ಧರ್ಮಸ್ಥಳ : ಧರ್ಮಸ್ಥಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಏರ್ಪಡಿಸಲಾದ ಸಾಂಸ್ಖೃತಿಕ ಕಾರ್ಯಕ್ರಮಗಳಿಂದ ಉತ್ಸಾಹ ಮೂಡಿಬರಲಿ ಎಂದು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಹಾರೈಸಿದರು.
ಧರ್ಮಸ್ಥಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಗುರುವಾರ ಆಯೋಜಿಸಲಾದ ಸಾಂಸ್ಖೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮಸ್ಥಳದಲ್ಲಿ ದಾನ-ಧರ್ಮದ ವಿಶ್ವರೂಪ ದರ್ಶನವಾಗುತ್ತದೆ. ದೇವರಲ್ಲಿ ದೃಢ ಭಕ್ತಿ, ಶ್ರದ್ಧೆ-ನಂಬಿಕೆಯಿಂದ ಪವಾಡ ಸದೃಶ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಬಹುದು ಎಂಬುದಕ್ಕೆ ಧರ್ಮಸ್ಥಳವೇ ಸಾಕ್ಷಿಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅಜ್ಞಾನದ ಅಂಧಕಾರವನ್ನು ತೊಲಗಿಸಿ ಸುಜ್ಞಾನದ ಸುಗಂಧವನ್ನು ಪಸರಿಸಿ ಆರೋಗ್ಯಪೂರ್ಣ ಸಮಾಜ ರೂಪಿಸುವಲ್ಲಿ ಹೆಗ್ಗಡೆಯವರ ಕೊಡುಗೆ ಅಮೂಲ್ಯವಾಗಿದೆ ಎಂದು ಸೊರಕೆ ಶ್ಲಾಘಿಸಿದರು.
ಮಹಾಬಂಧ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ ಪ್ರತಿಯೊಂದು ವಿಷಯವನ್ನೂ ಸೂಕ್ಷ್ಮವಾಗಿ ಗಮನಿಸಿ ಕಾರ್ಯಪ್ರವೃತ್ತರಾಗುವ ಹೆಗ್ಗಡೆಯವರು ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ದೇವಸ್ಥಾನಗಳಲ್ಲಿ ಶಚಿತ್ವ ಕಾಪಾಡಲು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದ ಸಚಿವರು ಧರ್ಮಸ್ಥಳದಲ್ಲಿ ಶುಚಿತ್ವ ಕಾಪಾಡುವ ಬಗ್ಗೆ ನೀಡುವ ಆದ್ಯತೆ ಇತರ ದೇವಾಲಯಗಳಿಗೂ ಮಾದರಿಯಾಗಿದೆ ಎಂದು ಹೇಳಿದರು.
ಅದ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ದೇವಾಲಯದಲ್ಲಿ ದೈನಂದಿನ ಪೂಜಾದಿ ಕಾರ್ಯಗಳಲ್ಲಿ ಆಕಸ್ಮತ್ತಾಗಿ ಆಗುವ ದೋಷಗಳ ನಿವಾರಣೆಯೊಂದಿಗೆ ಪಾವಿತ್ರ್ಯ ಕಾಪಾಡಿ ಶಕ್ತಿ ಸಂಚಯ ಮಾಡಿ ಸಾನ್ನಿಧ್ಯ ವೃದ್ಧಿಗಾಗಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಸಲಾಗುತ್ತದೆ. ತನ್ಮೂಲಕ ದೇವಸ್ಥಾನದ ಅಂತರಂಗ ಹಾಗೂ ಬಹಿರಂಗ ಶುದ್ಧಿಯೊಂದಿಗೆ ಸಾನ್ನಿಧ್ಯ ವೃದ್ಧಿಯಾಗುತ್ತದೆ. ಯಾವುದೇ ದೇವಸ್ಥಾನಕ್ಕೆ ಹೋದಾಗ ನಮ್ಮ ದೋಷಗಳನ್ನು ಬಿಡಬೇಕು ಎಂದು ಅವರು ಸಲಹೆ ನೀಡಿದರು.
ಗಂಗಾಧರ ಮಿತ್ತಮಾರ್ ಸ್ವಾಗತಿಸಿದರು. ಶುಭಚಂದ್ರರಾಜ್ ಜೈನ್ ಧನ್ಯವಾದವಿತ್ತರು.
ಪ್ರೊ.ಎಸ್, ಪ್ರಭಾಕರ್, ಡಿ. ಸುರೇಂದ್ರ ಕುಮಾರ್. ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English