ದಕ್ಷಿಣ ಕನ್ನಡ ಬಂಟರ ಸಂಘದ ಶತಮಾನೋತ್ಸವ ಹಾಗು ಬಂಟರ ಮಾಹಸಮ್ಮೇಳನ ಮೇ 9 ಕ್ಕೆ

6:43 PM, Tuesday, May 6th, 2014
Share
1 Star2 Stars3 Stars4 Stars5 Stars
(4 rating, 6 votes)
Loading...

Bunts

ಮಂಗಳೂರು: ದಕ್ಷಿಣ ಕನ್ನಡ ಬಂಟರ ಯಾನೆ ನಾಡವರ ಮಾತೃ ಸಂಘದ ಶತಮಾನೋತ್ಸವ ಹಾಗು ಬಂಟರ ಮಾಹಸಮ್ಮೇಳನ ನಗರದ ಬಂಟ್ಸ್ ಹಾಸ್ಟೆಲ್‌ನಲ್ಲಿ ಮೇ 9ರಂದು ಸಂಜೆ 5.30ಕ್ಕೆ ಜರುಗಲಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಹೇಳಿದ್ದಾರೆ.

ಬಂಟ್ಸ್ ಹಾಸ್ಟೆಲ್‌ನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ವಿವರಣೆ ನೀಡಿದ ಅವರು ಅಂದು ಸಂಜೆ 5 ಗಂಟೆಗೆ ಶತಮಾನೋತ್ಸವದ ಪ್ರಯುಕ್ತ ಪುನರ್ ನಿರ್ಮಾಣ ಮಾಡಲಾದ ಬಂಟ್ಸ್ ಹಾಸ್ಟೆಲ್ ವೃತ್ತವನ್ನು ಉದ್ಘಾಟಿಸಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗುವುದು ಎಂದರು.

