ಚಿತ್ರ ವಿಮರ್ಶೆ : ‘ಒರಿಯನ್ ತೂಂಡ ಒರಿಯಗಾಪುಜಿ’

11:47 PM, Saturday, May 16th, 2015
Share
1 Star2 Stars3 Stars4 Stars5 Stars
(5 rating, 7 votes)
Loading...
oriyan thoonda oriyagapuji

ಮಂಗಳೂರು : ಇದುವರೆಗೆ ತುಳುವಿನಲ್ಲಿ ಬಿಡುಗಡೆಗೊಂಡ ಚಿತ್ರಗಳಲ್ಲಿ ಈ ಸಿನೆಮಾ ಕೊಂಚ ಡಿಫರೆಂಟ್ ಅನಿಸುತ್ತೇ, ಸಿನೆಮಾ ನೊಡುತ್ತಿದ್ದಂತೆ ಆರಂಭದಲ್ಲೇ ಒಂದು ಕೊಲೆ ನಡೆದು ಬಿಡುತ್ತದೆ. ಅದು ‘ಒರಿಯನ್ ತೂಂಡ ಒರಿಯಗಾಪುಜಿ’ ತುಳು ಚಲನಚಿತ್ರದ ಕ್ಷೈಮಾಕ್ಸ್. ಪ್ರೇಕ್ಷಕ ಈ ಕೊಲೆ ಯಾಕಾಯಿತಪ್ಪಾ ಎಂದು ಯೋಚಿಸುವಷ್ಟರಲ್ಲಿ ನಿಮಗೆ ಕಾಮಿಡಿಗಳ ವರಸೆ ತುಸು ರಿಲ್ಯಾಕ್ಸ್ ಮಾಡಿಬಿಡುತ್ತದೆ.

‘ಒರಿಯನ್ ತೂಂಡ ಒರಿಯಗಾಪುಜಿ’ ಶ್ರೀ ಮಂಗಳಾ ಗಣೇಶ್ ಕಂಬೈನ್ಸ್ ಬ್ಯಾನರ್ನಡಿಯಲ್ಲಿ ಮೂಡಿ ಬಂದ ಮೊದಲ ತುಳು ಚಲನಚಿತ್ರ. ಕಥೆ-ಚಿತ್ರಕಥೆ-ಸಾಹಿತ್ಯ-ಗೀತಾರಚನೆ-ರಾಗ ಸಂಯೋಜನೆಯನ್ನು ಎ.ಗಂಗಾಧರ ಶೆಟ್ಟಿ ಅಳಕೆ ಇಲ್ಲಿ ಶ್ರೀಮಂತವಾಗಿ ಬಿಂಬಿಸಿದ್ದಾರೆ. ನಿರ್ಮಾಪಕ ಬಿ.ಅಶೋಕ್ ಕುಮಾರ್ ಚಿತ್ರವನ್ನು ಉತ್ತಮ ಗುಣಮಟ್ಟದಲ್ಲಿ ಹೊರತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.

ನಿರ್ದೇಶಕ ಹ.ಸೂ ರಾಜಶೇಖರ್ರವರ ಮೈಂಡ್ ವರ್ಕ್ ಇಲ್ಲಿ ಚೆನ್ನಾಗಿ ನಡೆದಿದೆ. ಯಾಕೆದಂರೆ ಇದು ತುಳುವಿನಲ್ಲಿ ಅವರ ಮೂರನೇ ಚಲನ ಚಿತ್ರ. ಕನ್ನಡದವರಾದ ರಾಜಶೇಖರ್ ತುಳು ಭಾಷೆ ಮತ್ತು ಇಲ್ಲಿನ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಚಿತ್ರವನ್ನು ಹೇಗೆ ಮಾಡಬಹುದು ಎಂದು ಅರಿತಿದ್ದಾರೆ.

ಚಿತ್ರದ ನಾಯಕ ಪ್ರೀತಂ(ಅರ್ಜುನ್ ಕಾಪಿಕಾಡ್) ಬಾಲಾಪರಾಧಿಯಾಗಿ ಜೈಲು ಸೇರಿ ಹದಿನಾಲ್ಕು ವರ್ಷಗಳ ನಂತರ ಹೊರಬರುವಾಗ ಚಿತ್ರದ ನಾಯಕಿ ಪ್ರೀತಿ (ಪ್ರಜ್ಜು ಪೂವಯ್ಯ) ಯನ್ನು ರೌಡಿಗಳಿಂದ ರಕ್ಷಿಸಲು ಹೊಡೆದಾಟ ನಡೆಯುತ್ತದೆ. ಹೇಗಾದರು ಮಾಡಿ ರೌಡಿಗಳನ್ನು ಬೆಂಡೆತ್ತಿದ ನಾಯಕ ಪ್ರೀತಂನನ್ನು ಪ್ರೀತಿ ಅಭಿನಂದಿಸುತ್ತಾಳೆ. ಆಕೆಯ ಮನೆಗೆ ಕರಕೊಂಡು ಹೋಗಿ ಕಾರ್ ಡ್ರೈವರ್ ಕೆಲಸ ಕೊಡಿಸುತ್ತಾಳೆ.

