ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿದ ಕಾರಣ ತೆರವಾದ ಮುಖ್ಯ ಮಂತ್ರಿ ಸ್ಟಾನಕ್ಕೆ ಹಣಕಾಸುಸಚಿವ ಎಂ.ಪನ್ನೀರ್‌ಸೆಲ್ವಂ ಅವರನ್ನು ಆಯ್ಕೆ ಮಾಡಲಾಗಿದೆ. ಎಐಎಡಿಎಂಕೆ ಪ್ರಧಾನ ಕಚೇರಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಅವಿರೋಧವಾಗಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು.
ಈ ಹಿಂದೆ ೨೦೦೧ರಲ್ಲಿ ತಾನ್ಸಿ ಭೂಹಗರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಜಯಲಲಿತಾ ಅವರು ರಾಜೀನಾಮೆ ನೀಡಬೇಕಾಗಿ ಬಂದಿದ್ದಾಗ ಪನ್ನೀರ್‌ಸೆಲ್ವಂ ಅವರು ಕೇವಲ ಆರು ತಿಂಗಳ ಕಾಲ ಜಯಾ ಉತ್ತರಾಧಿಕಾರಿಯಾಗಿ ೨೦೦೧ರ ಸೆ.೨೧ರಿಂದ ೨೦೦೨ರ ಮಾರ್ಚ್ ೧ರವರೆಗೆ ಅವರು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಈ ಪ್ರಕರಣದಲ್ಲಿ ಜಯಾ ಖುಲಾಸೆಗೊಂಡ ಬಳಿಕ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು.
ಅಕ್ರಮ ಆಸ್ತಿ ಪ್ರಕರಣದಲ್ಲಿ ಶನಿವಾರ ವಿಶೇಷ ಕೋರ್ಟ್ ತಮ್ಮನ್ನು ಅಪರಾಧಿ ಎಂದು ಘೋಷಿಸಿದ ಬಳಿಕ ಜಯಲಲಿತಾ ಅವರು ಭಾನುವಾರ ಬೆಳಿಗ್ಗೆ ಉತ್ತರಾಧಿಕಾರಿ ಆಯ್ಕೆ ಸಂಬಂಧ ಪನ್ನೀರ್‌ಸೆಲ್ವಂ, ಇಂಧನ ಸಚಿವ ನಾಥಂ ವಿಶ್ವನಾಥನ್, ಸಾರಿಗೆ ಸಚಿವ ಸೆಂಥಿಲ್ ಬಾಲಾಜಿ ಹಾಗೂ ಸರ್ಕಾರದ ಸಲಹೆಗಾರ್ತಿಯಾಗಿರುವ ಮಾಜಿ ಮುಖ್ಯಕಾರ್ಯದರ್ಶಿ ಶೀಲಾ ಬಾಲಕೃಷ್ಣನ್ ಜತೆ ಜೈಲಿನಲ್ಲಿಯೇ ಚರ್ಚೆ ನಡೆಸಿದ್ದರು.
ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ತಕ್ಷಣವೇ ಪನ್ನೀರ್‌ಸೆಲ್ವಂ, ಗೃಹ ಸಚಿವ ಆರ್.ವೈತಿಲಿಂಗಂ, ನಾಥಂ ವಿಶ್ವನಾಥನ್ ಮತ್ತು ಹೆದ್ದಾರಿ ಸಚಿವ ಎಡಪ್ಪಡಿ ಪಳನಿಸ್ವಾಮಿಯವರೊಂದಿಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ರೋಸಯ್ಯ ಅವರನ್ನು ಭೇಟಿಯಾಗಿ ತಮ್ಮ ಸಂಪುಟ ಸೇರುವ ಸಚಿವರ ಹೆಸರುಗಳನ್ನು ಪನ್ನೀರ್‌ಸೆಲ್ವಂ ರಾಜ್ಯಪಾಲರಿಗೆ ಕೊಟ್ಟರು. ಕೂಡಲೇ ರಾಜ್ಯಪಾಲರು ಹೊಸ ಸರ್ಕಾರ ರಚಿಸುವಂತೆ ಅವರಿಗೆ ಆಹ್ವಾನ ನೀಡಿದರು. ಆದರೆ ರಾಜಭನದೊಳಕ್ಕೆ ಮಾಧ್ಯಮ ಪ್ರತಿನಿಧಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಪ್ರಮಾಣವಚನ ಸ್ವೀಕಾರ ಸಮಾರಂಭ ಸೋಮವಾರ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ
Click this button or press Ctrl+G to toggle between Kannada and English