ಸುಬ್ರಹ್ಮಣ್ಯ: ಘಟ್ಟ ಪ್ರದೇಶದಲ್ಲಿ ಹಾಗೂಸುಬ್ರಹ್ಮಣ್ಯ ಪರಿಸರದಲ್ಲಿ ಮಳೆಯು ತನ್ನ ರಭಸತೆ ಮತ್ತು ನಿರಂತರತೆಯನ್ನು ಮುಂದುವರೆದಿದ್ದು ಪುಣ್ಯ ನದಿ ಕುಮಾರಧಾರವು ತುಂಬಿ ಹರಿದು ಕುಕ್ಕೆಸುಬ್ರಹ್ಮಣ್ಯ ಸಂಪರ್ಕಿಸುವ ಕುಮಾರಧಾರ ಸೇತುವೆಯು ಮುಳುಗಡೆಗೊಂಡಿದೆ.ಗುರುವಾರ ಸುರಿದ ಕುಂಭದ್ರೋಣ ಮಳೆಗೆ ರಾತ್ರಿ 8.30ರ ಸುಮಾರಿಗೆ ಮುಳುಗಡೆಗೊಂಡಿತು. ಆ ಬಳಿಕ ಮಳೆಯ ಪ್ರಮಾಣ ಅಧಿಕಗೊಂಡು ಶುಕ್ರವಾರ ಕೂಡಾ ಸೇತುವೆಯ ಮೇಲೆ ಹರಿಯುತ್ತಿದ್ದ ಪ್ರವಾಹವು ಕಡಿಮೆಯಾಗಲಿಲ್ಲ. ಇದರಿಂದಾಗಿ ಸುಬ್ರಹ್ಮಣ್ಯ-ಮಂಗಳೂರು ರಾಜ್ಯ ಹೆದ್ದಾರಿಯ ಸಂಚಾರವು ಸ್ಥಗಿತಗೊಂಡಿತು.ಅಲ್ಲದೆ ಕ್ಷೇತ್ರಕ್ಕೆ ಬೆಂಗಳೂರು-ಧರ್ಮಸ್ಥಳ ಮೊದಲಾದ ಭಾಗಗಳಿಂದ ಬರುವ ಭಕ್ತಾಧಿಗಳ ಸಂಚಾರಕ್ಕೆ ತಡೆಯಾಯಿತು. ಸೇತುವೆಯು ಮುಳುಗಡೆಗೊಂಡು ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸೇತುವೆಯ ಎರಡು ಬದಿಗಳಲ್ಲಿ ಕೂಡಾ ಕ್ಷೇತ್ರದಿಂದ ತೆರಳುವ ಹಾಗೂ ಕ್ಷೇತ್ರಕ್ಕೆ ಆಗಮಿಸುವ ಭಕ್ತಾಧಿಗಳು ಮತ್ತು ಅವರನ್ನು ಕರೆದುತಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಗುರುವಾರದಿಂದ ಆರಂಭಕೊಂಡ ಮಳೆಯು ಶುಕ್ರವಾರ ಕೂಡಾ ಮುಂದುವರೆದಿದೆ.ಸುಬ್ರಹ್ಮಣ್ಯ ಮಾತ್ರವಲ್ಲದೆ ಘಟ್ಟ ಪ್ರದೇಶದಲ್ಲಿ ಸುರಿದ ಮಳೆಯು ಕುಮಾರಧಾರದಲ್ಲಿ ನೀರು ಅಧಿಕಗೊಳ್ಳುವಂತೆ ಮಾಡಿತ್ತು. ಸೇತುವೆಗಳ ಎರಡೂ ಬದಿಗಳಲ್ಲಿ ಪೋಲೀಸ್ ಸಿಬ್ಬಂದಿಗಳು ಮತ್ತು ಗೃಹ ರಕ್ಷಕ ದಳ ಕಾರ್ಯಪ್ರವೃತ್ತರಾಗಿದ್ದರು. ಶುಕ್ರವಾರ ಕೂಡಾ ಮಳೆಯು ಮತ್ತೆ ಯಾಥಾ ಸ್ಥಿತಿಯನ್ನು ಕಾಯ್ದುಕೊಂಡಿದೆ. ಪುಣ್ಯ ನದಿ ಕುಮಾರಧಾರ ತುಂಬಿ ಹರಿಯುತ್ತಿರುವುದರಿಂದ ಕುಮಾರಧಾರ ಸ್ನಾನಘಟ್ಟವು ಮುಳುಗಡೆಯಾಗಿದೆ. ಇದರಿಂದಾಗಿ ಭಕ್ತಾಧಿಗಳು ನದಿಯ ಮೇಲ್ಬಾಗದಲ್ಲಿ ತೀರ್ಥ ಸ್ನಾನ ಪೂರೈಸಿದರು.ಅಲ್ಲದೆ ಇದರಿಂದಾಗಿ ಸ್ನಾನಘಟ್ಟದ ಪಕ್ಕದಲ್ಲಿದಲ್ಲಿದ್ದ ಅಂಗಡಿಗಳಿಗೆ ನೀರು ನುಗ್ಗಿತ್ತು. ಸೇತುವೆ ಮುಳುಗಡೆಯಿಂದ ಧರ್ಮಸ್ಥಳ-ಸುಬ್ರಹ್ಮಣ್ಯ, ಉಪ್ಪಿನಂಗಡಿ-ಸುಬ್ರಹ್ಮಣ್ಯ,ಬೆಂಗಳೂರು-ಸುಬ್ರಹ್ಮಣ್ಯ ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು. ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸೇತುವೆಯ ಎರಡು ಬದಿಗಳಲ್ಲಿ ಕೂಡಾ ಕ್ಷೇತ್ರದಿಂದ ತೆರಳುವ ಹಾಗೂ ಕ್ಷೇತ್ರಕ್ಕೆ ಆಗಮಿಸುವ ಭಕ್ತಾಧಿಗಳು ಮತ್ತು ಅವರನ್ನು ಕರೆದುತಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಯಾತ್ರಿಕನೋರ್ವ ಗೃಹ ರಕ್ಷಕ ದಳದ ಸಿಬ್ಬಂದಿಯ ಕಣ್ಣು ತಪ್ಪಿಸಿ ನೀರು ತುಂಬಿರುವ ಸೇತುವೆ ಮೇಲೆ ದಾಟಲು ಯತ್ನಿಸಿದ ಸಂಧರ್ಬ ಆತನನ್ನು ಸಿಬ್ಬಂದಿಗಳು ಎಚ್ಚರಿಸಿ ಹಿಂತುರುಗುವಂತೆ ಸೂಚಿಸಿದರು.
ತಗ್ಗು ಪ್ರದೇಶ ಜಲಾವೃತ:
ಸುಬ್ರಹ್ಮಣ್ಯ ಮಾತ್ರವಲ್ಲದೆ ಇಲ್ಲಿನ ಪರಿಸರದ ಹರಿಹರಪಲ್ಲತ್ತಡ್ಕ,ಕೊಲ್ಲಮೊಗ್ರು, ಕಲ್ಮಕಾರು, ಗುತ್ತಿಗಾರು,ಪಂಜ, ಬಳ್ಪ, ಏನೆಕಲ್, ನಿಂತಿಕಲ್, ಬಿಳಿನೆಲೆ, ನೆಟ್ಟಣ ಮೊದಲಾದೆ ನಿರಂತರ ಮಳೆಯಾದುದರಿಂದ ಈ ಪರಿಸರದಲ್ಲಿ ಹರಿಯುವ ನದಿ ತೊರೆಗಳು ತುಂಬಿ ಹರಿಯುತ್ತಿವೆ. ಬಾರೀ ಮಳೆ ಮತ್ತು ನದಿಗಳು ತುಂಬಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು. ಕೃಷಿ ತೋಟಗಳಿಗೆ ನೀರು ನುಗ್ಗಿದ ಪರಿಣಾಮವಾಗಿ ಕೃಷಿಕರಿಗೆ ನಷ್ಟ ಸಂಭವಿಸಿದೆ. ಸುಬ್ರಹ್ಮಣ್ಯ ಸಮೀಪದ ಕಲ್ಲಾಜೆ ಎಂಬಲ್ಲಿ ಕಲ್ಲಾಜೆ ಹೊಳೆ ತುಂಬಿ ಹರಿದುದರಿಂದ ಇಲ್ಲಿಗೆ ಸನಿಹದ ತೋಟಗಳಿಗೆ ನೀರು ನುಗ್ಗಿತ್ತು. ಕೆಲವು ಪ್ರದೇಶಗಳಲ್ಲಿ ಸಣ್ಣ ಪುಟ್ಟ ಹಾನಿ ಸಂಭವಿಸಿದ್ದು ಬಿಟ್ಟರೆ ಉಳಿದಂತೆ ಗಂಭೀರ ಹಾನಿಯಾದ ಬಗ್ಗೆ ತಿಳಿಸು ಬಂದಿಲ್ಲ.
ನಾಗರಪಂಚಮಿಗೆ ಕ್ಷೇತ್ರಕ್ಕೆ ಆಗಮಿಸಲು ತಡೆ:
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶುಕ್ರವಾರ ನಾಗರಪಂಚಮಿಯ ಸಡಗರಕ್ಕೆ ಮಳೆ ಅಡ್ಡಿ ಪಡಿಸಿತು.ಕುಮಾರಧಾರೆ ಸೇತುವೆ ತಡೆಯಾದುದರಿಂದ ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ನಾಗಾನಿಗೆ ಹಾಲೆರೆಯಲು ಆಗಮಿಸುವ ದೂರದೂರಿನ ಭಕ್ತರಿಗೆ ಸೇತುವೆ ಮುಳುಗಡೆಯಾದುದರಿಂದ ತೊಂದರೆಯಾಯಿತು.ಸೇತುವೆಯ ಕುಲ್ಕುಂದ ಕಡೆಯ ದಡದಲ್ಲಿ ಬಾಟಲಿಗಳಲ್ಲಿ ಹಾಲು ಹಿಡಿದು ಭಕ್ತರು ನಿಂತುಕೊಂಡ ದೃಶ್ಯ ಕಂಡು ಬಂದಿತು. ಕುಲ್ಕುಂದ, ಕೈಕಂಬ ಸೇರಿದಂತೆ ಕಡಬ ಇತ್ಯಾದಿ ಸ್ಥಳಗಳಿಂದ ಆಗಮಿಸುವ ಸ್ಥಳೀಯ ಭಕ್ತರು ಸುತ್ತು ಬಳಸಿ ಕ್ಷೇತ್ರಕ್ಕೆ ಆಗಮಿಸಿದರು.