ನಾಯಕಿಯ ತಂದೆ ಸತ್ಯಪಾಲ್ (ಚೇತನ್ ರೈ ಮಾಣೀ) ಚಿತ್ರದ ವಿಲನ್ ಮಗಳನ್ನು ರಕ್ಷಿಸಿದ ಪ್ರೀತಂಗೆ ಡ್ರೈವರ್ ಕೆಲಸದ ಜೊತೆಗೆ ಮಗಳಿಗೆ ಬಾಡಿಗಾರ್ಡ್ ಆಗಿರಲು ಹೇಳುತ್ತಾನೆ. ಎರಡನೇ ಬಾರಿ ನಾಯಕಿಯ ಮೇಲೆ ರೌಡಿಗಳ ಅಟ್ಯಾಕ್ ನಡೆಯುವಾಗ ಇದೇ ನಾಯಕ ಆಕೆಯನ್ನು ರಕ್ಷಿಸಿ ಮನೆಗೆ ಬಿಡುತ್ತಾನೆ. ಪ್ರೀತಂ ನಡತೆಯನ್ನು ಮೆಚ್ಚಿದ ಪ್ರೀತಿಗೆ ಅವನ ಮೇಲೆ ಲೌವ್ ಸುರುವಾಗಿ ಬಿಡುತ್ತದೆ. ಆದರೆ ಇಲ್ಲಿ ಪ್ರೀತಂ ಲವ್ ಮಾಡುತ್ತಾನೋ ಇಲ್ಲವೋ ಎನ್ನುವ ಕುತೂಹಲ ಪ್ರೇಕ್ಷಕರಿಗೆ ಕೊನೆಯ ವರೆಗೂ ಇರುತ್ತದೆ.

ಅರ್ಜುನ್ ಕಾಪಿಕಾಡ್ಗೆ ಇದು ಮೂರನೇ ತುಳು ಚಿತ್ರ. ಮೊದಲ ಚಿತ್ರ ತೆಲಿಕೆದ ಬೊಳ್ಳಿಯಲ್ಲಿ ಸಮರ್ಥನಾಯಕ ನೆನಿಸಿಕೊಂಡವ. ಮುಂಬಯಿಯಲ್ಲಿ ಡ್ಯಾನ್ಸ್ ಮತ್ತು ಫೈಟಿಂಗ್ ಕಲಿತು ತಂದೆ ದೇವದಾಸ್ ಕಾಪಿಕಾಡ್ ಮಾರ್ಗದರ್ಶನದಲ್ಲಿ ಪಳಗಿ ನಟನೆಗೆ ಸೈಯೆನಿಸಿಕೊಂಡ ಯುವ ಪ್ರತಿಭೆ. ಕೊಡಗಿನ ಬೆಡಗಿ ಪ್ರಜ್ಜು ಕನ್ನಡ ಮತ್ತು ತಮಿಳಿನಲ್ಲಿ ನಟಿಸಿದವಳು ಆಕೆಗೆ ಅಲ್ಪ ಸ್ವಲ್ಪ ತುಳು ಗೊತ್ತು. ಈ ಚಿತ್ರದಲ್ಲಿ ಕೊಂಚ ಬೋಲ್ಡ್ ಆಗಿ ಅಭಿನಯ ನೀಡಿದ್ದಾಳೆ.

ಬೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಸುಂದರ ರೈ ಮಂದಾರ, ಸಾಯಿ ಕೃಷ್ಣ ಕುಡ್ಲ ಕಾಮಿಡಿ ಅಭಿನಯ ಮನೋಜ್ಞವಾಗಿದೆ. ಹಿತ ಮಿತವಾಗಿ ಸಂಭಾಷಣೆ ಪ್ರೆಕ್ಷಕನಿಗೆ ಹಿಡಿಸುತ್ತದೆ. ತಮಿಳಿನ ಬಟ್ಟೆ ಮಾರುವವನಾಗಿ ಬಂದು ಅಡುಗೆ ಸಹಾಯಕನಾಗಿ ನಾಯಕಿಯ ಮನೆಸೇರಿಕೊಂಡು ಮಾಡುವ ತಮಿಳು ವಿಶ್ರಿತ ಕಾಮಿಡಿ ಅದ್ಭುತವಾಗಿದೆ. ರೇಖಾದಾಸ್ ಅರವಿಂದ್ ಬೋಳಾರ್ ಹೆಂಡತಿ ಆಕೆ ಅದೇ ಮನೆಗೆ ಅಡುಗೆ ಸಹಾಯಕಿಯಾಗಿ ಸೇರಿಕೊಳ್ಳುತ್ತಾಳೆ. ರೇಖಾ ನಾಲ್ಲು ಮಂದಿ ಕಾಮಿಡಿನ್ ಗಳೊಂದಿಗೆ ಚೆನ್ನಾಗಿ ಅಭಿನಯ ನೀಡಿ ರಂಜಿಸಿದ್ದಾರೆ.

