ಬಂಟ್ವಾಳ: ಸಾಹಿತ್ಯ ಭೀಷ್ಮ ನೀರ್ಪಾಜೆ ಭೀಮಭಟ್ಟ-80 ವರ್ಷಾಚರಣೆ ಪ್ರಯುಕ್ತ ನೀಡಲಾಗುವ ’ಕನ್ನಡದ ಕಲ್ಹಣ ಪ್ರಶಸ್ತಿ’ಗೆ ಹಿರಿಯ ಸಾಹಿತಿ ಸಿದ್ಧಮೂಲೆ ಶಂಕರನಾರಾಯಣ ಭಟ್ಟ ಇವರು ಆಯ್ಕೆಯಾಗಿದ್ದಾರೆ.
ಹೂದೋಟ, ಗಂಗಾ ಸಲಿಲ, ನಾಲ್ಕು ಕವನಗಳು, ಪರಾಗ- ಕವನ ಸಂಕಲನ, ಕುಮಾರನ ಜನನ ಮತ್ತು ವಿಜಯ -ಗೀತಾನೃತ್ಯ ರೂಪಕ, ಕೈಲಾಸ ಮಾನಸ ಸರೋವರ ಪ್ರವಾಸ ಕಥನ, ಸೀತಾಗಾಥೆ-ಜೀವನ ಕಾವ್ಯ, ಶ್ರೀರಾಮಾಶ್ವಮೇಧ -ವಿಮರ್ಶೆ, ಕನ್ನಡ ಸಾಹಿತ್ಯದಲ್ಲಿ ಶಿವದರ್ಶನ-ಸಂಶೋಧನೆ, ಗೋವಿಂದ ಪೈಯವರ ಛಂದೋಗತಿ-ಸಂಶೋಧನೆ, ವೃಕ್ಷಾಯುರ್ವೇದ, ನಳಚರಿತ್ರೆ, ಕನ್ನಡ ಅದ್ಭುತ ರಾಮಾಯಣ-ಅನುವಾದ, ಮನುಷ್ಯಾಲಯ ಚಂದ್ರಿಕಾ-ಗೃಹವಾಸ್ತು, ಕನ್ನಡ ಸುಲಭ ವ್ಯಾಕರಣ, ಎ ಪೋಕೆಟ್ ಗ್ರಾಮರ್ ಫಾರ್ ಸ್ಟುಡೆಂಟ್ಸ್, ಅಕ್ಷರ ಸ್ಖಾಲಿತ್ಯಗಳು-ಕಾರಣ ಮತ್ತು ನಿವಾರಣೆ-ಸಂಶೋಧನೆ ಮತ್ತಿತರ ಕೃತಿಗಳನ್ನು ಇವರು ಪ್ರಕಟಿಸಿದ್ದಾರೆ.
ಇವರ ಸಾಹಿತ್ಯ ಸಾಧನೆಗಾರೀಗಾಗಲೇ ಶಿಕ್ಷಣ-ರಾಷ್ಟ್ರ ಪ್ರಶಸ್ತಿ, ಬೋಳಂತಕೋಡಿ ಕನ್ನಡ ಪ್ರಶಸ್ತಿ, ಪಂಜ ಸೀಮಾ ಹವ್ಯಕ ಸಭಾದ ಲಷ್ಕರಿ ಪ್ರಶಸ್ತಿ, ರಾಜಸ್ಥಾನ ಜೂನಿಯರ್ ರೆಡ್‌ಕ್ರಾಸ್ ಸಂಸ್ಥೆ ಪ್ರಶಸ್ತಿ, ಮಡಿಕೇರಿ ಕರ್ನಾಟಕ ಸಂಘ ಪ್ರಶಸ್ತಿ, ಹುಬ್ಬಳಿ ಧಾರಾವಾಡ ಸಂಸ್ಕೃತಿ ಪ್ರತಿಷ್ಠಾನ ಪ್ರಶಸ್ತಿ, ಬೆಂಗಳೂರು ಶ್ರೀ ರಾಮಾಶ್ರಮದ ಸರ್ವದಾರೀ ಚಾತುರ್ಮಾಸ್ಯ ಪ್ರಶಸ್ತಿ ಸಂದಿವೆ.
ಪ್ರಸಕ್ತ ಸುಳ್ಯದಲ್ಲಿ ವಾಸವಾಗಿರುವ ಸಿದ್ಧಮೂಲೆ ಅವರು, ಕೊಡಗು ಜಿಲ್ಲಾ ಮುಜರಾಯಿ ಇಲಾಖೆ ಸದಸ್ಯರಾಗಿ, ಕೊಡಗು ಜಿಲ್ಲಾ ವಯಸ್ಕರ ಶಿಕ್ಷಕರಾಗಿ, ಕೊಡಗು ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾಗಿ, ಕಾವು ಕೆಇಕೆ ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷರಾಗಿ, ಪಂಜ ಸೀಮಾ ಪರಿಷತ್‌ನ ಶೈಕ್ಷಣಿಕ ವಿಭಾಗದ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ.
ಮೂಲತಃ ಪ್ರೌಢ ಶಾಲಾ ಶಿಕ್ಷಕರಾಗಿದ್ದ ಇವರು ಕೊಡಗು, ಬಾಳೆಲೆ ಪದವಿ ಪೂರ್ವ ಕಾಲೇಜಿನಲ್ಲಿ 15 ವರ್ಷ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ.
ಏ.12 ರಂದು ಮೆಲ್ಕಾರ್‌ನ ಆರ್.ಕೆ.ಎಂಟರ್‌ಪ್ರೈಸಸ್ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ನೀರ್ಪಾಜೆ ಭೀಮ ಭಟ್ಟ ಅಭಿಮಾನಿ ಬಳಗ ಅಧ್ಯಕ್ಷ ಬಿ.ತಮ್ಮಯ್ಯ ತಿಳಿಸಿದ್ದಾರೆ.
Click this button or press Ctrl+G to toggle between Kannada and English