ಶೇಣಿ ಗೋಪಾಲಕೃಷ್ಣ ಭಟ್ ಯಕ್ಷಗಾನದ ಸೀಮಾಪುರುಷ : ಕುಂಬ್ಳೆ

11:27 PM, Tuesday, September 16th, 2014
Share
1 Star2 Stars3 Stars4 Stars5 Stars
(5 rating, 5 votes)
Loading...
SDM

ಮಂಗಳೂರು : ಶೇಣಿ ಗೋಪಾಲಕೃಷ್ಣ ಭಟ್ ಅವರು ಯಕ್ಷಗಾನದ ಸೀಮಾಪುರುಷ. ಪಾತ್ರ ಮತ್ತು ಕಥಾ ನಿರ್ವಹಣೆಯಲ್ಲಿ ಪರಿಪೂರ್ಣತೆ ಸಾಧಿಸಿ ಪ್ರೇಕ್ಷಕರನ್ನು ಭಾವಪರವಶರನ್ನಾಗಿಸಿದ ಪ್ರಶ್ನಾತೀತ ಕಲಾವಿದ ಎಂದು ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಕುಂಬ್ಳೆ ಸುಂದರ ರಾವ್ ಬಣ್ಣಿಸಿದರು.

ಕಲ್ಕೂರ ಪ್ರತಿಷ್ಠಾನ ವತಿಯಿಂದ ನಗರದ ಎಸ್.ಡಿ.ಎಂ. ಕಾಲೇಜಿನಲ್ಲಿ ಸೋಮವಾರ ನಡೆದ ‘ಶೇಣಿ ಸಂಸ್ಮರಣೆ – ಕಲೋತ್ಸವ’ದಲ್ಲಿ ಅವರು ಶೇಣಿ ಸಂಸ್ಮರಣಾ ಭಾಷಣ ಮಾಡಿದರು.

ಶೇಣಿ ಎಂದರೆ ಯಕ್ಷಗಾನ, ಯಕ್ಷಗಾನ ಎಂದರೆ ಶೇಣಿ ಎಂಬ ಮಾತನ್ನು ತಮ್ಮ ಜೀವಿತದ ಕಾಲದಲ್ಲೇ ಶ್ರುತಪಡಿಸಿದ ಮಹಾನ್ ಕಲಾವಿದ ಗೋಪಾಲಕೃಷ್ಣ ಭಟ್. ಅವರ ಜಾಗಕ್ಕೆ ಮತ್ತೊಬ್ಬ ಕಲಾವಿದ ಇದುವರೆಗೆ ಬಂದಿಲ್ಲ. ಭಾಗವತ, ಅರ್ಥಧಾರಿ, ವೇಷಧಾರಿ, ಹಿಮ್ಮೇಳ ವಾದಕರಾಗಿ ಶೇಣಿ ಅವರು ಯಕ್ಷಗಾನಕ್ಕೆ ಎಲ್ಲವನ್ನೂ ಕೊಟ್ಟಿದ್ದಾರೆ. ಅವರ ನಿಷ್ಠುರ ಪಾತ್ರ ನಿರ್ವಹಣೆಯಿಂದ ನಮ್ಮಂತಹ ಕಲಾವಿದರು ತಿದ್ದಿಕೊಳ್ಳಲು ಸಾಧ್ಯವಾಗಿದೆ. ಅವರ ಬಪ್ಪ ಬ್ಯಾರಿಯ ಪಾತ್ರ ಕೋಮು ಸಾಮರಸ್ಯದ ಪ್ರತೀಕ. ಆ ಪಾತ್ರಕ್ಕಾಗಿಯೇ ಪ್ರೇಕ್ಷಕರು ಕಾದು ಕುಳಿತುಕೊಳ್ಳುತ್ತಿದ್ದರು ಎಂದು ನೆನಪಿಸಿಕೊಂಡರು.

ಶೇಣಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ವಿದಾನ ಪರಿಷತ್ ಸದಸ್ಯ ಐವನ್ ಡಿಸೋಜ ಯಕ್ಷಗಾನ ಜೀವನದ ಕಷ್ಟ ಸುಖ ಪ್ರತಿಬಿಂಬಿಸುವ ವಿಶಿಷ್ಟ ಕಲೆ. ಶೇಣಿ ಶ್ರೇಷ್ಠ ವಿದ್ವಾಂಸರು. ಯಕ್ಷಗಾನ ಕಲೆ ಉಳಿವಿಗೆ ಅವರು ಶ್ರಮಿಸಿದ್ದಾರೆ ಎಂದರು.

ಯಕ್ಷಗಾನ ವಿಮರ್ಶಕ ಅಂಬಾತನಯ ಮುದ್ರಾಡಿ ಮತ್ತು ಕಲಾವಿದ ಜಿ.ಕೆ. ಭಟ್ ಸೇರಾಜೆ ಅವರಿಗೆ ‘ಶೇಣಿ ಕಲೋತ್ಸವ ಪ್ರಶಸ್ತಿ’ ಪ್ರದಾನಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಜಿ. ಶಂಕರ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಎಸ್.ಡಿ.ಎಂ. ಉದ್ಯಮಾಡಳಿತ ಸಂಸ್ಥೆ ನಿರ್ದೇಶಕ ಡಾ.ಕೆ. ದೇವರಾಜ್, ಕರ್ನಾಟಕ ಬ್ಯಾಂಕಿನ ಹಿರಿಯ ಮಹಾ ಪ್ರಬಂಧಕರಾದ ಪಿ. ಜಯರಾಮ ಹಂದೆ, ಶೇಣಿ ಗೋಪಾಲಕೃಷ್ಣ ಭಟ್ ಮೊಮ್ಮಗ ವೇಣುಗೋಪಾಲ ಅತಿಥಿಯಾಗಿದ್ದರು. ಎಚ್. ಜನಾರ್ದನ ಹಂದೆ ಸ್ವಾಗತಿಸಿದರು. ನಿತ್ಯಾನಂದ ಕಾರಂತ ಮತ್ತು ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಾಯಾಪುರಿ ಮಹಾತ್ಮೆ -ವೀರಮಣಿ ಕಾಳಗ ಪ್ರಸಂಗ ಪ್ರದರ್ಶನಗೊಂಡಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English