ಧರ್ಮಸ್ಥಳ : ಧರ್ಮಸ್ಥಳದಲ್ಲಿ ನೇತ್ರಾವತಿ ಸ್ನಾನ ಘಟ್ಟದಲ್ಲಿ ಗುರುವಾರ ಸಂಜೆ ನದಿಗೆ ಹಾರಿ ಆತ್ಮಹತ್ಯೆ ಮಾಡಲು ಯತ್ನಿಸಿದ ಮಹಿಳೆಯನ್ನು ದೇವಳದ ಸಿಬ್ಬಂದಿ ಸಕಾಲಿಕ ಪ್ರಜ್ಷೆಯಿಂದ ರಕ್ಷಿಸಿದ ಘಟನೆ ವರದಿಯಾಗಿದೆ.
ಬೆಂಗಳೂರಿನ ನಿವಾಸಿ ಗೀತಾ (ಹೆಸರು ಬದಲಾಯಿಸಲಾಗಿದೆ) ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು ತಂದೆ – ತಾಯಿ ಜೊತೆ ವಾಸ್ತವ್ಯ ಇದ್ದಾರೆ. ಒಬ್ಬ ತಮ್ಮನೂ ಇದ್ದಾನೆ. ಗುರುವಾರ ಅದೇನೋ ಮಾನಸಿಕ ಖಿನ್ನತೆ ಆಕೆಯನ್ನು ಕಾಡಿತು. ಮನೆಯಿಂದ ಬೆಳಿಗ್ಗೆ ಕಚೇರಿಗೆಂದು ಹೊರಟವಳು ಧರ್ಮಸ್ಥಳಕ್ಕೆ ಬರುವ ಬಸ್ ಹತ್ತಿದರು. ಸಂಜೆ 7 ಗಂಟೆಗೆ ಧರ್ಮಸ್ಥಳ ತಲುಪಿದ ಆಕೆ ನೇರವಾಗಿ ನೇತ್ರಾವತಿ ಸ್ನಾನಘಟ್ಟಕ್ಕೆ ಹೋದರು.
ಕಳೆದ ಎರಡು ದಿನಗಳಿಂದ ಈ ಭಾಗದಲ್ಲಿ ಜಾಸ್ತಿ ಮಳೆಯಾಗುತ್ತಿದ್ದು ನೇತ್ರಾವತಿ ನದಿ ತುಂಬಿ ಹರಿಯುತ್ತಿದೆ. ನದಿಯಲ್ಲಿ ಸ್ನಾನಘಟ್ಟದಲ್ಲಿ ಕೆಲವು ಭಕ್ತರು ಸ್ನಾನ ಮಾಡುತ್ತಿದ್ದರು. ಅವರೆಲ್ಲ ನೋಡುತ್ತಿದ್ದಂತೆ ಮಹಿಳೆ ಒಮ್ಮೆಲೇ ನದಿಗೆ ಹಾರಿದರು. ಆಗ ಜನರೆಲ್ಲ ಬೊಬ್ಬೆ ಹಾಕಿದರು. ತಕ್ಷಣ ಅಲ್ಲಿ ಕರ್ತವ್ಯ ನಿರತರಾದ ದೇವಳದ ಸಿಬ್ಬಂದಿ ಯತೀಶ ಗೌಡ ನದಿಗೆ ಧುಮುಕಿ ಸ್ಥಳೀಯರ ಸಹಕಾರದೊಂದಿಗೆ ಆಕೆಯನ್ನು ಮೇಲಕ್ಕೆತ್ತಿ ತಂದರು. ಪ್ರಾಣಾಪಾಯದಿಂದ ಪಾರು ಮಾಡಿದರು. ಪ್ರಥಮ ಚಿಕಿತ್ಸೆ ನೀಡಿದ ಬಳಿಕ ದೇವಳದ ವಸತಿ ಛತ್ರದಲ್ಲಿ ಆಕೆಗೆ ಇರಲು ಅವಕಾಶ ನೀಡಲಾಯಿತು. ಆಕೆಯಿಂದ ಹೆತ್ತವರ ದೂರವಾಣಿ ಸಂಖ್ಯೆ ಪಡೆದು ಮನಗೆ ಮಾಹಿತಿ ನೀಡಲಾಯಿತು. ಆಕೆಯೇ ಹೆತ್ತವರೊಂದಿಗೆ ಮಾತನಾಡಿ ತಾನು ಧರ್ಮಸ್ಥಳದಲ್ಲಿ ಸುರಕ್ಷಿತವಾಗಿ ಇರುವುದಾಗಿ ತಿಳಿಸಿದರು. ಹೆತ್ತವರು ರಾತ್ರಿ ಬಸ್ನಲ್ಲಿ ಬೆಂಗಳೂರಿನಿಂದ ಹೊರಟು ಶುಕ್ರವಾರ ಮುಂಜಾನೆ ಧರ್ಮಸ್ಥಳ ತಲುಪಿದರು.
ಅದೇನೋ ಚಿಂತೆಯಿಂದ ತಾನು ಈ ರೀತಿ ಮಾಡಿರುವುದಾಗಿ ಮಗಳು ಹೆತ್ತವರಲ್ಲಿ ತನ್ನ ತಪ್ಪನ್ನು ತಿಳಿಸಿದರು. ಧರ್ಮಸ್ಥಳದ ಮಂಜುನಾಥ ಸ್ವಾಮಿಯೇ ತಮ್ಮ ಮಗಳನ್ನು ರಕ್ಷಿಸಿದರು ಎಂದು ತಾಯಿ-ತಂದೆ ಸಮಾಧಾನ ಪಟ್ಟರು.
ತಾವೆಲ್ಲರೂ ಧರ್ಮಸ್ಥಳದ ಭಕ್ತರಾಗಿದ್ದು ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ ಹಾಗೂ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಸದಾ ತಮ್ಮ ಮೇಲಿರಲಿ ಎಂದು ಪಾರ್ಥಿಸಿದರು.
ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿ ಮನೆಗೆ ತೆರಳಿದರು.
Click this button or press Ctrl+G to toggle between Kannada and English