ಮಂಗಳೂರು: ಸಾಮಾಜಿಕ ಮೌಢ್ಯಗಳೇ ಬಲವಾಗಿದ್ದ ಅಂದಿನ ದಿನಗಳಲ್ಲಿ ಮಹಿಳಾ ಶಿಕ್ಷಣದ ಅದ್ಭುತ ಚಿಂತನೆಯೊಂದಿಗೆ ಬ್ಯಾಂಕಿಂಗ್ ಜತೆಗೆ ಹೆಣ್ಣು ಮಕ್ಕಳ ಶಿಕ್ಷಣ ಸಂಸ್ಥೆಯನ್ನೂ ಕಟ್ಟಿ ಬೆಳೆಸಿದ ಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಅವರ ದೂರದರ್ಶಿತ್ವದ ಕೊಡುಗೆ ನಮ್ಮೆಲ್ಲರಿಗೂ ಆದರ್ಶ ಮತ್ತು ಸ್ಪೂರ್ತಿಯಾಗಿದೆ. ಅವರ ಆಶಯದಂತೆ ಜಾಗತಿಕ ಮನ್ನಣೆಯೊಂದಿಗೆ ಮುನ್ನಡೆಯುತ್ತಿರುವ ಕೆನರಾ ಸಂಸ್ಥೆಗಳು , ಶಿಕ್ಷಣ ಸಾಲದ ವಿಷಯದಲ್ಲಿ ರಾಷ್ಟ್ರದಲ್ಲೇ ಅಗ್ರಸ್ಥಾನದಲ್ಲಿರುವ ಕೆನರಾ ಬ್ಯಾಂಕ್ ಸಾಮಾಜಿಕ ಕಾಳಜಿಯ ದ್ಯೋತಕವಾಗಿ ಒಂದು ವರ್ಷದಲ್ಲೇ ರೂ 67 ಕೋಟಿ ವೆಚ್ಚದಲ್ಲಿ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸಿರುವುದು ಒಂದು ವಿಶೇಷ ದಾಖಲೆ ಎಂದು ಕೆನರಾ ಬ್ಯಾಂಕ್ನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಆರ್.ಕೆ.ದುಬೆ ಹೇಳಿದರು.
ಅವರು ಮಂಗಳವಾರ ಕೆನರಾ ಬ್ಯಾಂಕಿನ ವತಿಯಿಂದ ಒಂದು ಕೋಟಿ ರೂ ಉದಾರ ಕೊಡುಗೆಯ ನೆರವಿನೊಂದಿಗೆ ಇಲ್ಲಿನ ಕೆನರಾ ಇಂಗ್ಲೀಷ್ ಹೈಯರ್ ಪ್ರೈಮರಿ ಶಾಲೆಯ ನೂತನ ಕಟ್ಟಡದ ಮೊದಲ ಹಂತದಲ್ಲಿ ನಿರ್ಮಾಣಗೊಂಡ ಕೆನರಾ ಬ್ಯಾಂಕ್ ಬ್ಲಾಕ್ ಕಟ್ಟಡವನ್ನು ಉದ್ಘಾಟಿಸಿ ಬಳಿಕ ಶ್ರೀ ಸುಧೀಂದ್ರ ಅಡಿಟೋರಿಯಂನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ ಸಾಲಕ್ಕಾಗಿ ವಿದ್ಯಾರ್ಥಿಗಳು ಅಲೆದಾಡುವಂತಾಗಬಾರದು ಎಂಬ ಕಾರಣಕ್ಕೆ ಗ್ರಾಮಾಂತರ ಮಟ್ಟದಲ್ಲಿಯೂ ಶಿಕ್ಷಣ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಇದೀಗ ಕೆನರಾ ಬ್ಯಾಂಕ್ ಆಸಕ್ತಿ ವಹಿಸಿದೆ. ಆರೋಗ್ಯ, ಮಹಿಳಾ ಸಬಲೀಕರಣ, ಸ್ವ ಉದ್ಯೋಗವನ್ನು ಪ್ರೋತ್ಸಾಹಿಸುವುದರ ಜತೆಗೆ ಕೆನರಾ ವಿದ್ಯಾ ಸಹಾಯ, ಕೆನರಾ ಜ್ಯೋತಿ ಹೀಗೆ ವಿವಿಧ ಶೈಕ್ಷಣಿಕ ನೆರವಿನ ಯೋಜನೆಗಳನ್ನು ಹೊಂದಿದೆ. 130 ಸರ್ಕಾರಿ ಶಾಲೆಗಳಿಗೆ ಶೌಚಾಲಯದ ನೆರವು, ಗುಜರಾತಿನ ಗಾಂಧೀ ಆಶ್ರಮ ಶಾಲೆಯ ನವೀಕರಣ ಹೀಗೆ ಶೈಕ್ಷಣಿಕ ಕಾಳಜಿಯನ್ನು ಮುಂದುವರೆಸಿಕೊಂಡು ಬರುತ್ತಿದೆ ಎಂದವರು ಹೇಳಿದರು.
ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಎಸ್. ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ದುಬೆ ಅವರನ್ನು ಅಸೋಸಿಯೇಶನ್ ವತಿಯಿಂದ ಸಮ್ಮಾನಿಸಲಾಯಿತು.
ಉಪಾಧ್ಯಕ್ಷ ಎಂ.ಅಣ್ಣಪ್ಪ ಪೈ, ಕೆನರಾ ಬ್ಯಾಂಕ್ ಮಂಗಳೂರು ವಲಯ ಡಿಜಿಎಂ ಸುಜಾತಾ ಕರುಣಾಕರನ್ ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಎಂ.ರಂಗನಾಥ ಭಟ್ ಪ್ರಾಸ್ತಾವಿಕ ಮಾತುಗಳೊಂದಿಗೆ ಅತಿಥಿಯನ್ನು ಪರಿಚಯಿಸಿದರು.
ಶಾಲಾ ಮೆನೇಜರ್ ಕೆ.ಸುರೇಶ್ ಕಾಮತ್ ಸ್ವಾಗತಿಸಿದರು. ಶಾಲಾ ಸಂಚಾಲಕ ಎಂ.ವಾಮನ ಕಾಮತ್ ವಂದಿಸಿದರು. ಶಿಕ್ಷಕಿ ಸುಜಾತಾ ಪೈ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಆಡಳಿತ ಮಂಡಳಿ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಪದಾಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯಿನಿ ಗಾಯತ್ರೀ ಪೈ, ಕೆನರಾ ಬ್ಯಾಂಕ್, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರುಗಳು ಸಮಾರಂಭದಲ್ಲಿ ಹಾಜರಿದ್ದರು.
ಶಾಲಾ ಆವರಣದಲ್ಲಿ ಕೆನರಾ ಲಾಂಜ್ ಕೊಡುಗೆ
ಕೆನರಾ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಇಲ್ಲಿನ ಚಟುವಟಿಕೆಗಳಿಂದ ಸಂತಸವಾಗಿದೆ ಎಂದು ಸಂಸ್ಥಾಪಕರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಳಕಿತರಾದ ದುಬೆ ಪ್ರತಿಕ್ರಿಯಿಸಿದರು. ತಮ್ಮದೇ ಸಹೋದರ ಸಂಸ್ಥೆಗೆ ನಮ್ಮ ಕೊಡುಗೆ ಎಷ್ಟು ಸಂದರೂ ಸಾಲದು ಎಂದು ಅಭಿಮಾನ ವ್ಯಕ್ತಪಡಿಸಿದ ಅವರು ಬಳಿಕ ಸಭಾ ಕಾರ್ಯಕ್ರಮದಲ್ಲಿ ನೂತನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕೆನರಾ ಎಟಿಎಂ, ಲಾಂಜ್ ತೆರೆಯುವ ಉತ್ಸಾಹದ ಕೊಡುಗೆ ಪ್ರಕಟಿಸಿದರು. ವಿದ್ಯಾಥರ್ಿಗಳು ಕನಸುಗಾರರಾಗಬೇಕು. ಮೌಲ್ಯ ಮತ್ತು ಶಿಸ್ತಿನ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ ವೈಫಲ್ಯವನ್ನೂ ಯಶಸ್ಸಿನ ಮೆಟ್ಟಿಲಾಗಿ ಭಾವಿಸಬೇಕು ಎಂದ ಅವರು ಶಿಕ್ಷಕರಾಗಿ ತನಗೂ ಅನುಭವವಿದ್ದು ಮಕ್ಕಳ ಸಾಧನೆಯಿಂದ ಶಿಕ್ಷಕರಿಗೆ ಸಿಗುವ ಸಂತೋಷಕ್ಕೆ ಬೆಲೆ ಕಟ್ಟಲಾಗದು ಎಂದು ಅನುಭವ ಹಂಚಿಕೊಂಡದರು.
Click this button or press Ctrl+G to toggle between Kannada and English