ತಣ್ಣೀರುಬಾವಿ ತೂಗು ಸೇತುವೆಗೆ ರೂ. 6.00 ಕೋಟಿ ಬಿಡುಗಡೆ.- ಜೆ. ಆರ್. ಲೋಬೊ.

11:42 PM, Friday, April 17th, 2015
Share
1 Star2 Stars3 Stars4 Stars5 Stars
(5 rating, 4 votes)
Loading...
Hanging Bridge

ಮಂಗಳೂರು : ಕರ್ನಾಟಕ ರಾಜ್ಯ ಸರಕಾರದ ಲೋಕೋಪಯೋಗಿ ಇಲಾಖೆಯಿಂದ ರೂ. 6.00 ಕೋಟಿ ಅನುದಾನ ತಣ್ಣಿರುಬಾವಿ-ಸುಲ್ತಾನ್ ಬತ್ತೇರಿ ತೂಗು ಸೇತುವೆ ಕಾಮಗಾರಿಗೆ ಬಿಡುಗಡೆ ಮಾಡಲಾಗಿದೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ.ಆರ್. ಲೋಬೊ ರವರು ಮಾಧ್ಯಮದ ಜೊತೆ ಮಾತನಾಡುತ್ತಾ ಹೇಳಿದರು.

ಹಲವು ವರುಷಗಳಿಂದ ಅನುದಾನ ಅನಿಶ್ಚಿತತೆಯಲ್ಲಿ ಕಾಮಗಾರಿಯು ನೆನೆಗುದಿಗೆ ಬಿದ್ದಿದ್ದು, ಇದಕ್ಕೆ ಮರುಜೀವ ಕೊಡುವುದು ನನ್ನ ಯೋಜನೆಯಾಗಿತ್ತು. 410 ಮೀ. ಉದ್ದ, 10 ಅಡಿ ಅಗಲದ ಸುಮಾರು ರೂ. 12.00 ಕೋಟಿ ವೆಚ್ಚದ ತಣ್ಣೀರುಬಾವಿ ತೂಗುಸೇತುವೆ ಜಲಮಟ್ಟದಿಂದ ಸುಮಾರು 25 ಅಡಿ ಎತ್ತರದಲ್ಲಿ ನಿರ್ಮಾಣಗೊಳ್ಳಬೇಕಿತ್ತು. ಈ ಯೋಜನೆಯು 2006 ರಲ್ಲಿ ಪ್ರಾರಂಭಗೊಂಡು, 2008 ರಲ್ಲಿ ಕೇವಲ ರೂ. 1.00 ಕೋಟಿ ಬಿಡುಗಡೆ ಮಾಡಿ2012 ರಲ್ಲಿ ಕಾಮಗಾರಿ ಪ್ರಾರಂಭಿಸಿ ಅನುದಾನದ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿತ್ತು.
ಈ ಬಾರಿ ಶಾಸಕ ಜೆ.ಆರ್. ಲೋಬೊ ಈ ಕಾಮಗಾರಿಯನ್ನು ಮುಂದುವರೆಸುವ ದೆಶೆಯಲ್ಲಿ ಪ್ರಯತ್ನಗಳನ್ನು ನಡೆಸಿ, ಪ್ರವಾಸೋದ್ಯಮ ಇಲಾಖೆಯಲ್ಲಿ ಅಷ್ಟೊಂದು ದೊಡ್ಡ ಮೊತ್ತದ ಅನುದಾನದ ಕೊರತೆ ಇರುವ ಕಾರಣ, ಈ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಯಿತು.

ಈಗ ಲೋಕೋಪಯೋಗಿ ಇಲಾಖೆಯು ಮೊದಲ ಹಂತದ ರೂ. 6.00 ಕೋಟಿಯನ್ನು ಈ ಕಾಮಗಾರಿಗೆ ಬಿಡುಗಡೆ ಮಾಡಿದೆ. ಈ ಅನುದಾನವನ್ನು ಬಳಸಿ ಶೀಘ್ರವೇ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಹಾಗೂ ಇನ್ನು ಉಳಿದ 6.00 ಕೋಟಿ ಅನುದಾನವನ್ನು ದ್ವಿತೀಯ ಹಂತದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಶಾಸಕರು ಹೇಳಿದರು. ಮುಂದಿನ 2 ವರ್ಷದೊಳಗೆ ಈ ತೂಗು ಸೇತುವೆ ಕಾಮಗಾರಿಯನ್ನು ಪೂರ್ಣಗೊಳ್ಳುವ ಭರವಸೆ ಇದೆ ಎಂದು ಜೆ.ಆರ್. ಲೋಬೊ ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English