ಮಂಗಳೂರು : ಗ್ಯಾಸ್ ಟ್ಯಾಂಕರ್ ಮತ್ತು ಟ್ರ್ಯಾಕ್ಸ್ ತೂಫಾನ್ ನಡುವೆ ಶಿರಾಡಿಯ ಅಡ್ಡಹೊಳೆ ಸಮೀಪ ಸೋಮವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟು, 13 ಜನರು ಗಾಯಗೊಂಡಿದ್ದಾರೆ.
ತೂಫಾನ್ ಚಾಲಕ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ದಾವಣಗೆರೆಯ ನಿವಾಸಿಗಳು ಎಂದು ಗುರುತಿಸಲಾಗಿದೆ. ಸುಬ್ರಮಣ್ಯ ದೇವರ ದರ್ಶನ ಪಡೆದು ರಾಷ್ಟ್ರೀಯ ಹೆದ್ದಾರಿ 75ರ ಮಾರ್ಗವಾಗಿ ಉಡುಪಿಗೆ ತೆರಳುತ್ತಿದ್ದಾಗ, ಶಿರಾಡಿ ಗ್ರಾಮದ ಅಡ್ಡಹೊಳೆ ಸಮೀಪ ಸೋಮವಾರ ತೂಫಾನ್ ವಾಹನಕ್ಕೆ ಗ್ಯಾಸ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ.
ಮೃತಪಟ್ಟವರನ್ನು ತೂಫಾನ್ ಚಾಲಕ ದಾವಣಗೆರೆ ಜಿಲ್ಲೆಯ ತುರುಚಿಘಟ್ಟ ನಿವಾಸಿ ತಿಪ್ಪೇಶ (30), ಶ್ವೇತಾ (26) ಹಾಗೂ ಶ್ವೇತಾ ಅವರ ಪುತ್ರ ಗಣೇಶ್ ಎಂದು ಗುರುತಿಸಲಾಗಿದೆ.
ದಾವಣಗೆರೆ ಜಿಲ್ಲೆಯ ಒಂದೇ ಕುಟುಂಬದ 17 ಮಂದಿಯ ತಂಡ ಜೂ. 1ರಂದು ತಮ್ಮ ಊರಿನಿಂದ ಖಾಸಗಿ ಟೂರಿಸ್ಟ್ ಸಂಸ್ಥೆಯ ವಾಹನದ ಮೂಲಕ ಧರ್ಮಸ್ಥಳ, ಸುಬ್ರಹ್ಮಣ್ಯ ಮತ್ತು ಉಡುಪಿಗೆ ತೀರ್ಥಯಾತ್ರೆಗಾಗಿ ಆಗಮಿಸಿದ್ದರು.
ಸೋಮವಾರ ಧರ್ಮಸ್ಥಳ, ಸುಬ್ರಮಣ್ಯ ಪ್ರವಾಸ ಮುಗಿಸಿ, ಗುಂಡ್ಯ ಮಾರ್ಗವಾಗಿ ಉಡುಪಿಯತ್ತ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ವಿರುದ್ಧ ದಿಕ್ಕಿನಿಂದ ವೇಗವಾಗಿ ಟ್ಯಾಂಕರ್ ಆಗಮಿಸುತ್ತಿರುವುದನ್ನು ಕಂಡ ತೂಫಾನ್ ಚಾಲಕ, ಹೆದ್ದಾರಿಯ ಡಾಂಬರು ರಸ್ತೆ ಬಿಟ್ಟು ಕೆಳಗಿಳಿದರೂ ಟ್ಯಾಂಕರ್ ತೂಫಾನ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಟ್ಯಾಂಕರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು ಸಂಚಾರ ಠಾಣೆ ಪೊಲೀಸರು ಅವನಿಗಾಗಿ ಹುಡುಕಾಟ ನಡೆಸಿದ್ದಾರೆ.
Click this button or press Ctrl+G to toggle between Kannada and English