ಮಂಗಳೂರು : ಫೆಬ್ರವರಿ 9 ರಿಂದ ಫೆಬ್ರವರಿ 28 ರವರೆಗೆ ಭಾರತ ಜನಗಣತಿ-2011 ನಡೆಯಲಿದ್ದು, ಎಲ್ಲ ಇಲಾಖೆಗಳ ಸಹಕಾರವನ್ನು ಜನಗಣತಿ ನಿರ್ದೇಶಾನಲಯ ಕೋರಿದೆ ಎಂದು ಅಪರ ಜಿಲ್ಲಾಧಿಕಾರಿ ಶ್ರೀ ಪ್ರಭಾಕರ ಶರ್ಮಾ ಅವರು ಹೇಳಿದರು.
ಅವರಿಂದು ಜನಗಣತಿ ನಿರ್ದೇಶಾನಲಯದ ಸೂಚನೆಯಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದರು. ಜನಗಣತಿಯ ಉದ್ದೇಶ ಕೇವಲ ಜನಸಂಖ್ಯಾ ಮಾಹಿತಿಯನ್ನು ಸಂಗ್ರಹಿಸುವವುದಷ್ಟೇ ಅಲ್ಲ; ಜನಗಣತಿ ಸಂಖ್ಯಾಶಾಸ್ತ್ರ, ಆರ್ಥಿಕ ಚಟುವಟಿಕೆ, ಸಾಕ್ಷರತೆ ಮತ್ತು ಶಿಕ್ಷಣ ಮತ್ತು ಕುಟುಂಬಗಳಿಗೆ ಲಭ್ಯವಿರುವ ಸೌಲಭ್ಯಗಳು, ನಗರೀಕರಣ, ಜನನ ಮತ್ತು ಮರಣ ಪ್ರಮಾಣ, ಪರಿಶಿಷ್ಟ ಜಾತಿ ಪಂಗಡಗಳು, ಭಾಷೆ,ಧರ್ಮ ಮತ್ತು ವಲಸೆಗಳ ಬಗ್ಗೆ ವ್ಯಾಪಕವಾದ ಮಾಹಿತಿ ಸಂಗ್ರಹವಾಗಿದೆ. ಗ್ರಾಮ, ಪಟ್ಟಣ ಮತ್ತು ವಾರ್ಡ್ ಮಟ್ಟಗಳಲ್ಲಿ ಮಾಹಿತಿ ಒದಗಿಸುವ ಪ್ರಾಥಮಿಕ ಮೂಲವಾಗಿದೆ.
ಜನಗಣತಿಯ ಕಾರ್ಯಾಚರಣೆಯ ಫಲಶ್ರುತಿಯಾಗಿ ದೊರೆಯುವ ಅಮೂಲ್ಯ ಮಾಹಿತಿಯನ್ನು ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸುವ ಯೋಜನೆಗಳನ್ನು ಮತ್ತು ಕಾರ್ಯನೀತಿಗಳನ್ನು ರೂಪಿಸಲು ಚುನಾವಣಾ ಕ್ಷೇತ್ರಗಳ ಪುನರ್ ವಿಂಗಡಣೆ/ ಕಾಯ್ದಿರಿಸುವಿಕೆ ಮತ್ತು ಹಲವಾರು ಜನಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ ಅನುಷ್ಠಾನಕ್ಕೆ ಬಳಸಬಹುದು. ಭವಿಷ್ಯದ ಅಭಿವೃದ್ಧಿ ಕೆಲಸಗಳಿಗೂ ಇದು ಬಹಳ ಉಪಯುಕ್ತವಾಗಿದೆ.
ಜನಗಣತಿಗೆ ಸಂಬಂಧಿಸಿದ ಪ್ರಚಾರ ಸಾಮಗ್ರಿಗಳನ್ನು ವಿತರಿಸಿ ಗ್ರಾಮೀಣ ಮೂಲಕ್ಕೂ ತಲುಪಿಸಲು ಮುಖ್ಯವಾಗಿ ಶಿಕ್ಷಣ ಇಲಾಖೆ, ಕೃಷಿ ಇಲಾಖೆ,ಆರೋಗ್ಯ ಇಲಾಖೆ, ಅರಣ್ಯ ಇಲಾಖೆಗಳ ಸಹಕಾರವನ್ನು ಅಪರ ಜಿಲ್ಲಾಧಿಕಾರಿಗಳು ಕೋರಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English