ತೊಕ್ಕೋಟು : ಜಿಲ್ಲೆಯಲ್ಲಿ ಮುಂದೆ ಯಾವ ಮಗುವಿನ ಮೇಲೆಯೂ ಲೈಂಗಿಕ ದೌರ್ಜನ್ಯ ನಡೆಯಬಾರದು. ಅದಕ್ಕಾಗಿ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತೊಕ್ಕೊಟ್ಟು ಅತ್ಯಾಚಾರ ಪ್ರಕರಣದ ಬಾಲಕಿಯ ತಾಯಿ ಸರಕಾರವನ್ನು ಆಗ್ರಹಿಸಿದರು.
ನಗರದಲ್ಲಿ ಭಾನುವಾರ ದ.ಕ. ಜಿಲ್ಲಾ ಸಂಯುಕ್ತ ಮುಸ್ಲಿಂ ಜಮಾಅತ್ ಕರೆದ ಪತ್ರಿಕಾಗೋಷ್ಠಿಯಲ್ಲಿ ಅಳಲು ತೋಡಿಕೊಂಡ ಅವರು, ದಿಲ್ಲಿ, ಬೆಂಗಳೂರಿನಲ್ಲಿ ಅತ್ಯಾಚಾರ ಘಟನೆ ನಡೆದ ತಕ್ಷಣ ಶಾಸಕ, ಸಚಿವರು ಧಾವಿಸಿದರು. ಹೋರಾಟ ನಡೆಯಿತು, ಹೊಸ ಕಾನೂನು ರಚನೆಯಾಯಿತು. ನಮ್ಮಲ್ಲಿ ಆರೋಪಿ ಬಂಧನವಾಗಿದೆ. ಅದು ಬಿಟ್ಟರೆ ವೈದ್ಯಕೀಯ ವರದಿ ಇನ್ನೂ ನೀಡಿಲ್ಲ ಎಂದು ಹೇಳಿದರು. ಶಾಲೆಯ ವಾಹನ ಚಾಲಕನ ಮೇಲೆ ಪ್ರಕರಣ ದಾಖಲಾದರೂ ಸಂಸ್ಥೆಯವರು ತಮ್ಮ ಜತೆ ಮಾತನಾಡುವ ಕನಿಷ್ಠ ಸೌಜನ್ಯವನ್ನೂ ತೋರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಧ್ಯಾಹ್ನ 1 ಗಂಟೆಗೆ ಶಾಲೆಯಿಂದ ಬರುವ ಮಗಳು, ಮಾ.13ರಂದು 10 ನಿಮಿಷ ತಡವಾಗಿ ಬಂದಿದ್ದಳು. ಊಟವೂ ಮಾಡಲಿಲ್ಲ. 3 ಗಂಟೆಗೆ ಮೂತ್ರಕ್ಕೆಂದು ಹೋದಾಗ ರಕ್ತ, ಗಾಯ ಕಂಡು ವಿಚಾರಿಸಿದೆ. ಆಗ ಚಾಲಕ ಕಿರುಕುಳ ಕೊಟ್ಟ ವಿಷಯ ತಿಳಿಸಿದಳು. ಬಳಿಕ ದೂರು ನೀಡಿದೆವು ಎಂದು ವಿವರಿಸಿದರು.
ಸಂಯುಕ್ತ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಅಶ್ರಫ್, ಸರಕಾರ ಮಧ್ಯಪ್ರವೇಶಿಸಿ, 3 ದಿನದೊಳಗೆ ವಿವರಣೆ ನೀಡದಿದ್ದಲ್ಲಿ ಕಾನೂನು ಹೋರಾಟದ ಜತೆಗೆ ಪ್ರತಿಭಟನೆ ನಡೆಸಲಾಗುವುದು ಎಂದರು.
ವಕೀಲ ಮುಝಾಫರ್ ಅಹ್ಮದ್, ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಹಮೀದ್ ಕುದ್ರೋಳಿ, ಮಾಡೂರು ಜುಮ್ಮಾ ಮಸೀದಿ ಅಧ್ಯಕ್ಷ ಅಝೀಝ್ ಮಾಡೂರು, ಸಿಎಂ.ಮುಸ್ತಫಾ ಮತ್ತು ನೊಂದ ಬಾಲಕಿಯ ತಂದೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English