ಪಡಿತರ ಚೀಟಿ: ಗೊಂದಲ ನಿವಾರಿಸಲು ಜಿ.ಪಂ. ಅಧ್ಯಕ್ಷರ ಸೂಚನೆ

11:44 PM, Wednesday, August 13th, 2014
Share
1 Star2 Stars3 Stars4 Stars5 Stars
(5 rating, 4 votes)
Loading...

zp kdpಮಂಗಳೂರು : ಪಡಿತರ ಚೀಟಿಗೆ ಎಪಿಕ್  ಕಾರ್ಡ್ ಸಂಖ್ಯೆ ಜೋಡಣೆ ಸಂಬಂದ ಎಪಿಕ್ ನೀಡದವರ ರೇಷನ್ ಕಾರ್ಡ್ ಗಳನ್ನು  ಅಮಾನತಿನಲ್ಲಿಡುವ ಅಥವಾ ರದ್ದುಗೊಳಿಸುವ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಉಂಟಾಗುತ್ತಿದ್ದು, ಈ ಬಗ್ಗೆ ಸ್ಪಷ್ಟವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಿ ಪಡಿತರ ಚೀಟಿ ವ್ಯವಸ್ಥೆಯನ್ನು ಸುಗಮಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ ಸೂಚಿಸಿದ್ದಾರೆ.

ಅವರು ಬುಧವಾರ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ(ಕೆಡಿಪಿ)ಗಳ ಮಾಸಿಕ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಡವರು ಹಲವೆಡೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲು ಬಿಪಿಎಲ್ ಪಡಿತರ ಅಗತ್ಯವಿದೆ. ಆದರೆ, ಕಂಪ್ಯೂಟರ್ ಸರ್ವರ್ನಲ್ಲಿ ಕೆಲವೊಮ್ಮೆ ಪಡಿತರ ಚೀಟಿ ಅಮಾನತುನಲ್ಲಿ ಇಲ್ಲವೇ ರದ್ದುಗೊಂಡಿರುವ ಬಗ್ಗೆ ಮಾಹಿತಿ ಬರುತ್ತಿರುವುದರಿಂದ ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ದೊರಕಲು ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ ಎಂದ ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ, ಜಿಲ್ಲೆಯಲ್ಲಿ ರದ್ದುಗೊಂಡಿರುವ ಮತ್ತು ಅಮಾನತ್ತಿನಲ್ಲಿಟ್ಟಿರುವ ಪಡಿತರ ಚೀಟಿಗಳ ಗ್ರಾಮ ಪಂಚಾಯತ್ವಾರು ಮಾಹಿತಿಯನ್ನು ನೀಡುವಂತೆ ಆಹಾರ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

ರೈತಸಂಪರ್ಕ ಕೇಂದ್ರದಲ್ಲಿ ರೈತರಿಗೆ ಸಂಬಂಧಪಟ್ಟ ಇಲಾಖೆಗಳ ಸಿಬ್ಬಂದಿ/ಅಧಿಕಾರಿಗಳು ತಪ್ಪದೇ ಹಾಜರಿರಬೇಕು. ರಾಜೀವಗಾಂಧಿ ವಿದ್ಯುದ್ದೀಕರಣ ಯೋಜನೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಬೇಕು ಎಂದು ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು. ಪ್ರತೀ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ತಿಂಗಳಿಗೊಮ್ಮೆ ನಡೆಸುವ ಗ್ರಾಮಸ್ನೇಹಿ ಕಾರ್ಯಕ್ರಮದಲ್ಲಿ ಸ್ವೀಕರಿಸುವ ಅಹವಾಲುಗಳಿಗೆ ತ್ವರಿತಗತಿಯಲ್ಲಿ ಮತ್ತು ಸ್ಥಳದಲ್ಲೇ ಪರಿಹಾರ ಒದಗಿಸಲು ಪ್ರಯತ್ನಿಸಬೇಕು ಎಂದು ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಜಿಲ್ಲೆಯಲ್ಲಿ ಹಲವು ಬೃಹತ್ ಕೈಗಾರಿಕೆಗಳು ನದಿಗಳಿಂದ ನೀರು ಪಡೆಯುತ್ತಿವೆ. ಈ ಕೈಗಾರಿಕೆಗಳ ಸುತ್ತಮುತ್ತಲ ಗ್ರಾಮಗಳಿಗೆ ಅಲ್ಲಿಂದಲೇ ಕುಡಿಯುವ ನೀರೊದಗಿಸಲು ಒತ್ತಡ ಹಾಕಲಾಗುವುದು. ಮುಂದಿನ ದಿನಗಳಲ್ಲಿ ಬೃಹತ್ ಕೈಗಾರಿಕೆಗಳು ನೀರಿನ ಪೈಪ್ಲೈನ್ ಹಾಕುವ ಸಂದರ್ಭದಲ್ಲಿಯೇ ಸ್ಥಳೀಯ ಗ್ರಾಮಗಳಿಗೆ ನೀರೊದಗಿಸುವ ಷರತ್ತನ್ನು ವಿಧಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.

ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮಾತನಾಡಿ, ಜಿಲ್ಲೆಯಲ್ಲಿ ವಿಫಲವಾಗಿರುವ ಬೋರ್ವೆಲ್ ಗಳನ್ನು ಮುಚ್ಚಲು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಖಾಸಗಿ ಭೂಮಿಯಲ್ಲಿರುವ ವಿಫಲ ಬೋರ್ವೆಲ್ಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು. ಹೊಸದಾಗಿ ಬೋರ್ವೆಲ್ ಕೊರೆಯಲು ಜಿಲ್ಲಾಧಿಕಾರಿಗಳ ಅನುಮತಿ ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಬೋರ್ವೆಲ್ ಕೊರೆಯುವಾಗಲೇ ಅದು ಅನುಮತಿ ಪಡೆದಿರುವ ಬಗ್ಗೆ ಸ್ಥಳೀಯ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಚಿ.ಕೆ. ಚಂದ್ರಕಲಾ, ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿ ಅಧ್ಯಕ್ಷೆ ಮೀನಾಕ್ಷಿ, ಕೃಷಿ, ಕೈಗಾರಿಕಾ ಸ್ಥಾಯೀ ಸಮಿತಿ ಅಧ್ಯಕ್ಷ ಬಾಲಕೃಷ್ಣ ಸುವರ್ಣ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English