ಗುತ್ತಿಗಾರು:ಹಲವು ಕೃಷಿಕರ ತೋಟಗಳಿಗೆ ಕಾಡಾನೆ ಧಾಳಿ,ಹಾನಿ
ಗುತ್ತಿಗಾರು ಸಮೀಪದ ನಾಲ್ಕೂರು ಗ್ರಾಮದ ಕೆಲವು ಪ್ರದೇಶಗಳಲ್ಲಿ ಕಳೆದ 3 ದಿನಗಳಿಂದ ಕಾಡಾನೆಗಳು ಕೃಷಿಕರ ತೋಟಗಳಿಗೆ ನುಗ್ಗಿ ಅಪಾರ ಕೃಷಿ ನಾಶ ಪಡಿಸಿದೆ.
ನಾಲ್ಕೂರು ಗ್ರಾಮದ ಹಾಲೆಮಜಲು ಅಮೆ,ಪಂಜಿಪಳ್ಳ ಪ್ರದೇಶಗಳಲ್ಲಿ ಕೃಷಿ ತೋಟಗಳಿಗೆ ಕಾಡಾನೆ ದಾಳಿ ನಡೆಸಿ ಫಲ ಭರಿತ ಅಡಿಕೆ,ತೆಂಗು ಬಾಳೆ ಹಾಗೂ ತೋಟಗಳಿಗೆ ಅಳವಡಿಸಿದ ನೀರಾವರಿ ಪರಿಕರಗಳನ್ನು ಹಾನಿಗೊಳಿಸಿ,ನಷ್ಟಪಡಿಸಿದೆ.
ಜಯರಾಮ ಕಲ್ಲಾಜೆ ಎಂಬವರಿಗೆ ಸೇರಿದ ಬಾಳೆ ಗಿಡ 80,ಕಂಗು 5 ,ಶೇಷಪ್ಪ ಗೌಡ ಏನೆಕಲ್ಲುರವರಿಗೆ ಸೇರಿದ ಬಾಳೆ ಗಿಡ 100,ಕಂಗು 8,ಕುಂಬಡ್ಕ ವಸಂತರವರಿಗೆ ಸೇರಿದ 25 ಬಾಳೆ ಗಿಡ,ಕಂಗು 6,ಬುಡ್ಲೆ ಗುತ್ತು ಪುಷ್ಪಾವತಿಯವರ ತೋಟದ 50 ಬಾಳೆ ಗಿಡ ,10 ಅಡಿಕೆ ಮರ,ಮಾದವ ಗೌಡ ಪಂಜಿಪಳ್ಳ ತೋಟದ 15 ಕಂಗು,ದಮಯಂತಿ ಪಂಜಿಪಳ್ಳರವರಿಗೆ ಸೇರಿದ 25 ಫಲಭರಿತ ಕಂಗು,ಪುರುಷೋತ್ತಮ ತಿಪ್ಪನೂರುರವರಿಗೆ ಸೇರಿದ 2 ಫಲಭರಿತ ತೆಂಗಿನ ಮರ,ಕಂಗು 6 ಮತ್ತು ಮೋನಪ್ಪ ಗೌಡ ಅಮೆ ಎಂಬವರಿಗೆ ಸೇರಿದ 12 ಅಡಿಕೆ ಮರಗಳನ್ನು ಕೆಡವಿ ನಾಶಗೊಳಿಸಿದೆ.ಸ್ಥಳಕ್ಕೆ ನಾಲ್ಕೂರು ಗ್ರಾಮ ಅರಣ್ಯ ಸಮಿತಿ ಸದಸ್ಯ ದಿನೇಶ್ ಹಾಲೆಮಜಲು ಹಾಗೂ ಅರಣ್ಯಾಧೀಕಾರಿಗಳು ಭೇಟಿ ನೀಡಿ ಹಾನಿಗೋಳಗಾದ ಕೃಷಿ ಬೆಳೆಗಳ ನಷ್ಟ ಅಂದಾಜು ಪಟ್ಟಿ ಸಿದ್ಧ ಪಡಿಸಿದ ಇಲಾಖಾ ಪರಿಹಾರಕ್ಕಾಗಿ ಕೃಷಿಕರಿಗೆ ಅರ್ಜಿ ಸಲ್ಲಿಸಲು ಸೂಚಿಸಿದರು.
Click this button or press Ctrl+G to toggle between Kannada and English