ಕೋಣಾಜೆ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ವೀರ ರಾಣಿ ಅಬ್ಬಕ ಉತ್ಸವ ಸಮಿತಿ ವತಿಯಿಂದ ಮಂಗಳೂರು ಹೊರವಲಯ ಅಸೈಗೋಳಿಯ ರಾಣಿ ಅಬ್ಬಕ್ಕ ವೇದಿಕೆಯಲ್ಲಿ ಮೇಯರ್ ರಜನಿ ದುಗ್ಗಣ್ಣ ದೀಪ ಬೆಳಗಿಸುವುದರ ಮೂಲಕ ವೀರ ರಾಣಿ ಅಬ್ಬಕ್ಕ ಉತ್ಸವ 2011ಕ್ಕೆ ಚಾಲನೆ ನೀಡಿದರು.
ಜನಪದ ದಿಬ್ಬಣದ ವಿಶೇಷ ಆಕರ್ಷಣೆಗಳಾದ ಪೂರ್ಣಕೊಂಭ, ಮಂಗಳವಾದ್ಯ, ಕೀಲುಕುದುರೆ, ಯಕ್ಷಗಾನ ಗೊಂಬೆ, ಕರಗನೃತ್ಯ, ಬ್ಯಾರಿ ಸಂಪ್ರದಾಯದ ದಫ್, ತಾಲೀಮು ಆಟ, ಕಳಂಜಿ, ಕಂಗೀಲು, ಬಣ್ಣದ ಕೊಡೆಗಳು, ಬ್ಯಾಂಡ್, ಚೆಂಡೆ ವಾದನ, ದೋಣಿಯೇರಿದ ಅಬ್ಬಕ್ಕ ಟ್ಯಾಬ್ಲೋ, ಮೊದಲಾದವುಗಳ ಮೆರವಣಿಗೆಯು ದೇರಳಕಟ್ಟೆಯಿಂದ ಅಸೈಗೋಳಿಯ ರಾಣಿ ಅಬ್ಬಕ್ಕ ವೇದಿಕೆಯವರೆಗೆ ಸಾಗಿ ಬಂತು.
ಜನಪದ ದಿಬ್ಬಣದ ಉದ್ಘಾಟನೆಯನ್ನು ಮಂಗಳೂರು ಶಾಸಕ ಯು.ಟಿ. ಖಾದರ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಜನಪದ ಕಲಾವಿದೆ ಶ್ರಿಮತಿ ಕರ್ಗಿ ಶೆಡ್ದಿ ಆಳದಂಗಡಿ ನೆರವೇರಿಸಿದರು.
ಉನ್ನತ ಶಿಕ್ಷಣ ಸಚಿವ ಡಾ|| ವಿ.ಎಸ್. ಆಚಾರ್ಯ ಮಾತನಾಡಿ ರಾಣಿ ಅಬ್ಬಕ್ಕ ಉತ್ಸವವನ್ನು ಇನ್ನಷ್ಟು ವಿಜೃಂಭಣೆಯಿಂದ ಆಚರಿಸಲು ಸರಕಾರದ ವತಿಯಿಂದ ವ್ರತೀ ವರ್ಷ ಅನುದಾನದ ವ್ಯವಸ್ಥೆಯನ್ನು ಮಾಡುವುದಾಗಿ ಭರವಸೆ ನೀಡಿದರು. ರಾಜ್ಯದಲ್ಲಿ ನೆಲೆಸಿರುವ ಬೇರೆ ಬೇರೆ ಜಾತಿ, ಸಂಸ್ಕೃತಿ, ಕಲೆ ಧರ್ಮಗಳ ಜನರಿಗೆ ತಿಳುವಳಿಕೆ ನೀಡುವಂತಹ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರತಿ ವರ್ಷ ನಡೆಸಿಕೊಂಡು ಬರಬೇಕು, ಮುಂದಿನ ವರ್ಷದಿಂದ ಊರಿನ ಹಿರಿಯರು, ಜನಪ್ರತಿನಿಧಿಗಳು, ಜನಪದ ತಜ್ಞರು ಸೇರಿ ಉತ್ಸವವನ್ನು ಇನ್ನಷ್ಟು ವೈವಿದ್ಯತೆಯಿಂದ ಆಚರಿಸೋಣ ಎಂದು ತಿಳಿಸಿದರು.
ಉತ್ಸವಕ್ಕೆ ಕರ್ನಾಟಕ ಸರಕಾರ 25 ಲಕ್ಷ ರೂಪಾಯಿ ಮಂಜೂರು ಮಾಡಿರುವುದನ್ನು ಶಾಸಕ ಯು.ಟಿ. ಖಾದರ್ ಶ್ಲಾಘಿಸಿದರು.
ವೇದಿಕೆಯಲ್ಲಿ ಸುಲೋಚನ ಬಿ.ಕೆ.ಭಟ್, ಡಾ| ಬಿ.ಮಾಧವ ಭಂಡಾರಿ, ಕೆ.ಜಯರಾಮ ಶೆಟ್ಟಿ, ಹೈದರ್ ಪರ್ತಿಪಾಡಿ, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಶಕುಂತಲಾ.ಎಂ, ಕುಂಬ್ಳೆ ಸುಂದರ ರಾವ್, ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English