ಮನಸ್ಸು ಮಾನಸ ಸರೋವರದಂತಿರಬೇಕು : ರಾಘವೇಶ್ವರಶ್ರೀ

8:59 PM, Friday, July 25th, 2014
Share
1 Star2 Stars3 Stars4 Stars5 Stars
(No Ratings Yet)
Loading...
Raghaveshwaraಕೆಕ್ಕಾರು: ನಮ್ಮ ಜೀವನದಲ್ಲಿ ‘ಬೇಕು’ ಎನ್ನುವುದು ನಿರಂತರ, ಸಾಕು ಎನ್ನುವವರೇ ಇಲ್ಲ. ನಾವು ದುಃಖ, ಕಷ್ಟ ಬಂದಾಗ ಮಾತ್ರ ಸಾಕು ಎನ್ನುತ್ತೇವೆ, ಸುಖ ಬಂದಾಗ ಇನ್ನೂ ಬೇಕು ಎನ್ನುತ್ತೇವೆ. ನಮ್ಮ ‘ಬೇಕು’ ಗಳು ನಾಡನ್ನು ಕಾಡಿದರೆ ನಾಡು-ಕಾಡಾಗುತ್ತದೆ. ಕಾಡನ್ನು ಕಾಡಿದರೆ ಅದು ಸುಡುಗಾಡಾಗುತ್ತದೆ ಎಂದು ರಾಘವೇಶ್ವರಶ್ರೀಗಳು ನುಡಿದರು. ಜಯ ಚಾತುರ್ಮಾಸ್ಯದ ಅಂಗವಾಗಿ ಕೆಕ್ಕಾರಿನಲ್ಲಿ ನಡೆಯುತ್ತಿರುವ ‘ರಾಮಕಥೆ’ಯನ್ನು ಅನುಗ್ರಹಿಸಿ ಅವರು ಮಾತನಾಡುತ್ತಾ ನಮ್ಮ ‘ಮನಸ್ಸು’ ಎನ್ನುವುದು ‘ಮಾನಸ ಸರೋವರದಂತಿರಬೇಕು’ ಅದರಂತೆ ಶುದ್ಧ ಸ್ಪಟಿಕ, ವಿಸ್ತಾರ, ಆಳ, ನಿರ್ಮಲ, ನಿಶ್ಚಲವಾಗಿದ್ದರೆ. ಅಂತಹ ಮನಸ್ಸನ್ನು ಹೊಂದಿರುವವರಿಂದ ಮತ್ತೆ ರಾಮರಾಜ್ಯದ ಉದಯವಾಗುವುದು ಸಾಧ್ಯ ಎಂದು ಅವರು ನುಡಿದರು.
ರಾಮನೆಂದರೆ ‘ಶಿಕ್ಷಣ’ ಗುರುವಿಶ್ವಾಮಿತ್ರರ ಸೇವೆ ಮಾಡಿದ ರಾಮ ಲೋಕಕ್ಕೆ ಗುರುಸೇವೆಯ ಮಹತ್ವ ಸಾರಿದ್ದಾನೆ. ತನ್ನ ನಡವಳಿಕೆಯಿಂದಲೇ ಪಾಠ ಹೇಳಿದ್ದಾನೆ. ಕೇವಲ ಬೋಧಿಸುವುದು ಶಿಕ್ಷಣವಲ್ಲ. ನಡೆದು ತೋರಿಸುವುದು ನಿಜವಾದ ಶಿಕ್ಷಣ. ಧರ್ಮವೇ ಉಸಿರಾಗುಳ್ಳವನುರಾಮ ಸತ್ಯಸಂಧ ಆತ, ರಾಮನೆಂದರೆ ಧರ್ಮ, ಧರ್ಮಕ್ಕೆ ಬಲತುಂಬುವಕಾರ್ಯ ಮಾಡಿದವರು