ಕನ್ನಡದಲ್ಲಿ “ಒಂದು ರೊಮ್ಯಾಂಟಿಕ್ ಕ್ರೈಮ್ ಕಥೆ’ ಶೀರ್ಷಿಕೆಯಡಿ ತೆಲುಗಿನಲ್ಲಿ ಸೂಪರ್ ಹಿಟ್ ಆಗಿದ್ದ ಸಿನಿಮಾ ರಿಮೇಕ್ ಆಗಿ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾಗೆ ಸ್ಯಾಮ್ ಜೆ ಚೈತನ್ಯ ನಿರ್ದೇಶಕರು. ಇದು ಸಂಪೂರ್ಣ ಯೂತ್ಸ್ ಸಿನಿಮಾ ಆಗಿದ್ದು, ಪೋಷಕರೊಂದಿಗೆ ಹುಡುಗ, ಹುಡುಗಿಯರು ನೋಡಲೇಬೇಕಾದ ಸಿನಿಮಾ ಇದು ಎಂಬುದು ನಿರ್ದೇಶಕರ ಹೇಳಿಕೆ.
“ಇದು ಈಗಿನ ಟ್ರೆಂಡ್ ಸಿನಿಮಾ. ಅದರಲ್ಲೂ ಹುಡುಗ, ಹುಡುಗಿಯರು ನೋಡಲೇಬೇಕಾದ ಚಿತ್ರ. ಹಾಗಂತ ದೊಡ್ಡವರು ನೋಡಬಾರದು ಅಂತಲ್ಲ, ಅವರೇ ಮುಖ್ಯವಾಗಿ ಸಿನಿಮಾ ನೋಡಬೇಕು ಎಂಬುದು ಸ್ಯಾಮ್ ಮಾತು. “ಮಲಿನೇನಿ ಪೊ›ಡಕ್ಷನ್ಸ್ ಪ್ರ„ವೇಟ್ ಲಿಮಿಟೆಡ್’ ಬ್ಯಾನರ್‌ನಡಿ ಈ ಚಿತ್ರವನ್ನು ಮಲಿನೇನಿ ಲಕ್ಷ್ಮಯ್ಯ ನಿರ್ಮಿಸಿದ್ದಾರೆ. “ಗೊಂಬೆಗಳ ಲವ್’ ಖ್ಯಾತಿಯ ಅರುಣ್ ಚಿತ್ರದ ನಾಯಕ. ಉಳಿದಂತೆ ಅಶ್ವಿನಿ, ಪೂಜಾಶ್ರೀ ಮತ್ತು ಸೋನಲ್ ಚಿತ್ರದ ನಾಯಕಿಯರು. ಅಚ್ಯುತ್‌ಕುಮಾರ್, ಲಯೇಂದ್ರ, ರೋಹಿತ್, ಲೋಹಿತ್ ಇತರರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರೈಮ್ ಅಂದಾಕ್ಷಣ ಚಿತ್ರದಲ್ಲಿ ಲಾಂಗು, ಮಚ್ಚು ಮತ್ತು ರಕ್ತದ ನೆನಪಾಗಬಹುದು. ಆದರೆ, ಇಲ್ಲಿ ಕಾಲೇಜು ಓದುವ ಹುಡುಗ, ಹುಡುಗಿಯರು, ಹೇಗೆಲ್ಲಾ ಹಾಳಾಗುತ್ತಾರೆ ಎಂಬುದನ್ನು ಹೇಳಲಾಗಿದೆ. ತೆಲುಗಿನಲ್ಲಿ ಈ ಚಿತ್ರ ಸಾಕಷ್ಟು ವಿವಾದ ಹುಟ್ಟುಹಾಕಿತ್ತು. ಅದೇ ಸಿನಿಮಾ ಇಲ್ಲಿ ರೀಮೇಕ್ ಆಗಿದೆ. ಸೆನ್ಸಾರ್ ಮಂಡಳಿ ಚಿತ್ರ ವೀಕ್ಷಿಸಿ, ಚಿತ್ರಕ್ಕೆ “ಯು/ಎ’ ಸರ್ಟಿಫಿಕೆಟ್ ಕೊಡಲಾಗಿದೆ’ ಎಂಬ ಮಾಹಿತಿ ಕೊಡುತ್ತಾರೆ ಸ್ಯಾಮ್.
