77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯ ಮಂತ್ರಿಗಳಿಂದ ಚಾಲನೆ

11:50 AM, Saturday, February 5th, 2011
Share
1 Star2 Stars3 Stars4 Stars5 Stars
(No Ratings Yet)
Loading...

77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಬೆಂಗಳೂರು : 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಮ್ಮೇಳನಾಧ್ಯಕ್ಷ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಾಡಪ್ರಭು ಕೆಂಪೇಗೌಡ ಮಹಾಮಂಟಪದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು. ಶುಕ್ರವಾರದಿಂದ ಮೂರು ದಿನಗಳ ಕಾಲ ಉದ್ಯಾನಗರಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ  ನಡೆಯಲಿದೆ.
77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನನಾಡಗೀತೆಯೊಂದಿಗೆ ಆರಂಭವಾದ ಸಾಹಿತ್ಯ ಜಾತ್ರೆಗೆ ಚಾಲನೆ ನೀಡಿದ ಬಳಿಕ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ನಾಲ್ಕು ದಶಕಗಳ ನಂತರ ಈ ನಾಡ ಹಬ್ಬವನ್ನು ಬೆಂಗಳೂರಿನಲ್ಲಿ ಆಚರಿಸಲಾಗುತ್ತಿರುವುದು ನಿಜಕ್ಕೂ ಸಂತಸದ ವಿಷಯ, ರಾಜ್ಯದ ರಾಜಧಾನಿಯಲ್ಲಿ 77ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದರು.
77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿದ್ದರೂ ಕೂಡ ಕೇಂದ್ರ ಸರಕಾರದಿಂದ ಅದಕ್ಕೆ ಬೇಕಾದ ಸೌಲಭ್ಯಗಳು ದೊರೆಯಬೇಕಾಗಿದೆ. ಅದಕ್ಕಾಗಿ ಎಲ್ಲರೂ ಪೂರ್ಣಪ್ರಮಾಣದಲ್ಲಿ ಶ್ರಮಿಸಬೇಕಾಗಿದೆ. ನುಡಿಯ ಆರಾಧನೆ ಸಾಹಿತ್ಯ ಸಮ್ಮೇಳನದ ಧ್ಯೇಯವಾಗಿದೆ. ಈ ಸಮ್ಮೇಳನದಲ್ಲಿ ಬರಹಗಾರರು, ಚಿಂತಕರು, ಪಂಡಿತರ ನಡುವೆ ನಡೆಯುವ ಚರ್ಚೆ ನಾಡಿಗೆ ದೊಡ್ಡ ಕೊಡುಗೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆ ನಿಟ್ಟಿನಲ್ಲಿ ಕನ್ನಡದ ನಾಡು-ನುಡಿಯ ಬೆಳವಣಿಗೆಗೆ ಬದ್ದ ಎಂದು ಹೇಳಿದರು.
77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಪ್ರೊ.ಜಿ.ವೆಂಕಟಸುಬ್ಬಯ್ಯನವರು ಸಮ್ಮೇಳನದ ಅಧ್ಯಕ್ಷತೆ ವಹಿಸಿರುವುದು ಸಾಹಿತ್ಯ ಲೋಕಕ್ಕೆ ಸಂದ ಗೌರವವಾಗಿದೆ. ನಾನು ಆರು ಕೋಟಿ ಕನ್ನಡಿಗರ ಸೇವಕ ಎಂದ ಮುಖ್ಯಮಂತ್ರಿಗಳು, ಕನ್ನಡ ಭಾಷೆ ಅಭಿವೃದ್ದಿಗೆ 200 ಕೋಟಿ ನೀಡಿದ್ದೇನೆ. ಈ ಬಗ್ಗೆ ನನಗೆ ತೃಪ್ತಿ ಇದೆ ಎಂದರು. ಜಿಲ್ಲಾ ಸಾಹಿತ್ಯ ಸಮ್ಮೇಳನಗಳಿಗೆ ತಲಾ 45 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದರು.
