ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ 5,63,000 ಎಕರೆ ಸರಕಾರಿ ಭೂಮಿ ಇದ್ದು,ಇದರಲ್ಲಿ 1,96,000 ಎಕರೆಗೆ ಭೂಮಿಯನ್ನು ಖಾಸಗಿಯವರು ಒತ್ತುವರಿ ಮಾಡಿದ್ದಾರೆ ಎಂದು ದ.ಕ. ಜಿಲ್ಲಾಧಿಕಾರಿ ಶ್ರೀ ಸುಬೋಧ್ ಯಾದವ್ ತಿಳಿಸಿದ್ದಾರೆ.
ಅವರು ಇಂದು ತಮ್ಮ ಕಚೇರಿಯಲ್ಲಿ ನಡೆದ ಸರಕಾರಿ ಭೂಮಿ ಒತ್ತುವರಿ ತೆರವುಗೊಳಿಸುವ ಕುರಿತಾದ ಕಂದಾಯಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಬೆಳ್ತಂಗಡಿ ತಾಲೂಕಿನಲ್ಲಿ 2 ಲಕ್ಷ ಎಕರೆ ಸರಕಾರಿ ಜಮೀನು ಇದ್ದು,ಇದರಲ್ಲಿ 50,000 ಎಕರೆ ಜಮೀನು ಒತ್ತುವರಿಯಾಗಿದೆ. ಇದೇ ರೀತಿ ಸುಳ್ಯ ತಾಲ್ಲೂಕಿನಲ್ಲಿರುವ 1.20 ಲಕ್ಷ ಎಕರೆ ಸರಕಾರಿ ಜಮೀನಿನಲ್ಲಿ 20 ಸಾವಿರ ಎಕರೆ ಒತ್ತುವರಿ ಆಗಿದೆ. ಮೂಡಬಿದ್ರೆಯಲ್ಲಿ ಸರಕಾರಿ ಜಮೀನು 27200 ಎಕರೆಯಷ್ಟಿದ್ದು 11200 ಎಕರೆ ಜಮೀನನ್ನು ಒತ್ತುವರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕುಮ್ಕಿ ಜಮೀನು ಅಂದರೆ ಅರಣ್ಯ ಅಂಚಿನಲ್ಲಿರುವ ಖಾಸಗಿ ಜಮೀನುಗಳ ಆಸುಪಾಸಿನಲ್ಲಿರುವ ಮರಗಿಡಗಳನ್ನು ಹೊಂದಿರುವ ಸರಕಾರಿ ಜಮೀನಿನಲ್ಲಿ ಯಾವುದೇ ರೀತಿಯ ಖಾಯಂ ಕಟ್ಟಡಗಳನ್ನು ಕಟ್ಟುವುದಾಗಲೀ ಕೃಷಿ ಮಾಡುವುದಾಗಲೀ ನಿಷೇಧಿಸಲಾಗಿದೆ. ಇಲ್ಲಿ ಸಿಗುವ ಮರದ ಎಲೆ ಇತ್ಯಾದಿಗಳನ್ನು ಮಾತ್ರ ಕೃಷಿ ಕಾರ್ಯಕ್ಕೆ ಬಳಸಬೇಕೇ ವಿನಾ ಭೂಮಿಯನ್ನು ಉತ್ತು ಬಿತ್ತು ಬೆಳೆ ತೆಗೆಯಬಾರದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ತಹಶೀಲ್ದಾರರು,ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸರಕಾರಿ ಜಮೀನನ್ನು ಒತ್ತುವರಿ ಮಾಡಿರುವವರ ಪಟ್ಟಿಯನ್ನು ತಯಾರಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಕಳೆದ 20-25 ವರ್ಷಗಳಿಂದ ಒತ್ತುವರಿ ಸಕ್ರಮವಾಗಿ ನಮೂನೆ 50,53 ರಲ್ಲಿ ಅರ್ಜಿ ಸಲ್ಲಿಸಿರುವವರ ವಿವರವನ್ನು ಮುಂದಿನ ಸಭೆಯೊಳಗೆ ಸಲ್ಲಿಸುವಂತೆ ತಿಳಿಸಿದರು.
Click this button or press Ctrl+G to toggle between Kannada and English