ವಿಶ್ವಾಮಿತ್ರರು. ರಾಮನಿಗೆ ವಿದ್ಯೆ ದೊರಕಿದ್ದು ಸುವರ್ಣಕಮಲಕ್ಕೆ ಸುಗಂಧ ಬಂದಂತಾಯಿತು. ವಿಶ್ವಾಮಿತ್ರರು ಕಥೆಯ ಮೂಲಕ ರಾಮನಲ್ಲಿ ಸ್ಪೂರ್ತಿ ತುಂಬಿದರು. ‘ರಾಮಕಥೆಯ’ ಮೂಲಕ ನಾವು ನಿಮ್ಮ ಬದುಕು ಕಟ್ಟುವ ಪ್ರಯತ್ನ ಮಾಡುತ್ತೇವೆ ಎಂದರು. ನಮ್ಮ ಜೀವನದಲ್ಲಿ ಎಲ್ಲವೂ ಮಿತವಾಗಿದ್ದರೆ ಅದು ಹಿತವಾಗಿರುತ್ತದೆ. ಮಾತು ಮಿತವಿರಬೇಕು. ಎಲ್ಲಿ ಮೌನಕ್ಕಿಂತ ಮಾತು ಮುಖ್ಯ ಎಂಬ ಸಂದರ್ಭ ಎದುರಾಗುತ್ತದೋ ಆಗ ಮಾತ್ರ ಮಾತನಾಡಬೇಕು. ನಮ್ಮ ಆಹಾರ ಕೂಡಾ ಮಿತವಿರಬೇಕು ಎಷ್ಟು ಹೆಚ್ಚು ತಿನ್ನುತ್ತೀರೋ ಅಷ್ಟು ಬೇಗ ಸಾಯುತ್ತೀರಿ. ಯಾವ ಸುಖಕ್ಕೆ ದುಃಖದ ಸ್ಪರ್ಷವಿಲ್ಲವೋ ಅದೇ ಸ್ವರ್ಗ. ಸಂತೋಷದಲ್ಲಿದ್ದಾಗ ದಿನ ಕ್ಷಣವಾಗುತ್ತದೆ. ದುಃಖದಲ್ಲಿದ್ದಾಗ ಕ್ಷಣ ದಿನವಾಗುತ್ತದೆ ಎಂದು ಅವರು ನುಡಿದರು. ಮಣ್ಣನ್ನು ಕೊಳಕೆನ್ನಬೇಡಿ ಇದು ಮಣ್ಣಿನಿಂದ ಬಂದ ದೇಹ, ಮಣ್ಣಾಗಿ ಹೋಗುವ ದೇಹ, ಮಣ್ಣಿನಿಂದಲೇ ನಮಗೆ ಅನ್ನ ಮಕ್ಕಳಲ್ಲಿ ಮಣ್ಣಿನ ಬಗ್ಗೆ ಪ್ರೀತಿ ಬೆಳೆಸಿ, ಅಭಿಮಾನ ಬೆಳೆಸಿ ಎಂದು ಕಿವಿಮಾತು ಹೇಳಿದರು. ಕೌಸಲ್ಯಾ ಸುಪ್ರಜಾ ರಾಮಾ ಎನ್ನುವ ಲೋಕದ ಮೊದಲ ಸುಪ್ರಭಾತದಲ್ಲಿ ಕರ್ತವ್ಯ ಮರೆತು ನಿದ್ರಿಸಬೇಡ ಎನ್ನುವ ಸಂದೇಶವಿದೆ. ಅದು ನಮ್ಮೆಲ್ಲರಿಗೂ ಅನ್ವಯಿಸುವಂತದ್ದು ಎಂದರು. ರಾಮಕಥೆಯ ಕಲಾವಿದರ ತಂಡ ಲೋಕಕ್ಕೆ ಆದರ್ಶ. ಪರಸ್ಪರ ಹೊಂದಾಣಿಕೆ, ಸ್ವಾರ್ಥವಿಲ್ಲದ ಸೇವೆ, ಅದು ಅನುಕರಣೀಯ. ಸಮಾಜ ಕೂಡಾ ಹೀಗೇ ಆಗಬೇಕು ಎಂಬುದು ನಮ್ಮ ಆಸೆ ಎಂದು ಶ್ರೀಗಳು ನುಡಿದರು.