ಗಡಿನಾಡು, ಹೊರನಾಡ ಕನ್ನಡಿಗರ ರಕ್ಷಣೆಗೆ ಸರಕಾರ ಬದ್ಧ. ಎಲ್ಲಾ ಹಂತಗಳಲ್ಲೂ ಕನ್ನಡ ಆಡಳಿತ ಭಾಷೆಯಾಗಬೇಕು ಎಂದರು. ಸಮ್ಮೇಳನ ಸ್ಮಾರಕ ಭವನಕ್ಕೆ ಐದು ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಸಮ್ಮೇಳನಾಧ್ಯಕ್ಷ ಸ್ಥಾನದಿಂದ ಮಾತನಾಡಿದ  ಭಾಷಾ ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು, ರಾಜಕಾರಣಿಗಳ ಮೇಲೆ ಮಾತಿನ ಚಾಟಿ ಬೀಸಿದರು.
ಬೈಗುಳ ಅಸಮರ್ಥರ ಆಯುಧ. ಅದು ದುರ್ಬಲರು ಉಪಯೋಗಿಸುವ ಚುಚ್ಚುಗತ್ತಿ. ಅದನ್ನು ಉಪಯೋಗಿಸಬಾರದು. ಹಲವು ಶಾಸಕರ ಮಾತಿನಲ್ಲಿ, ನಡೆಯಲ್ಲಿ, ವ್ಯವಹಾರದಲ್ಲಿ, ಯಾವುದರಲ್ಲಿಯೂ ಗಾಂಭೀರ್ಯವಾಗಲಿ, ಸುಸಂಸ್ಕೃತಿಯಾಗಲಿ ಕಾಣಬರುತ್ತಿಲ್ಲ ಎಂದು ವಿಷಾದಿಸುತ್ತಾ ರಾಜಕೀಯದ ಬಗ್ಗೆ ಹರಿಹಾಯ್ದ ವೆಂಕಟಸುಬ್ಬಯ್ಯ, ಪ್ರಜಾವರ್ಗದ ನೆಮ್ಮದಿ ಕೆಟ್ಟಿದೆ. ಗೊಂದಲದಿಂದ ಸಮಾಧಾನವೇ ನಾಶವಾಗಿದೆ. ಪ್ರಜೆಗಳಲ್ಲಿ ನಾವೇಕೆ ಇಂಥ ಅಸಮರ್ಥರನ್ನು ಶಾಸಕರನ್ನಾಗಿ ಮಾಡಿದೆವು ಎಂದು ತಮ್ಮನ್ನೂ ಎಲ್ಲ ಪಕ್ಷಗಳನ್ನೂ ನಿಂದಿಸುತ್ತಾ ಇದ್ದಾರೆ. ಪ್ರಜೆಗಳನ್ನು ಕಾಪಾಡುವವರೇ ಕಾದಾಡುತ್ತಿರುವುದು ವಿಪರ್ಯಾಸ ಎಂದು ವಿಷಾದಿಸಿದರು.
ಈಗ ಕರ್ನಾಟಕವು ಭಾರತದಲ್ಲಿಯೇ ಅತ್ಯಂತ ಭ್ರಷ್ಟವಾದ ರಾಜ್ಯ ಎಂಬ ಹೆಸರನ್ನು ಸಂಪಾದಿಸಿಬಿಟ್ಟಿದೆ. ಭಾರತದ ಸಂವಿಧಾನವು ಒಂದು ಉತ್ಕೃಷ್ಟ ರಾಜ್ಯಧರ್ಮಶಾಸ್ತ್ರದಂತೆ ಇದೆ ಎಂದು ಹೆಸರು ಪಡೆದಿದೆ. ಹೀಗಿದ್ದೂ ಅದನ್ನು ತಿರಸ್ಕರಿಸಿ ರಾಜಕೀಯ ಪಕ್ಷಗಳು ಅಧಿಕಾರ ದಾಹದಿಂದ ಕಚ್ಚಾಡುತ್ತಿವೆ ಎಂದರು.
ಈ ಕಾದಾಟ ಪಕ್ಷದ್ವೇಷ ಅಥವಾ ಅಧಿಕಾರ ದಾಹ ಎಂಬ ಒಂದು ದುರಂತ ನಾಟಕವಾಗಿಬಿಟ್ಟಿದೆ. ದಿನಕ್ಕೊಂದು ದೃಶ್ಯ, ವಾರಕ್ಕೊಂದು ಅಂಕ ಎಂಬಂತೆ ಇದು ಮುಂದುವರಿದಿದೆ. ನಮಗೆ ಇದು ದುರಂತ. ಇತರ ಪ್ರಾಂತಗಳವರಿಗೆ ಪ್ರಹಸನ. ಹೀಗೆ ಇಮ್ಮುಖವಾದ ಈ ನಾಟಕವು ಇನ್ನೂ ಕ್ಲೈಮಾಕ್ಸ್ ಎಂಬ ಶಿಖರ ತಲುಪಿಲ್ಲ. ಇಷ್ಟರಲ್ಲೇ ತಲುಪಬಹುದು ಎಂದರು ವೆಂಕಟಸುಬ್ಬಯ್ಯ.
