ಮಂಗಳೂರು : ಸುರತ್ಕಲ್ ಸಮೀಪದ ಚೆಳೈರುವಿನ ಖಂಡಿಗೆ ಜಾತ್ರೆಯಲ್ಲಿ ಪಾವಂಜೆ ಬಳಿಯ ನಂದಿನಿ ನದಿಯಲ್ಲಿ ಮೀನು ಹಿಡಿಯುವ ಸಾಮೂಹಿಕ ಜಾತ್ರೆಯು ಶುಕ್ರವಾರ ಮೇ 15 ರಂದು ನಡೆಯಿತು.
ಈ ಸಂಪ್ರದಾಯ ಶಾಸ್ತ್ರೋಕ್ತವಾಗಿ ನೆರವೇರಿದ್ದು ನೂರಾರು ಮಂದಿ ಭಕ್ತರು ಭಾಗವಹಿಸಿದ್ದರು. ಚೇಳೈರು ಗ್ರಾಮದ ಧರ್ಮರಸು ಕ್ಷೇತ್ರದ ಖಂಡೇವು ನೇಮೋತ್ಸವದ ಮುಕ್ತಾಯದ ಹಂತವಾಗಿ, ಈ ಸಂಪ್ರದಾಯ ನಡೆ ದಿದ್ದು, ವಿಶೇಷ ಪ್ರಾರ್ಥನೆಯೊಂದಿಗೆ ಪ್ರಸಾದವನ್ನು ಪಾವಂಜೆ ನಂದಿನಿ ನದಿಗೆ ಹಾಕಿ ಕದೋನಿ ಬಿಟ್ಟ ಬಳಿಕ ನಂದಿನಿ ನದಿಯಲ್ಲಿ ಮೀನು ಹಿಡಿಯಬಹುದು.
ಮುಂಜಾನೆಯಿಂದ ನಡೆಯುವ ಈ ಮೀನು ಬೇಟೆಗೆ ಇತಿಹಾಸವೇ ಇದೆ. ಇಲ್ಲಿಗೆ ಮೀನು ಹಿಡಿಯಲು ಬರುವ ಜನರು ಮಿತ್ರರೊಂದಿಗೆ, ಕುಟುಂಬದ ವರೊಂದಿಗೆ ಬಂದು ಗುಂಪು ಗುಂಪಾಗಿ ಮೀನುಗಳನ್ನು ಬಲೆಗೆ ಕೆಡವಿಕೊಂಡು ಸಿಕ್ಕ ಮೀನನ್ನು ಮನೆಗೆ ಕೊಂಡೊಯ್ಯು ತ್ತಾರೆ. ಇನ್ನು ಕೆಲವರು ಅಲ್ಲೆ ಕುಳಿತು ಮೀನನ್ನು ಮಾರಾಟ ಮಾಡುತ್ತಾರೆ. ಇದಕ್ಕೆ ಜಾತಿ, ಮತ, ಧರ್ಮದ ಚೌಕಟ್ಟಿಲ್ಲ. ಎಲ್ಲರೂ ಮೀನು ಹಿಡಿಯುವುದನ್ನು ಪವಿತ್ರ ಕಾಯಕ ಎಂದೇ ಭಾವಿಸುತ್ತಾರೆ.
ಇಲ್ಲಿ ಬಲೆಗೆ ಬೀಳುವ ಮೀನುಗಳನ್ನು ಮಾರಾಟ ಮಾಡಿ ಸಾವಿರಾರು ರೂಪಾಯಿ ಸಂಪಾದಿಸುವ ಒಂದು ವರ್ಗವೂ ಇದೆ. ಭಾರೀ ಬೇಡಿಕೆ ಇರುವ ಇಲ್ಲಿನ ಮೀನುಗಳನ್ನು ಖರೀದಿಸುವ ಇನ್ನೊಂದು ವರ್ಗವೂ ಇದೆ. ಖಂಡೇವು ಮೀನು ವರ್ಷಕ್ಕೊಮ್ಮೆ ಸೇವಿಸಲೇ ಬೇಕು ಎಂದು ಭಾವಿಸುವವರು ಅದರ ಬೆಲೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.
ಬಹಳ ಹಿಂದೆ ಸುಸಜ್ಜಿತ ಸಂಚಾರದ ವ್ಯವಸ್ಥೆ ಇಲ್ಲದಿದ್ದಾಗ ಹಿಂದಿನ ರಾತ್ರಿಯೇ ಇಲ್ಲಿಗೆ ಬಂದು ಪಕ್ಕದ ಗುಡ್ಡದಲ್ಲಿ ಆಸರೆ ಪಡೆದುಕೊಂಡು ಗೆಡ್ಡೆ ಗೆಣಸನ್ನು ತಿಂದು ಮುಂಜಾನೆ ನದಿಗೆ ಇಳಿಯುತ್ತಿದ್ದ ಕಾಲವೇ ಒಂದಿತ್ತು. ಅಂತಹ ಸಂದರ್ಭದಲ್ಲಿ ಇಲ್ಲಿ ಬೆಲ್ಲ ನೀರು ಕೊಡುವ ಸಂಪ್ರದಾಯವೂ ಇತ್ತು. ಈಗಲೂ ನದಿ ಬದಿಯ ಕೆಲ ಮನೆಗಳಲ್ಲಿ ಬೆಲ್ಲ ನೀರು ನೀಡುವುದು ವಿಶೇಷ ಎನ್ನಬಹುದು.
ಮೀನು ಹಿಡಿಯುವವರು ತಮ್ಮ ತಮ್ಮ ಕಂತ ಬಲೆ, ಗೋರ ಬಲೆ, ಬೀಸ ಬಲೆ, ಅಟ್ಟೆ ಬಲೆಯಲ್ಲಿ ಕೊಲೈತರು, ಇರ್ಪೆ, ಪಯ್ಯೆ, ಮಾಲ, ಕೇವಾಜೆ, ಮುಗುಡು, ಎಟ್ಟಿ, ಜೆಂಜಿ, ಕಾನೆ, ಸುದೇತ ನಂಗ್, ಮುಡೈ, ಮುಲಿತರು ಇನ್ನಿತರ ಮೀನುಗಳನ್ನು ಹಿಡಿಯುತ್ತಾರೆ.
Click this button or press Ctrl+G to toggle between Kannada and English