ಸುಬ್ರಹ್ಮಣ್ಯದಲ್ಲಿ ಭಕ್ತಿ ಸಂಭ್ರಮದ ನಾಗರ ಪಂಚಮಿ:ಹಾಲು ಸಮರ್ಪಿಸಿದ ಭಕ್ತರು

11:26 PM, Friday, August 1st, 2014
Share
1 Star2 Stars3 Stars4 Stars5 Stars
(4 rating, 5 votes)
Loading...
kukke Subrahmanya

ಸುಬ್ರಹ್ಮಣ್ಯ : ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿಯನ್ನು ಭಕ್ತಿ ಸಡಗರದಿಂದ ಆಚರಿಸಲಾಯಿತು. ಈ ನಿಮಿತ್ತ ಶ್ರೀ ದೇವಳದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾ ಮಂಟಪದಲ್ಲಿ ನಾಗರಾಜನಿಗೆ ಹಾಲು ಮತ್ತು ಎಳನೀರಿನ ಅಭಿಷೇಕ ನೆರವೇರಿತು. ಭಕ್ತಾಧಿಗಳು ನೀಡಿದ ಕ್ಷೀರ ಮತ್ತು ಎಳನೀರನ್ನು ನಾಗರಾಜನಿಗೆ ಪುರೋಹಿತ ಕುಮಾರ ಭಟ್ ಎರೆದರು. ತನುವಿನೊಂದಿಗೆ ಹಿಂಗಾರ ಇತ್ಯಾದಿಗಳನ್ನು ಕೂಡಾ ಭಕ್ತರು ಸಮರ್ಪಿಸಿದರು.

ಮಹಾಪೂಜೆಯ ನಂತರ ನಾಗಪ್ರತಿಷ್ಠಾ ಮಂಟಪದಲ್ಲಿನ ನಾಗರಾಜನಿಗೆ ವಿಶೇಷ ನೈವೇಧ್ಯ ಸಮರ್ಪಣೆ ನೆರವೇರಿತು. ಕುಕ್ಕೆಯಲ್ಲಿ ಪ್ರತಿದಿನ ನಡೆಯುವ ಆಶ್ಲೇಷಾ ಬಲಿ,ಪಂಚಾಮೃತ ಮಹಾಭಿಷೇಕ, ನಾಗಪ್ರತಿಷ್ಠೆ, ಶೇಷ ಸೇವೆ, ಕಾರ್ತಿಕ ಪೂಜೆ ಮೊದಲಾದವುಗಳನ್ನು ಭಕ್ತರು ನೆರವೇರಿಸಿದರು. ಬೆಳಗ್ಗೆಯಿಂದಲೇ ಭಕ್ತಾಧಿಗಳು ತನು ಸಮರ್ಪಣೆ ಮಾಡಿ ಶ್ರೀ ದೇವರ ಸೇವೆಯನ್ನು ನೆರವೇರಿಸಿ ಪ್ರಸಾದ ಸ್ವೀಕರಿಸಿದರು. ಪ್ರಮುಖ ಸೇವೆಗಳಾದ ಆಶ್ಲೇಷಬಲಿ, ನಾಗಪ್ರತಿಷ್ಠೆ, ಶೇಷಸೇವೆಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರವೇರಿತು.ಅಧಿಕ ಸಂಖ್ಯೆಯಲ್ಲಿ ಸ್ಥಳಿಯ ಭಕ್ತರು ಹಾಲು ಎರೆದು ಕೃತಾರ್ಥರಾದರು.ನಾಗರಪಂಚಮಿಯಂದು ಸುಬ್ರಹ್ಮಣ್ಯದ ವಿದ್ಯಾಸಾಗರ ಭಜನಾ ಸಂಗಮದದವರು ಬೆಳಗ್ಗೆಯಿಂದಲೇ ಶ್ರೀಕ್ಷೇತ್ರದಲ್ಲಿ ಭಜನಾ ಸಂಕೀರ್ತನೆಯನ್ನು ನೆರವೇರಿಸಿದರು. ಕಳೆದ ಏಳು ವರ್ಷಗಳಿಂದ ಕ್ಷೇತ್ರದಲ್ಲಿ ನಾಗರ ಪಂಚಮಿಯಂದು ಇವರು ಗಾನಸೇವೆ ನೆರವೇರಿಸುತ್ತಿದ್ದಾರೆ.