“ಚಿತ್ರದ ಬಗ್ಗೆ ಹೇಳಲೇಬೇಕಾದ ಒಂದು ಅಂಶ ಇದೆ. ಇಲ್ಲಿ ಎಲ್ಲವನ್ನೂ ಬೋಲ್ಡ್ ಆಗಿ ತೋರಿಸಿದ್ದೇವೆ. ಇರುವ ವಿಷಯವನ್ನು ನೇರವಾಗಿ ತೋರಿಸದಿದ್ದರೆ, ಅದು ಪೋಷಕರಿಗಾಗಲಿ, ಹುಡುಗ, ಹುಡುಗಿಯರಿಗಾಗಲಿ ತಲುಪುವುದಿಲ್ಲ ಎಂಬ ಉದ್ದೇಶದಿಂದ ಎಲ್ಲವನ್ನೂ “ಬೋಲ್ಡ್’ ಆಗಿಯೇ ತೋರಿಸಲಾಗಿದೆ. ನೈಜ ಘಟನೆಗಳನ್ನೇ ಕ್ರೋಢೀಕರಿಸಿ ಮಾಡಿರುವ ಸಿನಿಮಾ ಇದಾಗಿರುವುದರಿಂದ ನೋಡುವವರಿಗೆ, ವಾಸ್ತವತೆಯನ್ನು ಕಟ್ಟಿಕೊಟ್ಟಂತಾಗುತ್ತದೆ. ನೋಡಿದ ಪ್ರೇಕ್ಷಕರಿಗೆ ಒಳ್ಳೆಯ ಸಿನಿಮಾ ನೋಡಿದ ಅನುಭವ ಆಗುವುದು ಗ್ಯಾರಂಟಿ’ ಎನ್ನುತ್ತಾರೆ ನಿರ್ದೇಶಕರು.
ಹುಡುಗರು ನಿಜವಾಗ್ಲೂ ಓದಲು ಹೋಗ್ತಾರಾ.
ಪ್ರತಿನಿತ್ಯವೂ ಕಾಲೇಜಿಗೆ ಹೋಗುವ ಹುಡುಗ, ಹುಡುಗಿಯರು ಅಲ್ಲಿ ಕಲಿಯೋಕೆ ಹೋಗುತ್ತಾರಾ ಅಥವಾ ಬೇರೆ ವಿಷಯದ ಕಡೆ ಗಮನಹರಿಸಿ, ಶೋಕಿ ಲೈಫ್ಗೆ ಬಿದ್ದು, ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಾರಾ ಎಂಬುದು ಚಿತ್ರದ ಕ್ಲೈಮ್ಯಾಕ್ಸ್. ಮೋಜು ಮಸ್ತಿಯ ಅನಿವಾರ್ಯತೆಗೆ ಸಿಲುಕಿ, ತಮ್ಮನ್ನು ತಾವೇ ಮರೆತು ಆಮೇಲೆ ಪಶ್ಚಾತ್ತಾಪ ಪಡುವ ವಿಷಯ ಇಲ್ಲಿ ಹೈಲೈಟ್ ಆಗಿದೆ. ಹದಿಹರೆಯದ ದಿನಗಳಲ್ಲಿ ಚೆನ್ನಾಗಿ ಓದಿ ಸುಂದರ ಬದುಕು ರೂಪಿಸಿಕೊಳ್ಳುವ ಬದಲು ಒಂದು ಕ್ಷಣದ ಶೋಕಿ ಲೈಫ್ಗೆ ಬಿದ್ದು ಹೇಗೆಲ್ಲಾ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಾರೆ ಎಂಬುದು ಚಿತ್ರದ ಒಟ್ಟಾರೆ ಸಾರಾಂಶ. ಇದು ಯುವಕರ ಸಿನಿಮಾ ಆಗಿದ್ದರೂ, ಪೋಷಕರೂ ಸಹ ತಪ್ಪದೇ ನೋಡಬೇಕಾದ ಸಿನಿಮಾ ಎಂಬುದು ಅವರ ಹೇಳಿಕೆ.