ಕನ್ನಡ ತಾಯಿ ಭುವನೇಶ್ವರಿ ನಮ್ಮ ನಾಯಕಮಣಿಗಳಾದ ಈ ರಾಜಕೀಯ ವ್ಯಕ್ತಿಗಳಿಗೆ ಸನ್ಮತಿಯನ್ನು ನೀಡಲಿ ಎಂದು ಪ್ರಾರ್ಥಿಸಬೇಕಾಗಿದೆ. ರಾಜಕೀಯ ಪಕ್ಷಗಳಿಗೆ ಅಧಿಕಾರದ ಹುಚ್ಚು ದಾಹವನ್ನು ಬಿಟ್ಟು ನಾಡಿನ ಸೌಖ್ಯಕ್ಕೆ ದುಡಿಯುವ ಬುದ್ಧಿಯು ಬರಲಿ ಎಂದು ಹಾರೈಸೋಣ. ಪ್ರಜೆಗಳಾದ ನಾವು ಇಂಥ ವರ್ಗದಿಂದ ಬೇರೆಯಾಗಿ ತಲೆತುಂಬ ಕಲಿಯೋಣ, ತಲೆ ಎತ್ತಿ ನುಡಿಯೋಣ, ತಲೆಬಾಗಿ ಬಾಳೋಣ ಎಂದವರು ಸಂದೇಶ ನೀಡಿದರು.
ಸಚಿವ ಆರ್. ಅಶೋಕ್ ಅವರು ಸ್ವಾಗತ ಭಾಷಣ ಕೋರಿದರು. ವೇದಿಕೆಯಲ್ಲಿ ಕಸಾಪ ಅಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್, ಬಾಲಗಂಗಾಧರನಾಥ ಸ್ವಾಮಿ, ಸಂಸದ ಅನಂತಕುಮಾರ್, ಸಚಿವರಾದ ಸುರೇಶ್ ಕುಮಾರ್, ದೇ.ಜವರೇಗೌಡ, ಡಾ. ಗೀತಾ ನಾಗಭೂಷಣ್, ರಾಜ್ಯಸಭೆ ಸದಸ್ಯೆ ಬಿ. ಜಯಶ್ರಿ, ಕನ್ನಡ ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ಪಿಜಿಆರ್ ಸಿಂಧ್ಯಾ, ಡಾ. ಡಿ. ಹೇಮಚಂದ್ರ ಸಾಗರ್, ಡಾ. ಎಂ.ಎಂ. ಕಲಬುರ್ಗಿ, ಚಂಪಾ, ಮಾಜಿ ರಾಜ್ಯಪಾಲ ರಾಮಾ ಜೋಯಿಸ್, ಕನ್ನಡ ರಕ್ಷಣಾ ವೇದಿಕೆಯ ನಾರಾಯಣ ಗೌಡ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕಾರ್ಪೊರೇಷನ್‌ನಿಂದ ಬೆಳಗ್ಗೆ 10 ಗಂಟೆಗೆ ಹೊರಟ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮತ್ತು ಗಾಂಧಿನಗರದಿಂದ ಮೆರವಣಿಗೆ ಆರಂಭಿಸಿದ್ದ ಸಿನಿ ಕಲಾವಿದರ ದಂಡು ನ್ಯಾಷನಲ್ ಕಾಲೇಜಿನಲ್ಲಿ ಒಟ್ಟಿಗೆ ಬಂದು ಸೇರಿತು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಮ್ಮಳಾನಧ್ಯಕ್ಷ ಕನ್ನಡ ಪದ ಪಂಡಿತ, ಮಂಡ್ಯ ಮಣ್ಣಿನ ದಿಗ್ಗಜ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರನ್ನು ಸಮ್ಮೇಳನ ಸ್ಥಳಕ್ಕೆ ಬರ ಮಾಡಿಕೊಂಡರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English