ಮಂಗಳೂರು : ಚುನಾವಣೆಯಲ್ಲಿ ಮೀಸಲಾತಿ ಕಲ್ಪಿಸುವ ಮೂಲಕ ಸರ್ಕಾರ ಮಹಿಳೆಗೆ ರಾಜಕೀಯ ಸ್ಥಾನಮಾನ ದೊರೆಯುವ ಅವಕಾಶ ಕಲ್ಪಿಸಿದೆ. ಒಂದು ಹಂತದ ವರೆಗೆ ಈ ಸೌಲಭ್ಯವನ್ನು ಬಳಸಿಕೊಂಡು, ಮುಂದೆ ಮೀಸಲಾತಿಯ ಆಶ್ರಯವಿಲ್ಲದೆಯೂ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವಷ್ಟು ಮಹಿಳೆ ಸಬಲಳಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಅಧ್ಯಕ್ಷೆ ಕೆ.ಟಿ. ಶೈಲಜಾ ಭಟ್ ಅವರು ತಿಳಿಸಿದರು.
ಮಹಿಳಾ ಸಬಲೀಕರಣ ಕುರಿತು ವಾರ್ತಾ ಇಲಾಖೆ ಶಕ್ತಿನಗರದ ಕಲಾಂಗಣ್ನಲ್ಲಿ ಆಯೋಜಿಸಿರುವ ಎರಡು ದಿನಗಳ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ಪ್ರಧಾನ ಮಂತ್ರಿ ದಿವಂಗತ ಇಂದಿರಾ ಗಾಂಧಿ, ಸುಷ್ಮಾ ಸ್ವರಾಜ್ ಮುಂತಾದ ಮಹಿಳೆಯರು ಸ್ವ ಸಾಮಥ್ರ್ಯದಿಂದ ಉನ್ನತ ಸ್ಥಾನಗಳಿಗೆ ಬಂದು, ಸಾಮಾಜಿಕವಾಗಿ ಹಲವು ಸಾಧನೆ ಮಾಡಿದರು. ಅವರಿಗೆ ಆಗ ಮೀಸಲಾತಿಯ ಬೆಂಬಲವಿರಲಿಲ್ಲ. ಅವರ ಹಾಗೆ ಪರಿಶ್ರಮದಿಂದ ಉನ್ನತ ಸ್ಥಾನಕ್ಕೆ ಏರುವ ಪ್ರಯತ್ನ ಮಾಡಬೇಕು ಎಂದರು.
ಸ್ತ್ರೀಶಕ್ತಿ ಸಂಘಗಳು, ಸ್ವಸಹಾಯ ಗುಂಪುಗಳ ರಚನೆಯು ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯ ಸಬಲೀಕರಣಗೊಳ್ಳುವಂತೆ ಮಾಡಿದೆ. ಆರ್ಥಿಕವಾಗಿ ಮಹಿಳೆ ಅಭಿವೃದ್ಧಿ ಸಾಧಿಸಿದರೆ ಸಾಮಾಜಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಉನ್ನತ ಸ್ಥಾನವಿದೆ. ಸ್ವಾತಂತ್ರ್ಯವನ್ನು ಸ್ವೇಚ್ಛೆಯಾಗಿ ಬಳಸಿಕೊಳ್ಳಬಾರದು. ಎಲ್ಲಿ ನಾರಿ ಪೂಜಿಸಲ್ಪಡುವಳೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ಮಾತಿದೆ. ಉಡುಗೆ ತೊಡುಗೆಯಲ್ಲಿ ಆಚಾರ ವಿಚಾರಗಳಲ್ಲಿ ಆಕೆ ಸಮಾಜದಲ್ಲಿ ಹಾಗೂ ಕುಟುಂಬದಲ್ಲಿ ಗೌರವ ಮೂಡುವಂತೆ ನಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ರಜನಿ ದುಗ್ಗಣ್ಣ ಅವರು ಮಾತನಾಡಿ, ಹಲವು ಕ್ಷೇತ್ರಗಳಲ್ಲಿ ಇಂದು ಮಹಿಳೆ ಮುಂದುವರಿಯುತ್ತಿದ್ದಾಳೆ. ಹಿಂದೆ ಹೆಣ್ಣು ಮಗುವನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಹೆಣ್ಣು ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಕೊಡಿಸಲು ಎಲ್ಲರೂ ಆಸಕ್ತಿ ತೋರುತ್ತಾರೆ. ಸರ್ಕಾರವು ಸಹ ಮಹಿಳೆಯ ಅಭಿವೃದ್ಧಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ ಎಂದರು.
ಜಿಲ್ಲಾ ಪಂಚಾಯತ್ನ ಉಪಾಧ್ಯಕ್ಷೆ ಧನಲಕ್ಷ್ಮಿ ಜನಾರ್ಧನ ಅವರು ಮಾತನಾಡಿ, ಸಮಾಜ ಸುಧಾರಣೆಗೆ ನಮಗೆ ಈಗ ಒಳ್ಳೆಯ ಅವಕಾಶ ಸಿಕ್ಕಿದೆ. ಪುರುಷರ ಸಹಾಯ ಹಾಗೂ ಬೆಂಬಲವೂ ಮಹಿಳೆಗೆ ಇದೆ ಎಂದರು.
Click this button or press Ctrl+G to toggle between Kannada and English