ಮಂಗಳೂರು : ದ.ಕ.ಜಿಲ್ಲಾ ಬಿಜೆಪಿ ಕಚೇರಿಯ ಅಕ್ಷಯ ಸಭಾ ಭವನದಲ್ಲಿ ಮಂಗಳೂರು ವಿಭಾಗದ ಪೂರ್ಣಾವಧಿ ಕಾರ್ಯಕರ್ತರ ಯೋಜನೆ, ಕಾರ್ಯ ನಿರ್ವಹಣೆಯ ಬಗ್ಗೆ ಕಾರ್ಯಾಗಾರ ಗುರುವಾರ, ಮಾರ್ಚ್ 5 ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಉಪಾಧ್ಯಕ್ಷರು/ವಿಪಕ್ಷ ಮುಖ್ಯ ಸಚೇತಕರಾದ ಶ್ರೀ ಸುನೀಲ್ ಕುಮಾರ್ ಉದ್ಘಾಟಿಸುತ್ತಾ, ರಾಜ್ಯದ ಕಾಂಗ್ರೇಸ್ ಸರಕಾರ 2 ವರ್ಷದ ಆಡಳಿತದಲ್ಲಿ ವೈಫಲ್ಯಗಳಿಂದ ಕೂಡಿದ್ದು, ವಿವಾದಿತ ಹೇಳಿಕೆಗಳನ್ನು ನೀಡುತ್ತಾ ಅಭಿವೃದ್ಧಿಯ ಕಡೆಗೆ ಗಮನ ನೀಡದೆ ಭ್ರಷ್ಟಾಚಾರಕ್ಕೆ ನೀರೆರೆಯುತ್ತಾ, ಆಡಳಿತ ನಡೆಸುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಬಗ್ಗೆ ಪಕ್ಷದ ಸದಸ್ಯತ್ವ ಅಭಿಯಾನದ ಕಾರ್ಯವನ್ನು ಮಾಡುವಾಗ ಜನರಿಗೆ ತಿಳಿ ಹೇಳಬೇಕಾಗಿದೆ ಎಂದರು. ಪಕ್ಷದ ಸದಸ್ಯತ್ವದ ಗುರಿ ತಲುಪುವ ಬಗ್ಗೆ ಕಾರ್ಯ ಯೋಜನೆಯನ್ನು ಮಾಡಿ ಕಾರ್ಯಗತಗೊಳಿಸುವ ಮಾನಸಿಕತೆಯಿಂದ ಸಾಗುವ ಕಾರ್ಯಕರ್ತರಾದ ನಾವು ಮುಂದಿನ ದಿನಗಳಲ್ಲಿ ನಮ್ಮ ಯೋಚನೆ-ಯೋಜನೆಗಳನ್ನು ಕಾರ್ಯ ರೂಪಕ್ಕೆ ತರುವ ಬಗ್ಗೆ ವಿನಂತಿಸಿಕೊಂಡರು.
ಈ ಕಾರ್ಯಾಗಾರದ ಬಗ್ಗೆ ಪೂರ್ಣಾವಧಿ ಕಾರ್ಯಕರ್ತರ ಯೋಜನೆ ಮತ್ತು ಕಾರ್ಯ ನಿರ್ವಹಣೆ, ಕಾರ್ಯ ಕ್ಷೇತ್ರದ ವಿವರಣೆಯ ಅವಧಿಯನ್ನು ತೆಗೆದುಕೊಳ್ಳಲು ರಾಜ್ಯ ಬಿಜೆಪಿಯಿಂದ ಬಂದಿರುವ ಶಿವಮೊಗ್ಗ ವಿಭಾಗದ ಸಹಪ್ರಭಾರಿ ಶ್ರೀ ಗಿರೀಶ್ ಪಟೇಲರು ಕಾರ್ಯಕರ್ತರಿಗೆ ಸಮಯವನ್ನು ನೀಡುವ ಮತ್ತು ಸಂಘಟನೆಗೆ ನಮ್ಮ ಬದ್ಧತೆಯ ಮೂಲಕ ಪೂರ್ಣಾವಧಿಯ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸುವ ಬಗ್ಗೆ ಮಾಹಿತಿಯನ್ನು ನೀಡಿದರು. ನಮಗೆ ಕೊಟ್ಟಿರುವ ನಿರ್ದಿಷ್ಟ ಪ್ರದೇಶದಲ್ಲಿ ಗುರಿ ತಲುಪುವ ವರೆಗೆ ಕಾರ್ಯವನ್ನು ಪೂರ್ಣಗೊಳಿಸಿ ನಮ್ಮ ಸ್ವಕ್ಷೇತ್ರಕ್ಕೆ ಮರಳುವ ವರೆಗೆ ವಿರಮಿಸದೆ ಸದಸ್ಯತಾ ಅಭಿಯಾನದ ಕೆಲಸವನ್ನು ನಿರ್ವಹಿಸಬೇಕೆಂದು ಕರೆ ನೀಡಿದರು. ಹೊಸ ಕ್ಷೇತ್ರಕ್ಕೆ ನಾವು ಹೋಗುವುದರಿಂದ ಅಲ್ಲಿ ನಾವು ಇತರ ಕಾರ್ಯಕರ್ತರಿಗೆ ಆದರ್ಶರಾಗಿ, ಅಲ್ಲಿಂದ ನಾವು ಅನೇಕ ವಿಷಯಗಳನ್ನು ಸಹ ಕಲಿತುಕೊಂಡು ಬರುವಂತಹ ಒಂದು ಅವಕಾಶ ನಮಗಿದೆ. ಆದುದರಿಂದ ಪೂರ್ಣಾವಧಿ ಕಾರ್ಯಕರ್ತರಾಗಿ ಸಂಘಟನೆಯಲ್ಲಿ ಕೆಲಸ ಮಾಡುವುದು ಸಂಘಟನೆಗೆ ನಾವು ಮಾಡುವ ಯೋಗದಾನವಾಗಿದೆ ಎಂದರು.
ಕಾರ್ಯಾಗಾರದ ಸಮಾರೋಪವನ್ನು ವಿಭಾಗ ಪ್ರಭಾರಿ ಹಾಗೂ ಸಾಂಸದ ಶ್ರೀ ನಳಿನ್ ಕುಮಾರ್ ಕಟೀಲ್ ರವರು ಮಾತನಾಡುತ್ತಾ ಪಕ್ಷವು ತನ್ನ ಕಾರ್ಯ ಪದ್ಧತಿ ಮತ್ತು ಪಕ್ಷದ ಸಂಘಟನಾತ್ಮಕ ಕಾರ್ಯಗಳಲ್ಲಿ ಎಂದೂ ರಾಜಿ ಮಾಡಿಕೊಂಡಿಲ್ಲ. ಪಕ್ಷದಲ್ಲಿ ಹಿಂದೆಯೂ ಮತ್ತು ಈಗಲೂ ಸಂಘಟನೆಗೋಸ್ಕರ ಪ್ರಚಾರ, ಖ್ಯಾತಿ, ಪ್ರಸಿದ್ಧಿಗಾಗಿ ಹಾತೊರೆಯದೆ ಸಂಘಟನೆಯ ಧ್ಯೇಯ, ವಿಚಾರದ ಗುರಿ ತಲುಪುವ ಬಗ್ಗೆ ಸದಾ ಯೋಚಿಸುತ್ತಾ ಕೆಲಸ ಮಾಡುವ ಸಾವಿರಾರು ಕಾರ್ಯಕರ್ತರ ಪರಂಪರೆಯನ್ನು ಹೊಂದಿರುವ ನಮ್ಮ ಪಕ್ಷ ಇಂದೂ ಕೂಡ ಆ ಮಾನಸಿಕತೆಯ ಕಾರ್ಯಕರ್ತರು ಸಂಘಟನೆಗೆ ದುಡಿಯುತ್ತಿರುವುದು ಪಕ್ಷದ ವೈಶಿಷ್ಟ್ಯವಾಗಿದೆ ಎಂದರು.
ವಿಭಾಗ ಸಂಘಟನಾ ಕಾರ್ಯದರ್ಶಿ ಶ್ರೀ ಪ್ರಸಾದ್ ಕುಮಾರ್‌ರವರು ಕಾರ್ಯಾಗಾರದ ಪ್ರಸ್ತಾವನೆಯನ್ನು ಮಾಡಿದರು. ಸದಸ್ಯತನ ಸಹಪ್ರಮುಖ್ ಕ್ಯಾ|ಬ್ರಿಜೇಶ್ ಚೌಟರವರು ಸ್ವಾಗತಿಸಿದರು. ಶ್ರೀಮತಿ ಕಸ್ತೂರಿ ಪಂಜ ವಂದಿಸಿದರು. ಸದಸ್ಯತಾ ಪ್ರಮುಖ್ ಶ್ರೀ ಸಂಜೀವ ಮಠಂದೂರು ಕಾರ್ಯಕ್ರಮ ನಿರ್ವಹಣೆಗೈದರು.
Click this button or press Ctrl+G to toggle between Kannada and English