ಸೇತುವೆ ಮುಳುಗಡೆ: ಭಕ್ತರಿಗೆ ತೊಂದರೆ:
ನಾಗರಪಂಚಮಿಯ ಪುಣ್ಯ ದಿನ ಕುಕ್ಕೆಯನ್ನು ಸಂಪರ್ಕಿಸುವ ಕುಮಾರಧಾರ ಸೇತುವೆಯು ಮುಳುಗಡೆಯಾದುದರಿಂದ ದೂರದೂರಿನಿಂದ ಪುಣ್ಯದಿನ ಕ್ಷೇತ್ರಕ್ಕೆ ಆಗಮಿಸುವ ಭಕ್ತಾಧಿಗಳಿಗೆ ತೊಂದರೆಯಾಯಿತು. ಅವರು ಸೇತುವೆಯ ಆ ಕಡೆ ನೀರು ಇಳಿಕೆಯಾಗುವುದನ್ನು ಕಾಯಬೇಕಾಯಿತು. ನೀರು ಇಳಿಯುವ ಸಂಭವ ಕಂಡು ಬಾರದ್ದರಿಂದ ಆ ಕಡೆಯವರು ಸುತ್ತು ಬಳಸಿ ಕ್ಷೇತ್ರಕ್ಕೆ ಆಗಮಿಸಿ ತನು ಎರೆದು ಶ್ರೀ ದೇವರ ದರುಶನ ಮಾಡಿ ಪ್ರಸಾದ ಸ್ವೀಕರಿಸಿದರು.ಅಲ್ಲದೆ ಕುಲ್ಕುಂದ, ಕೈಕಂಬ, ಬಿಳಿನೆಲೆ, ನೆಟ್ಟಣ, ಕಡಬ ಮೊದಲಾದ ಕಡೆಗಳಿಂದ ಕ್ಷೇತ್ರಕ್ಕೆ ಬರಲಿದ್ದ ಭಕ್ತರಿಗೆ ಕೂಡಾ ಸೇತುವೆ ಮುಳುಗಡೆ ಸಂಕಷ್ಠ ತಂದೊಡ್ಡಿತು. ಇದರಿಂದಾಗಿ ಸುತ್ತು ಬಳಸಿ ಕ್ಷೇತ್ರಕ್ಕೆ ಬಂದರು.

Valalabe Nagara Panchami

ನಾಗಬನ ಮತ್ತು ಕಟ್ಟೆಗಳಲ್ಲಿ ತನು ಸಮರ್ಪಣೆ:
ಗ್ರಾಮೀಣ ಪ್ರದೇಶಗಳಲ್ಲಿ ನಾಗ ಪಂಚಮಿಯಂದು ನಾಗಬನ ಮತ್ತು ಕಟ್ಟೆಗಳಲ್ಲಿ ವಿಶೇಷ ಪೂಜೆ ನೆರವೇರಿತು. ನಾಯರ್ಕೆರೆ, ಬಳ್ಪ, ಏನೆಕಲ್ಲ್, ಕೊಲ್ಲಮೊಗ್ರ, ಬೆಂಡೋಡಿ, ಗುತ್ತಿಗಾರುನ ಮೊಗ್ರ,ಕಮಿಲ, ಸುಬ್ರಹ್ಮಣ್ಯದ ನೂಚಿಲ, ದೇವರಗದ್ದೆ, ಇಂಜಾಡಿ, ಹೊಸೋಳಿಕೆ, ಏನೆಕಲ್, ಬೀದಿಗುಡ್ಡೆ, ಪಲ್ಲೋಡಿ,ಹರಿಹರ, ಬಾಳುಗೋಡು, ಬಿಳಿನೆಲೆ,ನೆಟ್ಟಣ, ಕೈಕಂಬ, ಚೇರು, ಪಳ್ಳಿಗದ್ದೆ,ಕುಲ್ಕುಂದ,ಇಂಜಾಡಿ ಮೊದಲಾದೆಡೆ ನಾಗನಕಟ್ಟೆಗಳಿಗೆ ತನು ಸಮರ್ಪಿಸುವುದರ ಮೂಲಕ ವಿಶಿಷ್ಟ ರೀತಿಯಲ್ಲಿ ಪೂರ್ವ ಸಂಪ್ರದಾಯದಂತೆ ನಾಗರಪಂಚಮಿಯನ್ನು ಆಚರಿಸಲಾಯಿತು.ಅಲ್ಲದೆ ನಾಗರಾಜನಿಗೆ ಸೀಯಾಳ,ಹೊದ್ಲು,ತೆಂಗಿನ ಕಾಯಿ,ಹೂ ಹಣ್ಣುಗಳನ್ನು ಸಮರ್ಪಿಸಲಾಯಿತು. ಸುಬ್ರಹ್ಮಣ್ಯದ ವನದುರ್ಗಾ ದೇವಿ ದೇವಸ್ಥಾನದ ಬಳಿ ಇರುವ ನಾಗನ ಕಟ್ಟೆಯಲ್ಲಿ ಅರ್ಚಕರು ತನು ಸಮರ್ಪಣೆ ಮಾಡಿದರು.

