ಅಕ್ರಮ-ಸಕ್ರಮ ಶೀಘ್ರ ವಿಲೇವಾರಿ- ಶಾಸಕಿ ಶಕುಂತಳಾ ಶೆಟ್ಟಿ

6:31 PM, Friday, August 22nd, 2014
Share
1 Star2 Stars3 Stars4 Stars5 Stars
(5 rating, 5 votes)
Loading...
Shakuntala shetty

ವಿಟ್ಲ : ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರಕಾರಿ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸಿಕೊಂಡು ಬಂದಿರುವ ರೈತರ ಜಮೀನನ್ನು ಅಕ್ರಮ-ಸಕ್ರಮ ಕಾರ್ಯಕ್ರಮದಡಿ ಶೀಘ್ರ ವಿಲೇವಾರಿ ಮಾಡಲಾಗುವುದು. ಆದರೆ, ಕುಮ್ಕಿ ಜಮೀನು, ಬನ, ಕಾನ, ಅರಣ್ಯ ಪ್ರದೇಶಗಳನ್ನು ಸಕ್ರಮ ಮಾಡಲಾಗುವುದಿಲ್ಲ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದ್ದಾರೆ.

ಶಾಸಕಿ ಗುರುವಾರ ವಿಟ್ಲ ಪ್ರವಾಸಿ ಮಂದಿರದಲ್ಲಿ ಬಂಟ್ವಾಳ ತಾಲೂಕಿನ ವಿಟ್ಲ ಹೋಬಳಿಯ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಅಕ್ರಮ ಸಕ್ರಮ ವಿಚಾರಣೆ ನಡೆಸಿದರು.

ಕರ್ನಾಟಕ ಭೂಕಂದಾಯ ಕಾಯಿದೆ ಪ್ರಕಾರ ಫಾರ್ಮು 50 ಮತ್ತು 53ರಲ್ಲಿ ಸಲ್ಲಿಸಿದ ವಿಟ್ಲ ಹೋಬಳಿಯ 22 ಮಂದಿ ರೈತರ ಕಡತಗಳನ್ನು ವಿಚಾರಣೆ ನಡೆಸಿ ಬಹುತೇಕ ಅರ್ಜಿಗಳಿಗೆ ಮಂಜೂರಾತಿ ನೀಡಿದರು. ಭೂಮಿ ಮಂಜೂರಾತಿ ಪಡೆದವರಲ್ಲಿ ಮಹಿಳೆಯರು ಸೇರಿದ್ದು ಗಮನಾರ್ಹವಾಗಿತ್ತು. ಲೋಪದೋಷಗಳಿದ್ದ ಮತ್ತು ಕುಮ್ಕಿ ಜಮೀನು ಒಳಗೊಂಡಿದ್ದ ಕೆಲವು ಕಡತಗಳ ವಿಚಾರಣೆಯನ್ನು ಬೈಠಕ್ ಅಧ್ಯಕ್ಷತೆ ವಹಿಸಿದ್ದ ಶಾಸಕಿ ಮುಂದೂಡಿದರು.

ಪ್ರತಿ ತಿಂಗಳು ವಿಧಾನಸಭಾ ವ್ಯಾಪ್ತಿಯಲ್ಲಿ ಎರಡು ಅಕ್ರಮ ಸಕ್ರಮ ಬೈಠಕ್ ನಡೆಸಲಾಗುವುದು. ಮುಂದಿನ ತಿಂಗಳು ಬೈಠಕ್ ಸ್ಥಳದಲ್ಲೇ ಭೂಮಿ ಕಂದಾಯ ಪಾವತಿಸಲು ಅವಕಾಶ ನೀಡಿ,ಹೊಸದಾಗಿ ಭೂಮಿ ಮಂಜೂರು ಪಡೆದ ರೈತರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲಾಗುವುದು ಎಂದು ಶಕುಂತಳಾ ಶೆಟ್ಟಿ ನುಡಿದರು.

ಕುಮ್ಕಿ ಜಮೀನಿಗೆ ಸಂಬಂಧಪಟ್ಟಂತೆ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ರೈತರಿಗೆ ಕೃಷಿ ಜಮೀನಿಗೆ ಸಂಬಂಧಪಟ್ಟ ಕುಮ್ಕಿ ಯಾರಿಗೂ ಪರಭಾರೆಯಾಗುವುದಿಲ್ಲ ಎಂದು ತಿಳಿಸಿದ ಅವರು, ಅಕ್ರಮ ಸಕ್ರಮ ಸಭೆಯಲ್ಲಿ ಕುಮ್ಕಿ ಜಮೀನು ಮಂಜೂರು ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು.

ರೈತರು ಎರಡು ದಶಕಗಳ ಹಿಂದೆ ಫಾರ್ಮು 50 ಮತ್ತು 53ರಲ್ಲಿ ಸಲ್ಲಿಸಿದ ಸುಮೂರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಅರ್ಜಿಗಳು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಚಾರಣೆಗೆ ಬಾಕಿಯಾಗಿದ್ದು, ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಅರ್ಜಿಗಳು ಇತ್ಯರ್ಥವಾಗದೆ ಬಾಕಿಯಾಗಿವೆ.

ಸಭೆಯಲ್ಲಿ ಸಮಿತಿ ಕಾರ್ಯದರ್ಶಿ ಮತ್ತು ಬಂಟ್ವಾಳ ತಹಸೀಲ್ದಾರ್ ಮಲ್ಲೇಶ್, ಸಮಿತಿ ಸದಸ್ಯರಾದ ವಾಸು ನಾಯ್ಕ, ಪಿ.ವಿ.ದಿನೇಶ್ ಮತ್ತು ಶುಭಮಾಲಿನಿ ಮಲ್ಲಿ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English