ಮಂಗಳೂರು : ಪುತ್ತೂರು ಎ.ಎಸ್ಪಿ ಡಾ| ರೋಹಿಣಿ ಕಟೋಚ ಅವರ ನಿರ್ದೇಶನದಲ್ಲಿ ಬಂಟ್ವಾಳ ಪೊಲೀಸು ವೃತ್ತ ನಿರೀಕ್ಷಕರಾದ ಕೆ.ನಂಜುಡೇಗೌಡ ಅವರ ತಂಡ ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ ಮತ್ತು ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಕುಖ್ಯಾತ ಅಂತರರಾಜ್ಯ ಐದು ಮಂದಿ ವಾಹನ ಕಳ್ಳರನ್ನು ಬಂಧಿಸಿ ಅವರಿಂದ ಒಂದು ಕೋಟಿಗೂ ಹೆಚ್ಚು ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿದೆ.
ಫೆಬ್ರವರಿ 18 ರಂದು ಬಂಟ್ವಾಳ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳದಲ್ಲಿ ನಡೆಸಿದ ವಿಶೇಷ ಕಾರ್ಯ ಚರಣೆ ಯಲ್ಲಿ ಮಂಜೇಶ್ವರ ನಿವಾಸಿ ಮೊಯ್ದೀನ್ ಕುಂಞ ಹಾಗೂ ಬೈಕಂಪಾಡಿ ಜೋಕಟ್ಟೆ ನಿವಾಸಿ ಹನೀಫ್ ಎಂಬವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ದ.ಕ ಜಿಲ್ಲೆಯ ವಿವಿಧೆಡೆಗಳಲ್ಲಿ ವಾಹನ ಕಳವು ಮಾಡುತ್ತಿದ್ದ ಮಾಹಿತಿ ಸಿಕ್ಕಿತು. ಇವರಿಂದ ಸುಮಾರು 1 ಕೋಟಿ, 20ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ 37 ವಾಹನಗಳನ್ನು ಪತ್ತೆ ಹಚ್ಚಿ ವಶಪಡಿಸಿ ಕೊಳ್ಳಲಾಗಿದೆ ಎಂದು ದ.ಕ ಜಿಲ್ಲಾ ಎಸ್ಪಿ ಡಾ| ಸುಬ್ರಹ್ಮಣೇಶ್ವರ ರಾವ್ ಅವರು ತನ್ನ ಕಚೇರಿಯ ಮಿನಿ ಹಾಲ್ ನಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಂದಿತರನ್ನು ವಿಚಾರಿಸಿದಾಗ ಇನ್ನು ಮೂವರ ಬಗ್ಗೆ ಮಾಹಿತಿ ನೀಡಿದ್ದು . ಇದರಂತೆ ಶಿವಮೊಗ್ಗ ನಿವಾಸಿ ಸೈಯದ್ (40) ಯಾನೆ ನಿಯಾಜ್ ಯಾನೆ ಇರ್ಫಾನ್, ಪುತ್ತೂರಿನ ಅಶ್ರಫ್ (28) ಹಾಸನ ಚಿಪ್ಪಿನಕಟ್ಟೆ ನಿವಾಸಿ ಮೊಯ್ದಿನ್ ಶರೀಫ್ (42) ಯಾನೆ ಆರ್.ಟಿ.ಓ ಮೊಯ್ದಿನ್ ರನ್ನು ಬಂಧಿಸಲಾಯಿತು.
ಈಗಾಗಲೇ ವಶಪಡಿಸಿಕೊಂಡಿರುವ ವಾಹನಗಳಲ್ಲದೇ ಇನ್ನೂ ಹಲವಾರು ವಾಹನಗಳನ್ನು ವಶಪಡಿಸಿಕೊಳ್ಳಬೇಕಾಗಿದೆ. ಜಾಲದ ಇತರ ಇಬ್ಬರು ಸದಸ್ಯರಾದ ಹಾಸನದ ರಿಯಾಜ್, ಮುಸ್ತಾಫ್ ಅವರ ಬಂಧನ ಕಾರ್ಯ ಬಾಕಿಯುಳಿದಿದೆ. ಇನ್ನಿಬ್ಬರು ತಲೆ ಮರೆಸಿಕೊಂಡಿರುವುದಾಗಿ ಎಸ್ಪಿ ಎ.ಎಸ್. ರಾವ್ ತಿಳಿಸಿದರು.
ವಶಪಡಿಸಿದ ವಾಹನಗಳ ಸರಿಯಾದ ಮಾಲಕರನ್ನು ಪತ್ತೆಮಾಡಿ, ನ್ಯಾಯಾಲಯದ ಆದೇಶ ಪಡೆದು ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದರು.
ವಶಪಡಿಸಿಕೊಂಡ ವಾಹನಗಳಲ್ಲಿ ಬೈಕ್ -22, ಲಾರಿಗಳು – 4, (ಟಿಪ್ಪರ್- 2, ಎಸ್ ಸಿ ಲಾರಿ-2), ಕಾರುಗಳು -11 (ಓಮ್ನಿ-2, ಮಾರುತಿ 800 -1, ಮಾರುತಿ ಸ್ವಿಫ್ಟ್ -1, ಇನೋವಾ -1, ಕ್ವಾಲಿಸ್ -1 ಸ್ಕಾರ್ಪಿಯೋ – 2, ಇಂಡಿಕಾ- 1) ಒಳಗೊಂಡಿದೆ
ಕಾರ್ಯಚರಣೆ ನಡೆಸಿದ ತಂಡಕ್ಕೆ ರೂ.10ಸಾವಿರ ಬಹುಮಾನ: ಈ ಪ್ರಕರಣವನ್ನು ಯಶಸ್ವಿಯಗಿ ಭೇದಿಸಿದ ಪೊಲೀಸ್ ತಂಡಕ್ಕೆ ರೂ,10,000/- ಬಹುಮಾನ ನೀಡುವುದಾಗಿ ಎಸ್ಪಿಯವರು ಈ ಸಂದರ್ಭದಲ್ಲಿ ಪ್ರಕಟಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪುತ್ತೂರು ಎ.ಎಸ್ಪಿ ಡಾ| ರೋಹಿಣಿ ಕಟೋಚ ಅವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English