ಇಂಚೆನ್ : ಭಾರತದ ಕ್ರೀಡಾ ಪ್ರೇಮಿಗಳ ಪಾಲಿಗೆ ಶನಿವಾರ ಶುಭದಿನ. 17ನೇ ಏಷ್ಯನ್ ಕ್ರೀಡಾಕೂಟದ ಆರ್ಚರಿ ಸ್ಪರ್ಧೆಯಲ್ಲಿ ಭಾರತವು ತಲಾ ಒಂದು ಬಂಗಾರ ಹಾಗೂ ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದೆ.
ಇಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಕ್ರೀಡಾಕೂಟದ ಕಂಪೌಂಡ್ ಪುರುಷರ ಆರ್ಚರಿ ತಂಡವು ಬಂಗಾರ ಗೆದ್ದಿದೆ. ಈ ಕ್ರೀಡಾಕೂಟದಲ್ಲಿ ಭಾರತಕ್ಕೆ ದೊರೆತ ಎರಡನೇ ಚಿನ್ನದ ಪದಕವಿದು.
ಇದೇ ವಿಭಾಗದ ಮಹಿಳೆಯರ ತಂಡವು ಕಂಚಿನ ಸಾಧನೆ ಮಾಡಿದೆ. ಮತ್ತೊಂದೆಡೆ ಪುರುಷರ ವೈಯಕ್ತಿಕ ಆರ್ಚರಿ ವಿಭಾಗದಲ್ಲಿ ಅಭಿಷೇಕ್ ವರ್ಮಾ ಅವರು ಬೆಳ್ಳಿ ಸಾಧನೆ ತೋರಿದ್ದಾರೆ.
ರಜತ್ ಚೌಹಾಣ್, ಸಂದೀಪ್ ಕುಮಾರ್ ಹಾಗೂ ಅಭಿಷೇಕ್ ವರ್ಮಾ ಅವರನ್ನೊಳಗೊಂಡ ತಂಡವು ಕಂಪೌಂಡ್ ಪುರುಷರ ವಿಭಾಗದಲ್ಲಿ 227–225ರಲ್ಲಿ ಎದುರಾಳಿ ದಕ್ಷಿಣ ಕೊರಿಯ ತಂಡವನ್ನು ಸೋಲಿಸಿ ಚಿನ್ನದ ಪದಕವನ್ನು ಗೆದ್ದಿತು.
ಭಾರತದ ಕಂಪೌಂಡ್ ಮಹಿಳಾ ತಂಡವೂ ಪದಕ ಪಡೆಯುವಲ್ಲಿ ಹಿಂದೆ ಬೀಳಲಿಲ್ಲ. ತ್ರಿಷಾ ದೇಬ್, ಪೂರ್ವಶಿಂಧೆ ಹಾಗೂ ಜ್ಯೋತಿ ಸುರೇಖಾ ವರ್ಮಾ ಅವರನ್ನೊಳಗೊಂಡ ತಂಡವು 224-217ರಲ್ಲಿ ಎದುರಾಳಿ ಇರಾನ್ ಸ್ಪರ್ಧಿಗಳನ್ನು ಪರಾಭವಗೊಳಿಸಿ ಕಂಚಿನ ನಗು ಬೀರಿತು.
ಮಹಿಳೆಯರ ವೈಯಕ್ತಿಕ ವಿಭಾಗದಲ್ಲೂ ತ್ರಿಷಾ ಅವರು ಕಂಚಿನ ಪದಕವನ್ನು ಗೆದ್ದರು.
Click this button or press Ctrl+G to toggle between Kannada and English