ಕಂಕನಾಡಿ ಮಾರುಕಟ್ಟೆಯ ಕೆಸರು ಕೊಚ್ಚೆಯನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ ವರ್ತಕರು

11:59 PM, Wednesday, July 23rd, 2014
Share
1 Star2 Stars3 Stars4 Stars5 Stars
(4 rating, 6 votes)
Loading...
kankanady Market

ಮಂಗಳೂರು : ಕಂಕನಾಡಿ ಮಾರುಕಟ್ಟೆಯ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಲು ವಿವಿಧ ಚುನಾಯಿತ ಪ್ರತಿನಿಧಿಗಳಿಗೆ ಮಹಾನಗರಪಾಲಿಕೆಗೆ ಹಲವಾರು ಸಲ ಮನವಿ ಮಾಡಿಕೊಂಡಿದ್ದರೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಾರದಿದ್ದ ಕಾರಣ ಕಂಕನಾಡಿ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರಸ್ಥರು ಶ್ರಮದಾನ ಮಾಡಿ ಮಾರುಕಟ್ಟೆಯನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಕೈಗೊಂಡರು.

ಮಾರುಕಟ್ಟೆಯನ್ನು ಸುಸ್ಥಿತಿಯಲ್ಲಿಡಲು ಕ್ರಮ ಕೈಗೊಳ್ಳಲು ಕಳೆದ ಹತ್ತು ತಿಂಗಳಲ್ಲಿ ಆರೋಗ್ಯ ಮಂತ್ರಿಗಳಾದ ಶ್ರೀ ಯು. ಟಿ. ಖಾದರ್, ಸ್ಥಳೀಯ ಶಾಸಕರಾದ ಶ್ರೀ ಜೆ. ಆರ್. ಲೋಬೋ, ಉಸ್ತುವಾರಿ ಮಂತ್ರಿಗಳಾದ ಶ್ರೀ ರಮಾನಾಥ ರೈ, ನಿಕಟಪೂರ್ವ ಹಾಗೂ ಹಾಲಿ ಜಿಲ್ಲಾಧಿಕಾರಿಗಳು, ಸ್ಥಳೀಯ ಕಾರ್ಪೋರೇಟರ್, ನಗರಪಾಲಿಕೆಯ ಕಮಿಷನರ್ ಹಾಗೂ ಮೇಯರ್ಗಳಿಗೆ ಹಲವಾರು ಸಲ ಕಂಕನಾಡಿ ಮಾರುಕಟ್ಟೆ ವರ್ತಕರ ಸಂಘದ ನೇತೃತ್ವದಲ್ಲಿ ಹಲವಾರು ಮನವಿಗಳನ್ನು ಸಲ್ಲಿಸಲಾಗಿತ್ತು. ಕಂಕನಾಡಿ ಮಾರುಕಟ್ಟೆಯನ್ನು ಹೊಕ್ಕರೆ ಕೊಟ್ಟ ಮನವಿಗಳೆಲ್ಲವೂ ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ ಆಗಿದೆ ಎನ್ನುತ್ತಾರೆ ವರ್ತಕರು.

ಸ್ಥಳೀಯ ಶಾಸಕರಾದ ಶ್ರೀ ಜೆ. ಆರ್. ಲೋಬೋರವರು ಸುಮಾರು ಒಂದು ವರ್ಷದ ಹಿಂದೆ ಮಾರುಕಟ್ಟೆಗೆ ಅನಿರೀಕ್ಷಿತ ಭೇಟಿ ನೀಡಿ ಶೌಚಾಲಯದ ಸುತ್ತ ಇಂಟರ್ಲಾಕ್ ಹಾಕುವುದಾಗಿ ನೀಡಿದ ಭರವಸೆ ಯಾವಾಗ ಈಡೇರುವುದು ಎಂದು ಮಾರುಕಟ್ಟೆಯ ವರ್ತಕರು ಕಾಯುತ್ತಿದ್ದಾರೆ. ಪ್ರತಿ ಬಾರಿ ಮನವಿ ಸಲ್ಲಿಸಲು ಹೋದಾಗ ಮನೆಯ ಸಮಸ್ಯೆಯನ್ನು ಬಗೆಹರಿಸಲಾಗದವ ಮನೆಯ ಕಿಟಿಕಿ, ಬಾಗಿಲು ಗೋಡೆಗಳಿಗೆ ಬಣ್ಣ ಬಳಿದು ತನ್ನ ಮನೆ ಚೆನ್ನಾಗಿದೆ ಎಂಬ ರೀತಿಯ ಉತ್ತರ ಕೊಟ್ಟು ನಮ್ಮ ಬಾಯಿ ಮುಚ್ಚಿಸಿ ಕಳುಹಿಸುತ್ತಾರೆ ಎಂದು ವರ್ತಕ ಸಂಘದವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಬರುವ ಗ್ರಾಹಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮಾರುಕಟ್ಟೆಯ ವರ್ತಕರೆಲ್ಲರೂ ಸೇರಿ ಮಾರುಕಟ್ಟೆಯ ಪ್ರವೇಶದ್ವಾರದ ಬಳಿ ಕೆಸರು ಕೊಚ್ಚೆಯನ್ನು ತೆಗೆಯುವ ಕಾರ್ಯವನ್ನು ಕೈಗೊಂಡರು. ಶ್ರಮದಾನ ಕಾರ್ಯದಲ್ಲಿ ಸಂಘದ ಅಧ್ಯಕ್ಷರಾದ ಅಲಿಹಸನ್, ಕಾರ್ಯದಶರ್ಿ ರೋಶನ್ ಪತ್ರಾವೊ, ಉಪಾಧ್ಯಕ್ಷ ವಸಂತ್, ಸದಸ್ಯರಾದ ಧೀರಜ್, ಸತ್ತಾರ್, ನವೀನ್, ಝಹೀರ್ ಮುಂತಾದವರು ಪಾಲ್ಗೊಂಡರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English