ಬಂಟರ ಮಾಹಸಮ್ಮೇಳನದಲ್ಲಿ ಸಮಾಜದ ಸರ್ವತೋಮುಖವಾದ ಅಭಿವೃದ್ಧಿಯನ್ನು ಸಂಕಲ್ಪ ಮಾಡಿ ಎಲ್ಲರೂ ಒಂದಾಗಿ ಬಾಳುವ ಸದುದ್ದೇಶವನ್ನು ಹೊಂದಿಕೊಂಡು ವಿವಿಧ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಸಮ್ಮೇಳನದ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲ್, ಸಂಸದ ಜಯಪ್ರಕಾಶ ಹೆಗ್ಡೆ, ಮಹಾಪೌರರಾದ ಮಹಾಬಲ ಮಾರ್ಲ, ಟ್ಟೆ ವಿಶ್ವವಿಧ್ಯಾಲಯದ ಕುಲಾಧಿಪತಿ ವಿನಯ ಹೆಗ್ಡೆ, ಎ.ಜೆ. ಸಮೂಹ ಸಂಸ್ಥೆಯ ಅಧ್ಯಕ್ಷ ಎ.ಜೆ.ಶೆಟ್ಟಿ, ಮುಂಬೈ ಬಂಟರ ಸಂಘದ ಅಧ್ಯಕ್ಷ ಸಿ‌ಎ. ಶಂಕರ ಶೆಟ್ಟಿ, ವರ್ಲ್ಡ್ ಬಂಟ್ಸ್ ಫೌಂಡೇಶನ್ ಟ್ರಸ್ಟ್‌ನ ಟ್ರಸ್ಟಿ ಡಾ. ಕೆ.ಆರ್.ಶೆಟ್ಟಿ. ಎಮ್.ಆರ್.ಜಿ.ಗ್ರೂಫ್ ಆಫ್ ಹೋಟೇಲ್ಸ್‌ನ ಎಮ್.ಡಿ ಪ್ರಕಾಶ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಉಪಾಧ್ಯಕ್ಷ ಐಕಳ ಹರೀಶ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಅಮರನಾಥ ಹೆಗ್ಡೆ, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಮ್. ಮೋಹನ ಆಳ್ವ, ಮುಂಬೈ ಬಂಟ್ಸ್ ಅಸೋಶಿಯೇಶನ್‌ನ ಅಧ್ಯಕ್ಷ ಶ್ಯಾಮ ಶೆಟ್ಟಿ, ಯು.ಎ.ಇ.ಕರ್ಣಾಟಕ ಸಂಘ ಮತ್ತು ಬಂಟರ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಯು.ಎ.ಇ, ಎಕ್ಸ್ ಚೇಂಜ್ ನ ಸಿ.ಇ.ಒ. ಎಣ್ಮಕಜೆ ಸುಧೀರ್ ಶೆಟ್ಟಿ, ಗಾಯತ್ರಿ ನಮಿತ್ ಅಸೋಸಿಯೇಟ್ಸ್‌ನ ಡೈರೆಕ್ಟರ್‌ರಾದ ಆರ್ಕಿಟೆಕ್ಟ್ ಗಾಯತ್ರಿ ಶೆಟ್ಟಿ ಭಾಗವಹಿಸಲಿದ್ದಾರೆ. ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಬಂಟರು, ನಾಡವರು, ಒಕ್ಕೆಲಕುಲು ಎಂಬ ನಾಮಾಂಕಿತದ ಬಂಟ ಜನಾಂಗವು ನಮ್ಮದೇ ಆದ ಒಂದು ವಿಶಿಷ್ಟ ಉನ್ನತ ಪರಂಪರೆ, ಸಂಸ್ಕೃತಿ, ಸಂಸ್ಕಾರ, ಆಚಾರವಿಚಾರ, ವೇಷಭೂಷಣ, ನಡೆನುಡಿ, ರಕ್ತಗತವಾದ ನಾಯಕತ್ವದ ಗುಣ ಧರ್ಮದೊಂದಿಗೆ ಪ್ರಾಚೀನ ಕಾಲದಿಂದಲೂ ಪರಶುರಾಮಸೃಷ್ಟಿಯ ಪುಣ್ಯಭೂಮಿಯಲ್ಲಿ ಅಳಿಯಕಟ್ಟನ್ನು ಆಚರಿಸಿಕೊಂಡು ಆಡಳಿತದಾರರು, ನಾಯಕರು, ಸೇನಾಗಳು, ಜಮೀನುದಾರರು, ಕೃಷಿಕರಾಗಿ ಬದುಕುವುದರೊಂದಿಗೆ ನಾಡಿನ ಸಂಸ್ಕೃತಿ, ಸಂಸ್ಕಾರ, ಧರ್ಮದ ರಕ್ಷಕರಾಗಿ, ದೇಶಭಕ್ತರಾಗಿ, ರಾಜಕೀಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು ಸಮಾಜದ ಎಲ್ಲಾ ವರ್ಗಗಳ ಎಲ್ಲಾ ಜಾತಿ,ಮತದ ಜನರ ಕಷ್ಟ, ಸುಖಃ-ದುಖಃಗಳಲ್ಲಿ ಬಾಗಿಯಾಗಿ ಎಲ್ಲರನ್ನೂ ಅರಿತುಕೊಂಡು, ಸಾಮರಸ್ಯದ ಸಹಜೀವನವನ್ನು ನಡೆಸಿ ತಮ್ಮ ಅನುಕರಣೀಯ ನಡತೆಯಿಂದ ಎಲ್ಲಾ ಜಾತಿ, ಮತ, ಬಾಂಧವರ ಪ್ರೀತ್ಯಾದರಗಳನ್ನು ಗಳಿಸಿ ದೇಶದ ಚರಿತ್ರೆಯಲ್ಲಿ ಗೌರವಾತ ಸ್ಥಾನಮಾನಗಳನ್ನು ನಮ್ಮ ಜನಾಂಗವು ಪಡೆದುಕೊಂಡಿದೆ.

ಬ್ರಿಟೀಷರ ಆಡಳಿತದಲ್ಲಿ 1835ರ ನಂತರ ಶಿಕ್ಷಣ, ಆಡಳಿತ ಹಾಗೂ ಉದ್ಯೋಗದ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಗಳಾದವು. ಆ ಕಾಲದಲ್ಲಿ ನಮ್ಮ ಹೆಚ್ಚಿನ ಸಮಾಜಬಾಂಧವರು ಹಳ್ಳಿಗಳಲ್ಲಿಯೇ ಇದ್ದರು. ಹಳ್ಳಿಗಳಲ್ಲಿ ಆಧುಕ ವಿಧ್ಯಾಬ್ಯಾಸದ ಸೌಕರ್ಯಗಳು ಇರಲಿಲ್ಲ. ಆ ಸಂದರ್ಭದಲ್ಲಿ ಕಾಸರಗೋಡು, ಉಡುಪಿ, ದ.ಕ ಜಿಲ್ಲೆಗಳ ನಮ್ಮ ಪೂರ್ವಿಕರು ಬದಲಾಗುತ್ತಿರುವ ಸ್ಥಿತಿಗತಿಗಳಿಗೆ ಹೊಂದಿಕೊಂಡು ಹೋದರೆ ನಮ್ಮ ಸಮಾಜ ಉಳಿಯುತ್ತದೆ, ಬೆಳೆಯುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಂಡು ಸೇತುವೆ, ಬಸ್ಸು, ಕಾರು, ಫೋನ್, ಹೋಟೆಲ್ ಮುಂತಾದ ಸೌಲಭ್ಯವಿಲ್ಲದ ಆ ಸಮಯದಲ್ಲಿ ಇಪ್ಪತ್ತಕ್ಕಿಂತಲೂ ಹೆಚ್ಚು ನದಿಗಳನ್ನು ದೋಣಿಗಳಲ್ಲಿ ದಾಟಿ, ಎತ್ತಿನಗಾಡಿಯಲ್ಲಿ ಪ್ರಯಾಣ ಮಾಡಿ ಮಂಗಳೂರು ಮತ್ತು ಇತರ ಕಡೆ ಸಭೆ ಸೇರಿ ಸಮಾಲೋಚನೆ ನಡೆಸಿ, ನಮ್ಮ ಸಮಾಜವನ್ನು ವಿದ್ಯಾವಂತ ಸಮಾಜವನ್ನಾಗಿ ಮಾಡಬೇಕು ಎಂಬ ಮಹೋನ್ನತ ಉದ್ದೇಶದಿಂದ, ಸ್ವಾರ್ಥ ಸೇವಾ ಮನೋಭಾವದೊಂದಿಗೆ 1908ನೇ ಇಸವಿಯಲ್ಲಿ ಬಂಟರ ಯಾನೆ ನಾಡವರ ಸಂಘವನ್ನು ಸ್ಥಾಪಿಸಿದರು.

