ಚೂಡಿದಾರದ ಶಾಲು ರೈಲು ಹಳಿಗೆ ಸಿಲುಕಿ ವಿದ್ಯಾರ್ಥಿನಿ ಬಲಿ

12:42 PM, Monday, September 29th, 2014
Share
1 Star2 Stars3 Stars4 Stars5 Stars
(4 rating, 7 votes)
Loading...

Varsha Alvaಪುತ್ತೂರು : ಕಂಪ್ಯೂಟರ್‌ ಸೈನ್ಸ್‌ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿನಿಯೊಬ್ಬಳು ರೈಲ್ವೇ ಹಳಿಯಲ್ಲಿ ನಿಂತು ಫೋಟೋ ಕ್ಲಿಕ್ಕಿಸುವಾಗ ರೈಲಿನಡಿಗೆ ಬಿದ್ದು ದಾರುಣವಾಗಿ ಮೃತ ಪಟ್ಟ ಘಟನೆ  ನಗರದ ಹೊರವಲಯದ  ನೆಹರೂ ನಗರದಲ್ಲಿ ರವಿವಾರ ನಡೆದಿದೆ.

ಮಂಗಳೂರಿನ ದೇರೆಬೈಲ್‌ ಕೊಂಚಾಡಿ ನಿವಾಸಿ ವರ್ಷಾ (20) ಮೃತಪಟ್ಟ ವಿದ್ಯಾರ್ಥಿನಿ. ಈಶ್ವರಮಂಗಳ ನಿವಾಸಿ ರಚನಾ (20) ಗಾಯಗೊಂಡು ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿನಿ.

ನಗರದ ಎಂಜಿನಿಯರಿಂಗ್‌ ಕಾಲೇಜೊಂದರ ವರ್ಷಾ, ರಚನಾ ಹಾಗೂ ಇತರ ಕೆಲವು ವಿದ್ಯಾರ್ಥಿಗಳು ಕಾಲೇಜು ಸಮೀಪದ ನೆಹರೂನಗರದ ರೈಲ್ವೇ ಹಳಿ ಬಳಿ ತೆರಳಿದ್ದರು. ಈ ಸಂದರ್ಭದಲ್ಲಿ ರೈಲ್ವೇ ಹಳಿಯಲ್ಲಿ ನಿಂತು ವರ್ಷಾ ಮತ್ತು ರಚನಾ ಪೋಟೋ ತೆಗೆಯುತ್ತಿದ್ದ ಸಂದರ್ಭದಲ್ಲಿ ಹಠಾತ್ತನೇ ರೈಲು ಆಗಮಿಸಿತು. ಈ ಸಂದರ್ಭದಲ್ಲಿ ಸಹಪಾಠಿಗಳು ತಪ್ಪಿಸಿಕೊಳ್ಳುವಂತೆ ಸೂಚನೆ ನೀಡಿದರು. ಇದರಿಂದ ಗಾಬರಿಗೊಂಡ ಅವರು ಹಳಿ ತಪ್ಪಿಸಿ ಓಡುತ್ತಿದ್ದಂತೆ ವರ್ಷಾಳ ಚೂಡಿದಾರದ ಶಾಲು ಹಳಿಗೆ ಸಿಲುಕಿಹಾಕಿಕೊಂಡಿತ್ತು. ಅಷ್ಟರಲ್ಲಾಗಲೇ ವೇಗವಾಗಿ ಬರುತ್ತಿದ್ದ ರೈಲು ಆಕೆಗೆ ಢಿಕ್ಕಿ ಹೊಡೆದು ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ವರ್ಷಾಳ ರಕ್ಷಣೆಗೆ ತೆರಳಿದ ಸಹಪಾಠಿ ರಚನಾ ಕೈಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೃತ ವಿದ್ಯಾರ್ಥಿನಿ ವರ್ಷಾಳ ತಂದೆ ದಯಾನಂದ ಆಳ್ವ ಅವರು ಮಣಿಪಾಲ ಗ್ರೂಪ್‌ನ ಭದ್ರತಾ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ವರ್ಷಾ ಹಾಗೂ ರಚನಾ ಇಬ್ಬರೂ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳಾಗಿದ್ದಾರೆ. ರವಿವಾರ ರಜಾದಿನವಾದ ಕಾರಣ ವಿದ್ಯಾರ್ಥಿಗಳು ಸುತ್ತಾಡಿಕೊಂಡು ಬರಲು ರೈಲ್ವೇ ಹಳಿ ಬಳಿ ತೆರಳಿದ್ದರು. ಮಂಗಳೂರು ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English