ಪಂಜದಲ್ಲಿ ನಾಗರಪಂಚಮಿ:
ಸೀಮೆ ದೇವಸ್ಥಾನವಾದ ಪಂಜ ಶ್ರೀಪರಿವಾರ ಪಂಚಲಿಂಗೇಶ್ವರ ದೇವಳದ ನಾಗನಕಟ್ಟೆಯಲ್ಲಿ ತಂಬಿಲ, ಕ್ಞೀರಾಭಿಶೇಕ,ಎಳನೀರಭಿಶೇಕ,ತುಪ್ಪಾಭಿಶೇಕ ಮೊದಲಾದ ಸೇವೆಗಳೊಂದಿಗೆ ನಾಗರಪಂಚಮಿಯನ್ನು ಭಕ್ತಿಯಿಂದಆಚರಿಸಲಾಯಿತು. ಪಂಜ ಪೈಂದೋಡಿ ಶ್ರೀ ಸುಬ್ರಾಯ ದೇವಸ್ಥಾನದ ನಾಗನಕಟ್ಟೆಗೆ ಭಕ್ತಾಧಿಗಳು ಹಾಲು ಮತ್ತು ಸೀಯಾಳವನ್ನು ಸಮರ್ಪಿಸಿದರು. ಇಲ್ಲಿ ನಾಗತಂಬಿಲ, ಕ್ಷೀರಾಭಿಷೇಕ, ತುಪ್ಪದ ಅಭಿಷೇಕ, ಎಳನೀರು ಅಭಿಷೇಕ ನಡೆಯಿತು. ಶಂಖಪಾಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಏನೆಕಲ್, ನಿಡ್ವಾಳ ಮಹಾವಿಷ್ಣು ದೇವಸ್ಥಾನ, ಕೊಚ್ಚಿಲ ಮಯೂರ ವಾಹನ ಸುಬ್ರಹ್ಮಣ್ಯ ದೇವಸ್ಥಾನ ಕಟ್ಟ ಕೊಲ್ಲಮೊಗ್ರ, ಹರಿಹರೇಶ್ವರ ದೇವಸ್ಥಾನ ಹರಿಹರ,ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ,ಕೇರ್ಪಡ ಮಹಿಷ ಮರ್ದಿನಿ ದೇವಸ್ಥಾನ ಮೊದಲಾದ ದೇವಾಲಯಗಳಲ್ಲಿ ಭಕ್ತಾಧಿಗಳು ನಾಗನಿಗೆ ಹಾಲಿನ ಮತ್ತು ಸೀಯಾಳದ ಅಭಿಷೇಕ ನೆರವೇರಿಸಿದರು.

ವಳಲಂಬೆಯಲ್ಲಿ ನಾಗರಪಂಚಮಿ:
ಗುತ್ತಿಗಾರು ಸಮೀಪದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರಪಂಚಮಿಯನ್ನು ಭಕ್ತಿ ಸಡಗರದಿಂದ ಆಚರಿಸಲಾಯಿತು. ಬೆಳಗ್ಗೆ ನಾಗನಿಗೆ ಹಾಲೆರೆಯುವ ಮೂಲಕ ಭಕ್ತಾದಿಗಳು ನಾಗಾರಾಧನೆ ಮಾಡಿದರು. ಇದೇ ವೇಳೆ ದೇವಸ್ಥಾನದಲ್ಲಿ ಸಾಮೂಹಿಕ ಹೋಮ ಸಹಿತ ಆಶ್ಲೇಷ ಬಲಿ ಪೂಜೆಯು ನಡೆಯಿತು. ಈ ಸಂದರ್ಭದಲ್ಲಿ ಊರಿನ ಹಾಗೂ ಪರವೂರಿನ ನೂರಾರು ಭಕ್ತಾದಿಗಳು ಭಾಗವಹಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English