ಮಂಗಳೂರು : ಸಂಶೋಧನೆ, ಬೋಧನೆ ಮತ್ತು ಪ್ರಸಾರಾಂಗದ ಬಲವರ್ಧನೆಗೆ ಪ್ರತ್ಯೇಕ ವಿಶ್ವ ವಿದ್ಯಾನಿಲಯದ ಸ್ಥಾಪನೆ,ಕಿತ್ಸೆಯಲ್ಲಿ, ಔಷಧ ತಯಾರಿಕೆಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ಮಾನದಂಡ ನಿಗದಿ, ಸಮಗ್ರ ವೈದ್ಯಕೀಯ ಪದ್ಧತಿಯ ಅನುಷ್ಠಾನ ಸಹಿತ ವಿವಿಧ ಆಗ್ರಹಗಳನ್ನೊಳಗೊಂಡ ಗೊತ್ತುವಳಿಗಳನ್ನು ಮಂಗಳೂರಿನಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯ ಆಯುಷ್ ವೈದ್ಯರ ಮಹಾಸಮ್ಮೇಳನ `ಆಯುಷ್ ಉತ್ಸವ 2014’ರಲ್ಲಿ ಅಂಗೀಕರಿಸಲಾಗಿದೆ.
ಭಾನುವಾರ ಸಮಾರೋಪ ಸಮಾರಂಭಕ್ಕೆ ಮೊದಲು ಮಾಧ್ಯಮ ಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಆಯುಷ್ ವೈದ್ಯರೊಂದಿಗೆ ನಡೆದ ಸಂವಾದದಲ್ಲಿ ಆಯುಷ್ ಪದ್ಧತಿಯ ಚಿಕಿತ್ಸಾ ಕ್ರಮದ ಬಲವರ್ಧನೆಗೆ ಔಷಧೀಯ ವನಗಳ ನಿರ್ಮಾಣ, ಗ್ರಾಮೀಣ ಭಾಗದಲ್ಲಿ ಆಯುಷ್ ವೈದ್ಯರ ನೇಮಕ, ಚಿಕಿತ್ಸೆಗೆ ಪೂರಕ ಅವಕಾಶ, ಸೌಲಭ್ಯ ಒದಗಿಸುವ ಕುರಿತು ಆಗ್ರಹಿಸಲಾಯಿತು.
ಆಯುಷ್ ಚಿಕಿತ್ಸಾ ಪದ್ಧತಿಗೆ ಎಲ್ಲಾ ರೀತಿಯ ವಿಮಾ ಸೌಲಭ್ಯ ದೊರೆಯಬೇಕು, ಕೇಂದ್ರ ಸರಕಾರ ತನ್ನ ಆಯುಷ್ ಮಿಷನ್ನಲ್ಲಿ ಘೋಷಿಸಿದಂತೆ ಆಯುಷ್ ಗ್ರಾಮಗಳ ಅನುಷ್ಠಾನವಾಗಬೇಕು, ಸ್ವ ಸಹಾಯ ಗುಂಪುಗಳು, ಗ್ರಾಮ ಪಂಚಾಯತ್ ಸದಸ್ಯರನ್ನೊಳಗೊಂಡು ಇಂತಹ ಗ್ರಾಮಗಳಲ್ಲಿ ಆಯುಷ್ ಪದ್ಧತಿಯ ಚಿಕಿತ್ಸೆಯನ್ನು ಜನಪ್ರಿಯಗೊಳಿಸಬೇಕು ಎಂದು ಒತ್ತಾಯಿಸಲಾಯಿತು.
ಆಯುಷ್ ಔಷಧಿಗಳು ದುಬಾರಿಯಾಗಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾವವಾಯಿತು. ಸ್ಥಳೀಯವಾಗಿ ಕಚ್ಛಾ ಸಾಮಾಗ್ರಿಗಳ ಅಲಭ್ಯತೆ ಮತ್ತು ಅವುಗಳ ಸಾಗಾಟ ವೆಚ್ಚ ದುಬಾರಿಯಾಗಿರುವುದರಿಂದ ದರವೂ ದುಬಾರಿಯಾಗಿದೆ ಎಂದು ಔಷಧಿ ತಯಾರಕರು ಸ್ಪಷ್ಟನೆ ನೀಡಿದರು.
ಆಯುಷ್ ಚಿಕಿತ್ಸಾ ಪದ್ಧತಿಯನ್ನು ಜನಪ್ರಿಯಗೊಳಿಸಲು ವ್ಯಾಪಕ ಪ್ರಚಾನ್ಚಿಂದೋಲನ ನಡೆಸಬೇಕಾದ ಹಾಗೂ ಆಧುನಿಕ ತಂತ್ರಜ್ಞಾನವನ್ನು ರೋಗ ಪತ್ತೆ ವಿಧಾನದಲ್ಲಿ ಬಳಸಿಕೊಳ್ಳಬೇಕಾದ ಅಗತ್ಯ ಹಾಗೂ ಆಯುಷ್ ಕುರಿತಂತೆ ಇರುವ ತಪ್ಪು ಕಲ್ಪನೆಯನ್ನು ನಿವಾರಿಸುವ ನಿಟ್ಟಿನಲ್ಲಿಯೂ ಅಗತ್ಯ ಕ್ರಮಗಳನ್ನು ಅನುಷ್ಠಾನಿಸುವ ಬಗ್ಗೆಯೂ ಸಂವಾದದಲ್ಲಿ ಪ್ರಸ್ತಾವಿಸಲಾಯಿತು.
ಡಾ. ಹರಿಪ್ರಸಾದ್ ಸುವರ್ಣ ಸಂವಾದ ನಡೆಸಿಕೊಟ್ಟರು. ಡಾ. ಸತ್ಯನಾರಾಯಣ ಭಟ್, ಡಾ. ಕೆ. ಜೆ. ಮಳಗಿ, ಡಾ. ವರ್ಣೇಕರ್, ಪತ್ರಕರ್ತರಾದ ಎಸ್. ಜಯರಾಮ, ಯು. ಕೆ. ಕುಮಾರನಾಥ, ರಾಮಕೃಷ್ಣ ಆರ್. ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English