಡಿಸಿ ಸೂಕ್ತ ಕ್ರಮ ಕೈಗೊಳ್ಳುಬೇಕೆಂದು ಜಿಲ್ಲಾ ಬಿಜೆಪಿ ವತಿಯಿಂದ ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಹಿಂದಿನ ಸಹಕಾರಿ ಸಂಸ್ಥೆಗಳಿಗೆ ಚುನಾವಣೆ ನಡೆಯುವ ಸಂದರ್ಭದಲ್ಲಿ ಮಹಾಸಭೆಯ ನೋಟೀಸಿನ ಜೊತೆಯಲ್ಲಿಯೆ ಸ್ಪರ್ಧಿಸುವ ಅಭ್ಯರ್ಥಿಗಳ ಅರ್ಜಿ ಯ ನಮೂನೆಯನ್ನು ಕೂಡಾ ಕಳುಹಿಸಲಾಗುತ್ತಿತ್ತು. ಇದೀಗ ದಿನಾಂಕ 25.5.2014 ರಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ಚುನಾವಣೆಯು ನಡೆಯಲಿದ್ದು, ಸಂಘದ ಪ್ರತಿನಿಧಿ ನಿಯೋಜಿಸುವ ಅರ್ಜಿ ಯ ನಮೂನೆಯನ್ನು ಬ್ಯಾಂಕ್ ನಿಗದಿಪಡಿಸಿದ ಸ್ಥಳದಲ್ಲಿ ಕೇವಲ ಎರಡು ದಿನಗಳು ಮಾತ್ರ ನೀಡುವವರಿದ್ದು ಅದನ್ನು ಪಡೆದುಕೊಳ್ಳಲು ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಹೋಗಬೇಕಾಗಿದ್ದು ಹಾಗೂ ಅರ್ಜಿಯನ್ನು ಸಲ್ಲಿಸತಕ್ಕಂತಹ ಸಂದರ್ಭದಲ್ಲಿ ಚುನಾವಣೆಯಲ್ಲಿ ಭಾಗವಹಿಸುವ ಪ್ರತಿನಿಧಿ ಮತ್ತು ಆ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿಗಳು ಹಾಜರಿರಬೇಕು.

ಅದೂ ಅಲ್ಲದೆ ಸಂಘದ ಪ್ರತಿನಿಧಿ ನಿಯೋಜಿಸುವ ಅರ್ಜಿಗಳನ್ನು ನೀಡಲು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧಿಕಾರಿಗಳನ್ನೇ ನೇಮಿಸಿದ್ದು ಅವರು ತಮಗೆ ಬೇಕಾದವರಿಗೆ ಮಾತ್ರ ಅರ್ಜಿ ನಮೂನೆಗಳನ್ನು ನೀಡುತ್ತಾರೆ ಹಾಗೂ ಹೆಚ್ಚಿನ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಸಂಘದ ಪ್ರತಿನಿಧಿ ನಿಯೋಜಿಸುವ ನಮೂನೆಗೆ ಕೋರಿಕೆ ಸಲ್ಲಿಸಿದಾಗ ಸದ್ರಿ ನಮೂನೆ ನೀಡದೆ ನಿರಾಕರಿಸಿರುತ್ತಾರೆ ಎಂದು ಮನವಿಯಲ್ಲಿ ದೂರಲಾಗಿದೆ.

ಸಂಘದ ಪ್ರತಿನಿಧಿ/ಡೆಲಿಗೇಟ್ ನಿಯೋಜಿಸುವ ನಮೂನೆಯನ್ನು ಪಡೆಯುವ ದಿನಾಂಕವನ್ನು ವಿಸ್ತರಿಸಬೇಕು. ಪ್ರಸ್ತುತ ಸಮಯಾವಕಾಶ ನೀಡದೆ ದಿನಾಂಕ 25-04-2014 ಅಂತಿಮ ದಿನಾಂಕವೆಂದು ಇರುತ್ತದೆ. ಪ್ರತಿನಿಧಿಗಳು ನಿಯೋಜಿಸಿ ಸಲ್ಲಿಸಬೇಕಾದ ಮಾದರಿ ಅರ್ಜಿ ನಮೂನೆಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಸದ್ರಿ ಅರ್ಜಿಗಳನ್ನು ಮುಖತಃ ಕೊಂಡು ಹೋಗುವ ವಿಷಯವನ್ನು ಹೊರತುಪಡಿಸಿ ಟಪ್ಪಾಲು/ಕೊರಿಯರ್ ಮೂಲಕ ಕಳುಹಿಸಿದರೂ ಸ್ವೀಕರಿಸಬೇಕು. ಚುನಾವಣೆಯ ಮತದಾರರ ಪಟ್ಟಿ ತಯಾರಿಸುವ ಕೊನೆಗಳಿಗೆವರೆಗೂ ಈ ರೀತಿಯ ಅರ್ಜಿಗಳನ್ನು ಸ್ವೀಕರಿಸುವಂತಿರಬೇಕು. ಮತದಾರರ ಪಟ್ಟಿ ತಯಾರಿಸುವ ಹೊತ್ತಿಗೆ ಪ್ರತಿನಿಧಿಗಳ ಕಡ್ಡಾಯ ಹಾಜರಾತಿ ಅಗತ್ಯವಿಲ್ಲ ಎಂಬುದನ್ನು ತಿಳಿಸಲು ಮನವಿಯಲ್ಲಿ ಹೇಳಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕೆ. ಪ್ರತಾಪಸಿಂಹ ನಾಯಕ್, ವಿಧಾನ ಪರಿಷತ್ ಸದಸ್ಯ ಕೆ. ಮೋನಪ್ಪ ಭಂಡಾರಿ, ಮಾಜಿ ಶಾಸಕರಾದ ಎನ್. ಯೋಗೀಶ್ ಭಟ್, ಪ್ರಧಾನ ಕಾರ್ಯದದರ್ಶಿ ಸಂಜೀವ ಮಠಂದೂರು, ಬಿಜೆಪಿ ಸಹಕಾರಿ ಪ್ರಕೋಷ್ಠದ ಮಂಗಳೂರು ವಿಭಾಗ ಸಂಚಾಲಕರಾದ ಹರೀಶ್ ಆಚಾರ್ ಮತ್ತು ಜಿಲ್ಲಾ ಕಾರ್ಯದರ್ಶಿ ಶಾಂತಾ. ಆರ್ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English