ಶ್ರೀಪಾದ ಭಟ್ಟ ಕಡತೋಕಾ ಹಾಡಿದ ಜಯಗಂಗೆ ಜಯಭಾಗೀರಥಿ ಗೀತೆ ಶ್ರೋತೃಗಳ ಮೆಚ್ಚುಗೆಗೆ ಪಾತ್ರವಾಯಿತು.  ರಾಮಕಥೆಯ ಪ್ರಾಯೋಜಕತ್ವವನ್ನು ಕೆನರಾ ಬ್ಯಾಂಕಿನವರು ವಹಿಸಿದ್ದರು. ನಾಗರಾಜ ಭಾಗ್ವತ್, ರಮೇಶ, ಸತ್ಯನಾರಾಯಣ, ಆರ್.ಬಿ. ಹೆಗಡೆ ಪುಷ್ಪಾರ್ಚನೆ ಮಾಡಿದರು. ಶ್ರೀಭಾರತೀ ಪ್ರಕಾಶನದವರು ಪ್ರಕಟಿಸಿದ ‘ಪದ್ಮಪಾದಾಚಾರ್ಯ ಕೃತಿ’ಯನ್ನು ಶ್ರೀಗಳು ಲೋಕಾರ್ಪಣೆ -ಗೊಳಿಸಿದರು. ಡಾ|| ಜಿ.ಜಿ. ಹೆಗಡೆ ಪ್ರಾಯೋಜಕತ್ವ ವಹಿಸಿದ್ದರು.
ಶ್ರೀಗಳವರ ಫೋಟೋವನ್ನು ಖ್ಯಾತ ಜ್ಯೋತಿಷಿ ವಿಷ್ಣು ಪ್ರಸಾದ ಪುಚಕ್ಕಾಡ್ ಬಿಡುಗಡೆಗೊಳಿಸಿದರು. ಆರ್.ಎಸ್. ಭಾಗ್ವತ್ ದಂಪತಿಗಳು ಸರ್ವಸೇವೆ ನೆರವೇರಿಸಿದರು. ಆಂಜನೇಯನ ಸನ್ನಿಧಿಯಲ್ಲಿ ಆರ್.ಬಿ. ಹೆಗಡೆ ಉದ್ದಿನವಡೆ ಕಣಜ ಸೇವೆ ನಡೆಸಿದರು. ರಾಮಕಥಾ ನಿರ್ವಹಣಾ ಸಮಿತಿಯ ಮಾಧ್ಯಮ ಸಂಚಾಲಕ ರವೀಂದ್ರ ಭಟ್ಟ ಸೂರಿ, ರಾಜಾರಾಮ ಹೆಬ್ಬಾರಕರ್ಕಿ , ಎಸ್.ಜಿ. ಭಟ್ಟ ಸಹಕರಿಸಿದರು. ‘ಕಾಮದಹನ’ ರೂಪಕ ಮನೋಜ್ಞವಾಗಿ ಮೂಡಿಬಂತು. ಅನ್ನಪೂರ್ಣೇಶ್ವರಿ ಯಾಗದ ಪ್ರಾಯೋಜಕತ್ವವನ್ನು ಸಂಧ್ಯಾ ಮತ್ತು ನಾಗರಾಜ ಜೋಶಿ ಗುಡಬಳ್ಳಿ ವಹಿಸಿದ್ದರು.  ನಾಲ್ಕು ಸಾವಿರಕ್ಕೂ ಹೆಚ್ಚು ಜನ ರಾಮಕಥೆಯ ಸ್ವಾದ ಸವಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English