ಗ್ರಾ.ಪಂ./ವಾರ್ಡ್ ಗಳಲ್ಲಿ ತಾಯಂದಿರ ವೇದಿಕೆ: ಅಮಿತಾ ಪ್ರಸಾದ್

12:50 AM, Wednesday, September 10th, 2014
Share
1 Star2 Stars3 Stars4 Stars5 Stars
(5 rating, 4 votes)
Loading...
Amita prasad

ಮಂಗಳೂರು : ಸಮಾಜದಲ್ಲಿ ಆತ್ಯಾಚಾರ, ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಕಡಿಮೆಯಾಗಬೇಕಿದ್ದರೆ, ಮಕ್ಕಳನ್ನು ಬಾಲ್ಯದಿಂದಲೇ ಸುಸಂಸ್ಕೃತ ರೀತಿಯಲ್ಲಿ ಬೆಳಸಬೇಕಾಗಿದೆ. ಮಕ್ಕಳ ಮೇಲೆ ತಾಯಂದಿರ ಪ್ರಭಾವ ಪರಿಣಾಮಕಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ಪ್ರತೀ ಗ್ರಾಮ ಪಂಚಾಯತ್ಗಳಲ್ಲಿ ಹಾಗೂ ನಗರ ಪ್ರದೇಶದ ವಾರ್ಡ್ ಗಳಲ್ಲಿ ತಾಯಂದಿರ ವೇದಿಕೆ ರಚಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯ ದರ್ಶಿ ಡಾ.ಅಮಿತಾ ಪ್ರಸಾದ್ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಮಹಿಳಾ ಆಯೋಗ ಹಾಗೂ ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇವರ ಜಂಟಿ ಆಶ್ರಯದಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ( ನಿಯಂತ್ರಣ, ನಿಷೇಧ ಮತ್ತು ಇತ್ಯರ್ಥ) ಕುರಿತ ಒಂದು ದಿನದ ಕರ್ಯಾಗಾರದಲ್ಲಿ ಅವರು ಮಾತನಾಡಿದರು. ತಾಯಿಗೆ ಗೌರವ ಕೊಡದ ಮಕ್ಕಳೇ ಸಮಾಜದಲ್ಲಿ ದುಷ್ಟರಾಗುತ್ತಿದ್ದಾರೆ. ಇಂತಹವರೇ ಸಮಾಜಕ್ಕೆ ಕಂಟಕಪ್ರಾಯರಾಗುತ್ತಿರುವುದರಿಂದ ಎಳೆಯ ವಯಸ್ಸಿನಿಂದಲೇ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಬೆಳೆಸಿದರೆ, ಭವಿಷ್ಯದಲ್ಲಿ ಈ ಮಕ್ಕಳು ಉತ್ತಮರಾಗಿ ಸಮಾಜದಲ್ಲಿ ಅಪರಾಧ ಚಟುವಟಿಕೆಗಳು ತಗ್ಗುವ ಸಾದ್ಯತೆ ಇದೆ. ಮಕ್ಕಳನ್ನು ಉತ್ತಮ ರೀತಿಯಲ್ಲಿ ಬೆಳಸಲು ತಾಯಂದಿರ ವೇದಿಕೆ ಮೂಲಕ ಚಟುವಟಿಕೆಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

1998ರಲ್ಲಿ ಸರ್ವೋಚ್ಛನ್ಯಾಯಾಲಯ ನೀಡಿದ ಮಾರ್ಗದರ್ಶನವೇ ಇತ್ತೀಚಿನವರೆಗೆ ಲೈಂಗಿಕ ಕಿರುಕುಳದ ವಿರುದ್ಧ ಅಸ್ತ್ರವಾಗಿತ್ತು. ಆದರೆ, 2012ರಲ್ಲಿ ಇದು ಕಾನೂನಾಗಿ ಮಾರ್ಪಟ್ಟ ನಂತರ ಹೆಚ್ಚು ಪರಿಣಾಮಕಾರಿಯಾಗಿದೆ. ಕೆಲಸದ ಸ್ಥಳಗಳಲ್ಲಿ ಉತ್ತಮ ರೀತಿಯ ವ್ಯವಸ್ಥೆ ಪಡೆಯಬೇಕಾದದ್ದು ಪ್ರತಿಯೊಬ್ಬರ ಹಕ್ಕಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರು ತಮ್ಮ ಕರ್ತವ್ಯ, ಕೆಲಸದ ಸ್ಥಳಗಳಲ್ಲಿ ಯಾವುದೇ ರೀತಿಯ ಕಿರುಕುಳ ನಡೆದರೆ, ಧೈರ್ಯದಿಂದ ಅದರ ವಿರುದ್ಧ ಕ್ರಮ ನಡೆಸಲು ಮುಂದೆ ಬರಬೇಕು ಎಂದು ಅವರು ಹೇಳಿದರು.

