ಬೆಂಗಳೂರು: ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ಮಠಾಧೀಶ ರಾಘವೇಶ್ವರ ಶ್ರೀಗಳಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ.
ಮಠದ ಕಲಾವಿದರು ನೀಡಿದ್ದ ಅತ್ಯಾಚಾರ ದೂರಿನಿಂದಾಗಿ ಬಂಧನ ಭೀತಿ ಎದುರಿಸುತ್ತಿದ್ದ ರಾಮಚಂದ್ರಾಪುರ ಮಠದ ಮಠಾಧೀಶ ರಾಘವೇಶ್ವರ ಶ್ರೀಗಳಿಗೆ ಬೆಂಗಳೂರು ಸೆಷನ್ಸ್ ನ್ಯಾಯಾಲಯದ ತೀರ್ಪು ತಾತ್ಕಾಲಿಕ ನೆಮ್ಮದಿ ನೀಡಿದ್ದು, 30 ದಿನಗಳ ಅವಧಿಗಾಗಿ ಶ್ರೀಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಗಳ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯ, 2 ಲಕ್ಷ ರು. ವೈಯುಕ್ತಿಕ ಬಾಂಡ್, ಇಬ್ಬರು ವ್ಯಕ್ತಿಗಳ ಶ್ಯೂರಿಟಿ ಮತ್ತು ಪೊಲೀಸ್ ತನಿಖೆಗೆ ಸಹಕರಿಸುವಂತೆ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ. ಅಲ್ಲದೆ ಸಾಕ್ಷ್ಯನಾಶ ಪಡಿಸದಂತೆಯೂ, ವಿಚಾರಣೆ ವೇಳೆ ಓರ್ವ ವಕೀಲರನ್ನು ತಮ್ಮೊಂದಿಗೆ ಇಟ್ಟುಕೊಳ್ಳಬಹುದು ಎಂದು ತಿಳಿಸಿದೆ.
ಇದಕ್ಕೂ ಮೊದಲು ಶ್ರೀಗಳ ಪರವಾಗಿ ತಮ್ಮ ವಾದ ಮಂಡಿಸಿದ್ದ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರು, ‘ದೂರುದಾರರು ಸಲ್ಲಿಸಿರುವ ದೂರಿನಲ್ಲಿಯೇ ಹಲವು ಗೊಂದಲಗಳಿದ್ದು, ಶ್ರೀಗಳು ಜ0 ಬಾರಿ ತಮ್ಮ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಓರ್ವ ಮಹಿಳೆಯನ್ನು 90 ದಿನ ಅತ್ಯಾಚಾರ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ರಾಘವೇಶ್ವರ ಶ್ರೀಗಳು ಸಮಾಜದ ಪ್ರಮುಖ ಸ್ಥಾನದಲ್ಲಿದ್ದು, ಅವರ ಸುತ್ತ ಸದಾಕಾಲ ಹತ್ತಾರು ಮಂದಿ ಜನರಿರುತ್ತಾರೆ. ಹೀಗಿರುವಾಗ ಅತ್ಯಾಚಾರ ಮಾಡಲು ಸಾಧ್ಯವಿಲ್ಲ. ಹೀಗಾಗಿ ತಮ್ಮ ಕಕ್ಷೀದಾರರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ತಮ್ಮ ವಾದವನ್ನು ಮಂಡಿಸಿದರು.
ಉಭಯ ವಕೀಲರ ವಾದ ಆಲಿಸಿದ ನ್ಯಾಯಾಧೀಶರು, ಶ್ರೀಗಳ ಪರವಕೀಲ ಬಿ.ವಿ.ಆಚಾರ್ಯ ಅವರ ವಾದವನ್ನು ಪುರಸ್ಕರಿಸಿ 30 ದಿನಗಳ ಅವಧಿಯ ಷರತ್ತುಬದ್ದ ಜಾಮೀನು ಮಂಜೂರು ಮಾಡಿದ್ದಾರೆ.
Click this button or press Ctrl+G to toggle between Kannada and English