ಬಲ್ಮಠ-ಬೆಂದೂರ್ವೆಲ್ ರಸ್ತೆಯ ಏಕಮುಖ ಸಂಚಾರ ಅವ್ಯವಸ್ಥೆ ಜಿಲ್ಲಾಧಿಕಾರಿಗೆ ದೂರು

6:34 PM, Friday, July 11th, 2014
Share
1 Star2 Stars3 Stars4 Stars5 Stars
(4 rating, 6 votes)
Loading...
Bendoor Road

ಮಂಗಳೂರು: ಮಂಗಳೂರಿನ ಸಂಚಾರಿ ಪೊಲೀಸರು ನಗರದ ಬೆಂದೂರುವೆಲ್-ಬಲ್ಮಠ ರಸ್ತೆಯನ್ನು ಏಕಮುಖ ಸಂಚಾರ ವ್ಯವಸ್ಥೆಗೊಳಿಸಿರುವುದರಿಂದ ಸ್ಥಳೀಯ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಆಸ್ಪತ್ರೆಗೆ ಬರುವ ರೋಗಿಗಳಿಗೆ, ಪರಿಸರದಲ್ಲಿ ವ್ಯಾಪಾರ ವಹಿವಾಟು ನಡೆಸುವ ಉದ್ಯಮಿಗಳಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಬಹಳಷ್ಟು ತೊಂದರೆ ಆಗುತ್ತಿದೆ ಎಂದು ಆರೋಪಿಸಿ ಹಾಗೂ ತಕ್ಷಣ ಈ ರಸ್ತೆಯ ಅವ್ಯವಸ್ಥೆಯನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕೆಂದು ಆಗ್ರಹಿಸಿ ಬೆಂದೂರ್ವೆಲ್-ಬಲ್ಮಠ-ಕಂಕನಾಡಿ ಪರಿಸರದ ನಿವಾಸಿಗಳು ಹಾಗೂ ಸ್ಥಳೀಯ ವ್ಯಾಪಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.

ಸದ್ರಿ ರಸ್ತೆಯನ್ನು ಏಕಮುಖ ಸಂಚಾರಿ ರಸ್ತೆಯನ್ನಾಗಿ ಪರಿವರ್ತಿಸಿದ ಮೇಲೆ ಈ ಪರಿಸರದಲ್ಲಿ ಹಲವಾರು ಅಪಘಾತಗಳು ಸಂಭವಿಸಿದೆ. ಮಾತ್ರವಲ್ಲದೇ ಇಲ್ಲಿ ಇದೀಗ ಪಾದಚಾರಿ ರಸ್ತೆ ಇಲ್ಲದೇ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಕೊಂಡು ನಡೆದಾಡ ಬೇಕಾದ ಪರಿಸ್ಥಿತಿ ಉದ್ಬವವಾಗಿದೆ.

ಈ ಪರಿಸರದಲ್ಲಿ ನಜರತ್ ಕಾನ್ವೆಂಟ್ ಶಾಲೆ ಸೇರಿದಂತೆ ಐದು ವಿದ್ಯಾ ಸಂಸ್ಥೆಗಳು, ಆಸ್ಪತ್ರೆಗಳು, ಬ್ಯಾಂಕ್ ಗಳು, ಅಂಚೆ ಕಛೇರಿ, ತೋಟಗಾರಿಕೆ ಇಲಾಖೆ, ಸರಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿಗೆ ಬರುವವರಿಗೆ ಈ ಏಕಮುಖ ಸಂಚಾರ ವ್ಯವಸ್ಥೆಯಿಂದ ಬಹಳಷ್ಟು ತೊಂದರೆಯಾಗುತ್ತಿದ್ದೆ.

ಅಲ್ಲದೇ ಸರಕಾರ ಇಂಧನ ಉಳಿಸಿ ಆಂದೋಲನ ನಡೆಸುತ್ತಿದ್ದರೂ ಇಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಕೈಗೊಂಡಿದ್ದರಿಂದ 100 ಮೀಟರ್ ಕ್ರಮಿಸಬೇಕಾದವರು 1 ರಿಂದ 2 ಕಿಲೋ ಮೀಟರ್ ಹೆಚ್ಚುವರಿ ದೂರವನ್ನು ಕ್ರಮಿಸಬೇಕಾದ ಪರಿಸ್ಥಿತಿ ಬಂದೊಂದಗಿದೆ. ರಿಕ್ಷಾ ಚಾಲಕರು ಈ ಪರಿಸರದಲ್ಲಿ ಸುತ್ತು ಬಳಸಿ ಬರಬೇಕಾದ್ದರಿಂದ ಪ್ರಯಾಣಿಕರು ಹೆಚ್ಚಿನ ಹಣ ತೆರಬೇಕಾಗುತ್ತದೆ.
ಮಾತ್ರವಲ್ಲದೇ ರಾತ್ರಿ ವೇಳೆ ಬೆಂಗಳೂರು ಸೇರಿದಂತೆ ಬೇರೆ ಊರುಗಳಿಗೆ ತೆರಳುವ ಬಸ್ ಗಳು ಹಾಗೂ ಇತರ ವಾಹನಗಳು, ಮೊದಲಿನ ರೀತಿಯಲ್ಲಿಯೇ ಈ ರಸ್ತೆಯಲ್ಲಿ ಚಲಿಸುವುದರಿಂದ ಹಗಲಿನಲ್ಲಿ ಒಂದು ನಿಯಮ ರಾತ್ರಿಯಲ್ಲಿ ಮತ್ತೊಂದು ನಿಯಮದಿಂದ ಮತ್ತಷ್ಟು ಅಪಘಾತಗಳು ಸಂಭವಿಸುತ್ತಿದೆ.

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟು, ಪರಿಶೀಲನೆ ನಡೆಸಿ, ಈ ಏಕ ಮುಖ ಸಂಚಾರ ವ್ಯವಸ್ಥೆಯಿಂದ ಇನ್ನು ಮುಂದಕ್ಕೆ ಹೆಚ್ಚಿನ ದುರ್ಘಟನೆ ಸಂಭವಿಸುವ ಮುನ್ನವೇ ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ನಿಯೋಗದಲ್ಲಿ ಮನಪಾ ಸದಸ್ಯ ನವೀನ್ ಡಿಸೋಜಾ, ಉದ್ಯಮಿಗಳಾದ ಪಟೇಲ್ ಗೋಪಿನಾಥ ರಾವ್ ಪುನರೂರು, ನಾಗೇಶ್, ರಾಘವೇಂದ್ರ ರಾವ್, ಅಜಿತ್, ಪಿತಾಂಬರ ಶೆಟ್ಟಿಗಾರ್ ಇನ್ನಿತರರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English