15ಕ್ಕಿಂತ ಹೆಚ್ಚು ಮಹಿಳಾ ನೌಕರರಿದ್ದರೆ, ಅಂತಹ ಸಂಸ್ಥೆಗಳಲ್ಲಿ ಮಹಿಳಾ ಸಮಿತಿ ರಚಿಸಬೇಕಿದೆ. ಎಲ್ಲಾ ಕಚೇರಿಗಳಲ್ಲೂ ಸ್ಥಳೀಯ ದೂರು ಸಮಿತಿಯನ್ನು ರಚಿಸಲಾಗುತ್ತಿದ್ದು, ಜಿಲ್ಲಾ ಮಟ್ಟದಲ್ಲೂ ಪ್ರಮುಖ ಸಮಾಜಸೇವಾ ಮಹಿಳಾ ಮುಖಂಡರ ನೇತೃತ್ವದ ಸಮಿತಿಯನ್ನು ನೇಮಿಸಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ನಡೆಸಲ್ಪಡುವ ಸಾಂತ್ವನ ಕೇಂದ್ರಗಳ ಮೂಲಕವೂ ನೊಂದ ಮಹಿಳೆಯರಿಗೆ ಸೂಕ್ತ ನೆರವು ನೀಡಲಾಗುತ್ತಿದೆ ಎಂದು ಅಮಿತಾ ಪ್ರಸಾದ್ ಹೇಳಿದರು.

ಕರ್ಯಾಗಾರವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರು ಮಾತನಾಡಿ, ಮಹಿಳೆಯರ ಮೇಲಿನ ಕಿರುಕುಳ ನಿಯಂತ್ರಿಸಲು ಆಯೋಗವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಲ್ಲದೆ, ನೊಂದ ಮಹಿಳೆಯರಿಗೆ ಸಿಗಬೇಕದ ಎಲ್ಲಾ ರೀತಿಯ ಸೂಕ್ತ ನೆರವನ್ನು ಒದಗಿಸಲಾಗುತ್ತಿದೆ. ಅನೇಕ ಸಲ ದೌರ್ಜನ್ಯಗಳಿಗೆ/ಲೈಂಗಿಕ ದೌರ್ಜನ್ಯಗಳಿಗೆ ತುತ್ತಾದರೂ ಅವುಗಳ ವಿರುದ್ದ ಧ್ವನಿ ಎತ್ತಲು ಧೈರ್ಯ ಸಾಕಾಗದೆ ಅಥವಾ ಸಂಕೋಚಗಳಿಂದ ದೂರು ಸಲ್ಲಿಸಲು ಮುಂದೆ ಬಾರದ ಕಾರಣ ಇಂತಹ ದೌರ್ಜನ್ಯಗಳು ಹೆಚ್ಚಾಗುತ್ತಿವೆ, ಲೈಂಗಿಕ ಕಿರುಕುಳದಂತಹ ಪ್ರಕರಣಗಳಿಂದ ನೊಂದ ಮಹಿಳೆಯರು ಧೈರ್ಯದಿಂದ ಮುಂದೆ ಬಂದು ತಮಗಿರುವ ಕಾನೂನಿನ ಬೆಂಬಲದಿಂದ ಇಂತಹ ಪ್ರಕರಣಗಳನ್ನು ಎದುರಿಸಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಕರ್ಯಾಗಾರದಲ್ಲಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂಧಿಗಳು ತಮ್ಮ ಕೆಲಸದ ಸ್ಥಳಗಳಲ್ಲಿ ತಮ್ಮ ಅಹವಾಲುಗಳನ್ನು ಸಲ್ಲಿಸಲು ಜಿಲ್ಲಾ ಮಹಿಳಾ ದೂರು ನಿವಾರಣಾ ಸಮಿತಿ ರಚಿಸಲಾಗಿದ್ದು, ಈ ಸಮಿತಿಗೆ ಈಗಾಗಲೇ 5 ದೂರುಗಳು ಬಂದಿವೆ. ಕಳೆದ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ 1113 ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದು, ಇವುಗಳಲ್ಲಿ 710 ಇತ್ಯರ್ಥವಾಗಿವೆ ಎಂದು ಅವರು ಹೇಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English