ಸೊಸೈಟೀಸ್ ರಿಜಿಸ್ಟ್ರೇಶನ್ ಆಕ್ಟಿನ ಪ್ರಕಾರ ನೋಂದಣಿಯಾದ ಮೊದಲ ಸಂಘವು ನಮ್ಮ ಸಂಘವಾಗಿದೆ ಎಂದು ಇವತ್ತು ನಾವು ಹೆಮ್ಮೆ ಪಡಬಹುದು. ನಮ್ಮ ಹಿರಿಯರು ಕುಂದಾಪುರ, ಉಡುಪಿ, ಪುತ್ತೂರು, ಕಾರ್ಕಳ, ಕಾಸರಗೋಡು, ಮಂಗಳೂರು ಮುಂತಾದ ಪ್ರದೇಶಗಳಲ್ಲಿ ಭೂಮಿ ಖರೀದಿಸಿ ವಿದ್ಯಾರ್ಥಿ, ವಿದ್ಯಾರ್ಥಿ ಲಯಗಳನ್ನು ಸ್ಥಾಪನೆ ಮಾಡಿ, ವಿದ್ಯಾರ್ಥಿ ಸಹಾಯ ಧಿಯನ್ನು ಪ್ರಾರಂಭಿಸಿದ ಕಾರಣ ಹಳ್ಳಿಗಳಲ್ಲಿದ್ದ ಸಾವಿರಾರು ಮಂದಿ ವಿದ್ಯೆ ಪಡೆದು ಉದ್ಯೋಗ ಗಳಿಸಲು ಸಾಧ್ಯವಾಯಿತು. ನಮ್ಮ ಸಮಾಜ ಒಂದು ವಿದ್ಯಾವಂತ, ಸುಸಂಸ್ಕೃತ, ಸಮಾಜವಾಗಿದ್ದರೆ ಅದಕ್ಕೆ ಸಂಘವನ್ನು ಸ್ಥಾಪಿಸಿದ ಮಹಾನ್ ಚೇತನಗಳೇ ಮೂಲ ಕಾರಣ. ಅವರು ಪ್ರಾತಃಸ್ಮರಣೀಯರು. ಚಿರ ಸ್ಮರಣೀಯರಾದ ನಮ್ಮ ಹಿರಿಯರು ತೋರಿಸಿದ ದಾರಿದೀಪದ ಬೆಳಕಿನಲ್ಲಿ ಬಂಟರ ಯಾನೆ ನಾಡವರ ಮಾತೃಸಂಘ ನಡೆದುಕೊಂಡು ಬಂದು ಸಹಾಯದ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಸಹಾಯ, ಮದುವೆ, ವೈದ್ಯಕೀಯ ಶುಶ್ರೂಷೆಗೆ ಹಾಗೂ ಆಕಸ್ಮಿಕ ಘಟನೆಗಳಲ್ಲಿ ನೋವುಂಡವರಿಗೆ, ಪ್ರಾಕೃತಿಕ ವಿಕೋಪಗಳಲ್ಲಿ ಸಂತ್ರಸ್ಥರಾದವರಿಗೆ ಸಹಾಯ ಮಾಡುವುದರೊಟ್ಟಿಗೆ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಂತರವಾಗಿ ನಡೆಸಿಕೊಂಡು ಬರುತ್ತಿದೆ. ಇದರೊಟ್ಟಿಗೆ ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸವನ್ನು ಸಮಾಜಬಾಂಧವರಿಗೆ ಮತ್ತು ಇತರರಿಗೆ ಕೊಡುತ್ತಿದೆ ಎಂದು ವಿವರಿಸಿದರು.

