ಮಂಗಳೂರು : ಮೂಡುಬಿದಿರೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ) ವು ನಡೆಸಿಕೊಂಡು ಬರುತ್ತಿರುವ ನಾಡು-ನುಡಿ-ಸಂಸ್ಕೃತಿಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಆಳ್ವಾಸ್ ನುಡಿಸಿರಿ. ಕಳೆದ ಹನ್ನೊಂದು ವರ್ಷಗಳಿಂದ ನಿರಂತರವಾಗಿ ಸಂಘಟಿಸಿಕೊಂಡು ಬರುವ ಮೂಲಕ ನಾಡಿನಾದ್ಯಂತ ನಾಡು-ನುಡಿಯ ಎಚ್ಚರವನ್ನೂ, ಸಂಸ್ಕೃತಿಯ ಪ್ರೀತಿ, ಗೌರವಗಳನ್ನೂ ವೃದ್ಧಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ವರ್ಷವಂತೂ ಆಳ್ವಾಸ್ ನುಡಿಸಿರಿಗೆ ದಶಮಾನೋತ್ಸವದ ಸಂಭ್ರಮ. ಈ ಸಂಭ್ರಮವನ್ನು ‘ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ 2013’ ರೆಂದು ಆಚರಿಸಿ ಕನ್ನಡದ ಖ್ಯಾತಿಯನ್ನು ಜಗದಗಲಕ್ಕೆ ಪಸರಿಸುವ ಕಾರ್ಯವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮಾಡಿದೆ. ದಶಮಾನೋತ್ಸವನ್ನು ಆಚರಿಸಿದ ಮೇಲೂ ಆಳ್ವಾಸ್ ನುಡಿಸಿರಿ ತನ್ನ ನಿರಂತರತೆಯನ್ನು ಕಾಯ್ದಕೊಂಡು 2014ರ ಸಂಭ್ರಮಕ್ಕಾಗಿ ಕಾರ್ಯತತ್ಪರವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ|ಎಂ.ಮೋಹನ ಆಳ್ವ ಇಂದು ಪತ್ರಿಕಾ ಭವನದಲ್ಲಿ ಬುಧವಾರ(ಅ.8) ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಆಳ್ವಾಸ್ ನುಡಿಸಿರಿ 2014 ಸರ್ವಾಧ್ಯಕ್ಷತೆಯನ್ನು ನಾಡಿನ ಹೆಸರಾಂತ ಕವಿಗಳು, ಸಂಘಟನಾತ್ಮಕ ಕಾರ್ಯಗಳಲ್ಲಿ ಖ್ಯಾತರೂ ಆಗಿರುವ ನಾಡೋಜ ಡಾ.ಸಿದ್ಧಲಿಂಗಯ್ಯನವರು ವಹಿಸಿಕೊಳ್ಳಲಿದ್ದಾರೆ. ತಮ್ಮ ಸಾಹಿತ್ಯದ ಮೂಲಕ ದನಿಯಿಲ್ಲದ ಜನರ ಸ್ವಾಭಿಮಾನವನ್ನು ಎಚ್ಚರಿಸಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದ ಡಾ.ಸಿದ್ಧಲಿಂಗಯ್ಯನವರು ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷ ಸ್ಥಾನವನ್ನು ಅಲಂಕರಿಸುವುದು ನಮಗೆಲ್ಲರಿಗೂ ಸಂತಸವನ್ನುಂಟು ಮಾಡಿದೆ.
ಆಳ್ವಾಸ್ ನುಡಿಸಿರಿ 2014ರ ಉದ್ಘಾಟನೆಯನ್ನು ಮಕ್ಕಳ ಸಾಹಿತಿ, ಹಿರಿಯ ಕಾದಂಬರಿಕಾರ, ಸಾಮಾಜಿಕ ಹೋರಾಟಗಾರ, ಮಡಿಕೇರಿಯಲ್ಲಿ ನಡೆದ 80ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನು ಅಲಂಕರಿಸಿದ ನಾಡಿನ ಹೆಮ್ಮೆಯ ಸಾಹಿತಿ ನಾ.ಡಿ.ಸೋಜ ಅವರು ನಡೆಸಿಕೊಡಲಿದ್ದಾರೆ.
ನವೆಂಬರ್ 14, 15 ಮತ್ತು 16 (ಶುಕ್ರವಾರ, ಶನಿವಾರ ಮತ್ತು ಭಾನುವಾರ) ಗಳಂದು ಆಳ್ವಾಸ್ ನುಡಿಸಿರಿ 2014 ‘ಕರ್ನಾಟಕ : ವರ್ತಮಾನದ ತಲ್ಲಣಗಳು’ ಎಂಬ ಮುಖ್ಯ ಪರಿಕಲ್ಪನೆಯಲ್ಲಿ ಮೂಡುಬಿದಿರೆ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ ಎಂದು ಡಾ. ಆಳ್ವ ಹೇಳಿದ್ದಾರೆ.
ವಿದ್ಯಾರ್ಥಿ ಪ್ರತಿನಿಧಿಗಳಿಗೆ ಸಂಪೂರ್ಣ ಉಚಿತವಾಗಿ, ಇತರ ಪ್ರತಿನಿಧಿಗಳಿಗೆ 100/- ರೂ. ಪ್ರತಿನಿಧಿ ಶುಲ್ಕದೊಂದಿಗೆ ಮೂರು ದಿನಗಳ ಕಾಲ ವಸತಿ, ಊಟೋಪಚಾರದ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ನಾಡಿನ ಪ್ರಸಿದ್ಧ ಸಾಹಿತಿಗಳು, ವಿದ್ವಾಂಸರು, ಕವಿಗಳು ಭಾಗವಹಿಸಲಿದ್ದಾರೆ.
Click this button or press Ctrl+G to toggle between Kannada and English