ಮಂಗಳೂರು ನಗರದಲ್ಲಿ ತೀವ್ರವಾದ ಪಾರ್ಕಿಂಗ್ ಸಮಸ್ಯೆ : ಡಿಸಿ ವಿಶೇಷ ಸಭೆ

6:33 PM, Saturday, July 19th, 2014
Share
1 Star2 Stars3 Stars4 Stars5 Stars
(4 rating, 5 votes)
Loading...

MUDA

ಮಂಗಳೂರು : ವಾಹನಗಳ ಪಾರ್ಕಿಂಗ್ ಸಮಸ್ಯೆ ಮಂಗಳೂರು ನಗರದಲ್ಲಿ ತೀವ್ರವಾಗಿ ಕಾಡುತ್ತಿದ್ದು, ಈ ನಿಟ್ಟಿನಲ್ಲಿ ಮುಂದಿನ ತಿಂಗಳು ವಿಶೇಷ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.

ಅವರು ಶನಿವಾರ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಂಗಳೂರು ನಗರದ ಬೆಳವಣಿಗೆಗೆ ಪೂರಕವಾಗಿ ಪಾರ್ಕಿಂಗ್ ವ್ಯವಸ್ಥೆ ಸಿದ್ಧಗೊಂಡಿಲ್ಲ. ವಾಹನಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳಗೊಂಡಿದ್ದರೂ, ರಸ್ತೆ ಅಭಿವೃದ್ಧಿ ಅದಕ್ಕೆ ಅನುಗುಣವಾಗಿಲ್ಲ. ಬಹುಮಹಡಿ ವಾಣಿಜ್ಯ ಕಟ್ಟಡಗಳು ಮತ್ತು ಅಪಾರ್ಟ್ ಮೆಂಟ್ ಗಳ ನಿರ್ಮಾಣದಲ್ಲೂ ಪಾರ್ಕಿಂಗ್ ವ್ಯವಸ್ಥೆ ವಿನ್ಯಾಸದಂತೆ ನಿರ್ಮಿಸದೆ ಉಲ್ಲಂಘಿಸುತ್ತಿರುವ ಪ್ರಕರಣಗಳೂ ಅಧಿಕವಾಗಿವೆ ಎಂದು ಅವರು ಹೇಳಿದರು.

ವಾಣಿಜ್ಯ ಬಹುಮಹಡಿ ಕಟ್ಟಡಗಳ ನಿರ್ಮಾಣದ ಬಳಿಕ ರಸ್ತೆ, ಫುಟ್ಪಾತ್ ಮತ್ತು ಕಟ್ಟಡದ ಜಾಗ ಪರಸ್ಪರ ವ್ಯತ್ಯಾಸವಿಲ್ಲದಂತೆ ಒಂದೇ ರೀತಿ ನಿರ್ಮಿಸಿರುವುದು ಕಂಡುಬಂದಿದೆ. ಇದರಿಂದ ಸಂಚಾರ ಸಮಸ್ಯೆ ಮತ್ತು ಪಾರ್ಕಿಂಗ್ ವ್ಯವಸ್ಥೆ ಬಿಗಡಾಯಿಸಲು ಕಾರಣವಾಗಿದೆ. ನಿಯಮಾನುಸಾರ, ಅಪಾರ್ಟ್ ಮೆಂಟ್ ಗಳಿಗೆ ಭೇಟಿ ಕೊಡುವವರ ವಾಹನಗಳಿಗೆ ಕಟ್ಟಡದ ಒಳಗಿನಲ್ಲಿಯೇ ಪಾರ್ಕಿಂಗ್ ಗೆ ಅವಕಾಶ ಮಾಡಬೇಕು. ಇದಕ್ಕಾಗಿ ವಿನ್ಯಾಸ ಅನುಮೋದನೆ ಸಂದರ್ಭದಲ್ಲಿಯೇ ಷರತ್ತು ವಿಧಿಸಲಾಗುತ್ತಿದೆ. ಆದರೆ, ನಗರದ ಹಲವು ಅಪಾರ್ಟ್ ಮೆಂಟ್ ಗಳಾ ಗೇಟಿನಲ್ಲಿ, ಅಲ್ಲಿಗೆ ಭೇಟಿಕೊಡುವ ಹೊರಗಿನವರ ವಾಹನಗಳ ಪಾರ್ಕಿಂಗ್ ಗೆ ಅವಕಾಶವಿಲ್ಲ ಎಂಬ ಬೋರ್ಡ್ ತೂಗುಹಾಕಲಾಗಿದೆ. ಇದು ನಿಯಮದ ಉಲ್ಲಂಘನೆಯಾಗಿದ್ದು, ಈ ಬಗ್ಗೆ ಕ್ರಮ ಜರುಗಿಸುವಂತೆ ಅವರು ಮೂಡಾ ಅಧಿಕಾರಿಗಳಿಗೆ ಸ್ರೂಚಿಸಿದರು.

ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಮಾತನಾಡಿ, ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡಿದ ಬಳಿಕ ಅವು ನಿಗದಿತ ವಿನ್ಯಾಸದಂತೆನಿರ್ಮಾಣವಾಗುತ್ತಿರುವ ಬಗ್ಗೆ ಅಧಿಕಾರಿಗಳು ನಿಗಾವಹಿಸಬೇಕು. ಈ ರೀತಿ ನಿಗಾ ಇರದೇ ಇರುವುದರಿಂದಲೇ ನಿಯಮ ಉಲ್ಲಂಘಿಸಿ, ವಿನ್ಯಾಸ ಬದಲಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೇಳಿದರು. ಮುಖ್ಯ ರಸ್ತೆಗಳಲ್ಲೇ ವಾಣಿಜ್ಯ ಚಟುವಟಿಕೆಗಳ ಕಟ್ಟಡಗಳ ನಿರ್ಮಾಣದಿಂದ ಸುಗಮ ಸಂಚಾರ ವ್ಯವಸ್ಥೆಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ, ಹೊಸ ಕಟ್ಟಡಗಳ ನಿರ್ಮಾಣದ ಸಂದರ್ಭದಲ್ಲಿ ಮೂಲಸೌಕರ್ಯ ಸೌಲಭ್ಯ, ಪಾರ್ಕ್ ಮತ್ತಿತರ ಸೌಲಭ್ಯಗಳನ್ನು ಖಾತ್ರಿ ಪಡಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಮಹಾನಗರಪಾಲಿಕೆ ಜಂಟಿ ಆಯುಕ್ತ ಗೋಕುಲದಾಸ್ ನಾಯಕ್, ಮೂಡಾ ಪ್ರಭಾರ ಆಯುಕ್ತ ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English