ನಮ್ಮ ಅವಿಭಾಜ್ಯ ಕುಟುಂಬ ಪದ್ಧತಿ ಒಂದು ಉತ್ತಮ ಜೀವನ ಪದ್ಧತಿಯಾಗಿತ್ತು, ಅಲ್ಲಿ ನಮಗೆ ರಕ್ಷಣೆ, ಮಾರ್ಗದರ್ಶನ ಸಿಗುತ್ತಿತ್ತು. ಈಗ ಅದು ಇಲ್ಲ ನಮಗೆ ಗುರುಮಠಗಳು ಇಲ್ಲ, ಯಜಮಾನರಿಲ್ಲ. ಈ ಕೊರತೆಯನ್ನು ತುಂಬಲು ನಾವೆಲ್ಲರೂ ಮಾತೃ ಸಂಘವನ್ನು ನಮ್ಮ ಕುಟುಂಬದ ಮೂಲಮನೆ ಎಂಬ ಭಾವನೆಯಿಂದ ನೋಡಿಕೊಂಡು ಅದರ ನೆರಳಿನಲ್ಲಿ ಬಾಳಿ ಬದುಕೋಣ. ಸಂಘವನ್ನು ಸ್ಥಾಪಿಸಿದ ಹಿರಿಯರು ನೂರಾರು ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ನಮಗೆ ಬಳುವಳಿಯಾಗಿ ಕೊಟ್ಟು ಹೋಗಿದ್ದಾರೆ. ಈ ಭೂಮಿಗಳ ಮೌಲ್ಯಕ್ಕೆ ಸರಿಯಾದ ಆದಾಯ ಈಗ ನಮಗೆ ಬರುತ್ತಿಲ್ಲ. ಈ ಭೂಮಿಗಳಿಂದ ಉತ್ತಮ ಆದಾಯವನ್ನು ಪಡೆಯುವ ಉದ್ದೇಶದಿಂದ ಆರಂಭಿಕವಾಗಿ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಇರುವ ಜಾಗದಲ್ಲಿ ಈಗಿನ ಕಾಲಕ್ಕೆ ಬೇಕಾಗಿರುವಂತೆ ಎಲ್ಲಾ ವ್ಯವಸ್ಥೆಗಳಿರುವ ಉತ್ತಮ ಸಭಾಂಗಣವನ್ನು ಹಾಗೂ ವಾಣಿಜ್ಯ ಕಟ್ಟಡವನ್ನು ಕಟ್ಟಿದರೆ ವಾರ್ಷಿಕವಾಗಿ ರೂ.25 ಕೋಟಿಗಿಂತಲೂ ಅಧಿಕ ಆದಾಯ ಬರಬಹುದು. ಈ ಆದಾಯವನ್ನು ಸಮಾಜ ಬಾಂಧವರ ಕಲ್ಯಾಣಕ್ಕಾಗಿ ಉಪಯೋಗಿಸುವುದು, ನಂತರದ ಹಂತದಲ್ಲಿ ಉಡುಪಿ, ಕಾರ್ಕಳ, ಮಂಗಳೂರು, ಕುಂದಾಪುರ ಮುಂತಾದ ಕಡೆ ಕಟ್ಟಡಗಳನ್ನು ರ್ಮಿಸಿ ಭೂಮಿಯ ಮೌಲ್ಯಕ್ಕೆ ಅನುಗುಣವಾದ ಆದಾಯವನ್ನು ಪಡೆಯುವುದು ನಮ್ಮ ಪ್ರಮುಖ ಯೋಜನೆಯಾಗಿದೆ ಎಂದರು.

ಪತ್ರಿಕಾ ಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮೇಘನಾಥ ಶೆಟ್ಟಿ, ಕೋಶಾಧಿಕಾರಿ ಸಿ‌ಎ. ಕೆ. ಮನಮೋಹನ ಶೆಟ್ಟಿ, ಜೊತೆ ಕಾರ್ಯದರ್ಶಿ, ಹೇಮನಾಥ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಕೃಷ್ಣಪ್ರಸಾದ್ ರೈ, ಜಗನ್ನಾಥ ಶೆಟ್ಟಿ ಬಾಳ, ಜಯರಾಮ ಸಾಂತ, ಉಮೇಶ್ ರೈ, ಸುಂದರ ಶೆಟ್ಟಿ, ಶ್ರೀನಿವಾಸ ಆಳ್ವ, ಸುರೇಶ್ ರೈ, ವಿಕಾಸ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Bunts

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English