ಬೆಂಗಳೂರು : ಮೈತ್ರಿ ಪ್ರಕರಣ ಜಟಿಲವಾದ ಹಿನ್ನಲೆಯಲ್ಲಿ ಕೇಂದ್ರ ರೈಲ್ವೆ ಸಚಿವ ಡಿವಿ ಸದಾನಂದ ಗೌಡ ಅವರು ಸಂಸಾರ ಸಮೇತರಾಗಿ ಭಾನುವಾರ ಬೆಳಗ್ಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ.
ಡಿವಿ ಸದಾನಂದ ಗೌಡ, ಕಾರ್ತಿಕ್ ಗೌಡ ಹಾಗೂ ಡಾಟಿ ಸದಾನಂದ ಗೌಡ ಅವರನ್ನು ತಿರುಮಲ ತಿರುಪತಿ ದೇವಸ್ಥಾನಂನ ಜಂಟಿ ಕಾರ್ಯಕಾರಿ ಅಧಿಕಾರಿ ಕೆಎಸ್ ಶ್ರೀನಿವಾಸ್ ರಾಜು ಅವರು ಆತ್ಮೀಯವಾಗಿ ಬರ ಮಾಡಿಕೊಂಡರು. ಸದಾನಂದ ಗೌಡ ಅವರ ಕುಟುಂಬದ ಜೊತೆಗೆ ಆಂಧ್ರಪ್ರದೇಶದ ಮುಜರಾಯಿ ಇಲಾಖೆ ಸಚಿವ ಮಾಣಿಕ್ಯಾಲ ರಾವ್ ಅವರು ಕೂಡಾ ಉಪಸ್ಥಿತರಿದ್ದರು.
ನಟಿ ಮೈತ್ರಿಯಾ ಪ್ರಕರಣದ ನಂತರ ಇದೇ ಮೊದಲ ಬಾರಿಗೆ ಸದಾನಂದ ಗೌಡ ಅವರ ಕುಟುಂಬ ತಿರುಪತಿಗೆ ಭೇಟಿ ನೀಡಿ ಸಮಸ್ಯೆಗಳ ನಿವಾರಣೆಗಾಗಿ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. ಪ್ರಕರಣ ವಿಚಾರಣೆ ಹಂತದಲ್ಲಿದ್ದು ಕಾರ್ತಿಕ್ ಗೌಡರಿಗೆ ಹಲವಾರು ಸವಾಲುಗಳು ಎದುರಾಗಿವೆಯಂತೆ.
ರಂಗಾನಾಯಕುಲ ಮಂಟಪದಲ್ಲಿ ವೇದ ಘೋಷಗಳೊಂದಿಗೆ ಇಬ್ಬರು ಗಣ್ಯರಿಗೆ ವೇದ ಪಂಡಿತರು ಆಶೀರ್ವಚನ ನೀಡಿದರು. ಶ್ರೀವಾರಿ ವಸ್ತ್ರವನ್ನು ನೀಡಿ ಸದಾನಂದ ಗೌಡ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದೇಗುಲದ ಆಡಳಿತ ಮಂಡಳಿಯ ಆರ್ ಸೆಲ್ವಂ, ವೆಂಕಟಯ್ಯ, ದಾಮೋದರ್, ರಾಮರಾವ್ ಮುಂತಾದವರು ಹಾಜರಿದ್ದರು.
Click this button or press Ctrl+G to toggle between Kannada and English