“ನಿರ್ಮಾಪಕ ಡಾ. ಮಲಿನೇನಿ ಲಕ್ಷ್ಮಯ್ಯ ಅವರು, ತೆಲುಗಿನ “ಒಕ ರೊಮ್ಯಾಂಟಿಕ್ ಕ್ರೈಮ್ ಕಥಾ’ ಚಿತ್ರ ನೋಡಿದ ತಕ್ಷಣವೇ, ಕನ್ನಡದಲ್ಲಿ ಈ ಚಿತ್ರವನ್ನು ರಿಮೇಕ್ ಮಾಡಬೇಕು. ಅಂತ ಅದನ್ನು ಇಲ್ಲಿಗೆ ತಂದು ನಿರ್ಮಿಸಿದ್ದಾರೆ. ನಿರ್ಮಾವಷ್ಟೇ ಅಲ್ಲ, ಅವರು ಚಿತ್ರದಲ್ಲಿ ಒಳ್ಳೆಯ ಪಾತ್ರವನ್ನೂ ನಿರ್ವಹಿಸಿದ್ದಾರೆ. ನಟನೆ ಬಗ್ಗೆ ಅವರಿಗೆ ಆಸಕ್ತಿ ಇತ್ತು. ಹಾಗಾಗಿ ಕೊಟ್ಟಿರುವ ಪಾತ್ರವನ್ನು ನೀಟಾಗಿ ನಿಭಾಯಿಸಿದ್ದಾರೆ. ಚಿತ್ರಕ್ಕೆ ಯಾವುದೇ ಕೊರತೆ ಮಾಡಿಲ್ಲ, ಚಿತ್ರದ ಕಥೆ ಏನೆಲ್ಲಾ ಕೇಳಿತೋ, ಆದೆಲ್ಲವನ್ನೂ ಒದಗಿಸಿ, ರಿಚ್ ಆಗಿ ಮೂಡಿಬರಲು ಕಾರಣರಾಗಿದ್ದಾರೆ. 45 ದಿನಗಳ ಕಾಲ ಬೆಂಗಳೂರು, ಮಂಗಳೂರು ಮತ್ತು ಮೈಸೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ಎ.ಕೆ.ರಿಶಾಲ್ ಸಾಯಿ ಸಂಗೀತ ನೀಡಿದ್ದಾರೆ. ಗಣೇಶ್ ಕ್ಯಾಮೆರಾ ಹಿಡಿದಿದ್ದಾರೆ. ಚಿತ್ರಕ್ಕೆ ನಿರ್ದೇಶನದ ಜತೆಯಲ್ಲಿ ಸಂಕಲನವನ್ನೂ ಮಾಡಿದ್ದಾಗಿ ಹೇಳುವ ಸ್ಯಾಮ್, ಚಿತ್ರದಲ್ಲಿ ಅಶ್ವಿನಿ ಮೇಜರ್ ಪಾತ್ರ ನಿರ್ವಹಿಸಿದ್ದು, ಸ್ಕೂಲ್ ಹುಡುಗಿಯಾಗಿ ಬಿಂದಾಸ್ ಲೈಫ್ಗೆ ಅಂಟಿಕೊಂಡಾಗ, ಬದುಕು ಹೆಂಗೆಲ್ಲಾ ಕತ್ತಲಾಗುತ್ತೆ ಅನ್ನೋದರ ಸುತ್ತ ಅವರ ಪಾತ್ರ ಸಾಗಲಿದೆ. ಇನ್ನು, ಚಿತ್ರದಲ್ಲಿ ವಿ. ನಾಗೇಂದ್ರಪ್ರಸಾದ್ ಅವರೇ ಎಲ್ಲಾ ಹಾಡುಗಳನ್ನೂ ರಚಿಸಿದ್ದಾರೆ’ ಎಂದು ವಿವರ ಕೊಡುತ್ತಾರೆ ಸ್ಯಾಮ್.
Click this button or press Ctrl+G to toggle between Kannada and English