ಕನ್ನಡದ ಕಾಮಿಡಿಕಿಂಗ್ ಸೀರಿಯಲ್ ನಟ ಮಿತ್ರಾ ನಟನೆ ಮತ್ತು ಕನ್ನಡ ಭಾಷೆಯ ಸಂಭಾಷಣೆ ತುಳುವರಿಗೆ ಹಿಡಿಸಿದೆ. ತುಳುಗೊತ್ತಿಲ್ಲದೆ ಅದನ್ನು ಅಪಾರ್ಥ ಮಾಡಿಕೊಂಡು ನಗೆಪಾಟಲಿಗೆ ಒಳಗಾಗುವುದು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತದೆ.

ನಿರ್ಮಾಪಕ ಬಿ.ಅಶೋಕ್ ಕುಮಾರ್ ಕನ್ನಡದ ಭವ್ಯ ಜೋಡಿಯಾಗಿ ಮೊದಲ ಬಾರಿ ನಟಿಸಿ ಒರ್ವ ಉದ್ಯಮಿಯಾಗಿ ನಟನೆಗೂ ಒಕೆ ಅನಿಸಿಕೊಂಡಿದ್ದಾರೆ. ಭವ್ಯ ಅಭಿನಯ ಚೆನ್ನಾಗಿ ಮೂಡಿದೆ. ತುಳು ಕಲಿತು ಸಂಭಾಷಣೆ ಮಾಡಿರುವುದು ಅವರ ಅಭಿನಯದ ಪ್ರೌಢಿಮೆಗೆ ಹಿರಿಮೆ ಎನ್ನಬಹುದು.

ಮಂಗಳೂರಿನ ಕೆಲವು ವಿಶೇಷ ಪ್ರಕೃತಿ ರಮಣೀಯ ಸ್ಥಳಗಳಲ್ಲಿ ನಡೆದ ಚಿತ್ರೀಕರಣ ಅದನ್ನು ಕ್ಯಾಮೆರಾದಲ್ಲಿ ನಾಗೇಶ್ ಆಚಾರ್ಯ ಮತ್ತು ಗೌರಿ ವೆಂಕಟೇಶ್ ಒಳ್ಳೆ ಸಮಯ ಪ್ರಜ್ಞೆಯಿಂದ ಸೆರೆ ಹಿಡಿದಿದ್ದಾರೆ.

ಶ್ರೀ ರಾಜೇಶ್ ಕೃಷ್ಣನ್, ಹೇಮಂತ್, ಅಜಯ್ ವಾರಿಯಾರ್, ಅನುರಾಧ ಭಟ್ ಧ್ವನಿಯಲ್ಲಿ ಮೂಡಿಬಂದ ಆರು ಹಾಡುಗಳು ಪ್ರೇಕ್ಷಕನಿಗೆ ಮುದ ನೀಡಿದೆ. ಒಂದು ಭಕ್ತಿಪ್ರಧಾನ ಹಾಡು ಕಾಂಞಗಾಂಡ್ನ ನಿತ್ಯಾನಂದ ಆಶ್ರಮದಲ್ಲಿ ಚಿತ್ರೀಕರಣ ಗೊಂಡಿರುವುದು ಆಸ್ತಿಕರನ್ನು ಮಂತ್ರಮುಗ್ಧಗೊಳಿಸುತ್ತದೆ. ವಿ.ಮನೋಹರ್ರವರ ಸಂಗೀತ ನಿರ್ದೇಶನ, ವಿಜಯ ಭಾರತಿಯವರ ಹಿನ್ನೆಲೆ ಸಂಗೀತ ಎ.ಗಂಗಾಧರ ಶೆಟ್ಟಿಯವರ ರಾಗ ಸಂಯೋಜನೆಗೆ ಹೊಂದಾಣಿಕೆಯಾಗಿದೆ. ಅದಕ್ಕೆ ಸರಿಯಾಗಿ ಮದನ್ ಹರಿಣಿಯವರ ನೃತ್ಯ ಸಂಯೋಜನೆ ಉತ್ತಮವಾಗಿತ್ತು.

ನಟ ಅರ್ಜುನ್ ಕಾಪಿಕಾಡ್ ಥ್ರಿಲ್ಲರ್ ಮಂಜು ನಿರ್ದೇಶನದಲ್ಲಿ ಮಾಡಿರುವ ಮೂರು ಫೈಟುಗಳು ಕೊಂಚ ಹೊತ್ತು ಪ್ರೇಕ್ಷಕರನ್ನು ಸೈಲೆಂಟಾಗಿ ರೋಮಾಚಂನದ ಕಡೆಗೆ ಒಯ್ಯುತ್ತದೆ. ಇದು ಸಿನೆಮಾ ಕಥೆಗೆ ಪೂರವಾಗಿದ್ದು ಫೈಟಿಂಗ್ ಮಾಡಿದ ಲೊಕೇಶನ್ ಚೆನ್ನಾಗಿದೆ.

ಸಿನೆಮಾದ ಯಶಸ್ವಿಗೆ ಸಂಕಲನವೂ ಪ್ಲಸ್ ಪಾಯಿಂಟ್. ಬಿ.ಎಸ್.ಕೆಂಪರಾಜ್ ಆ ಕೆಲಸವನ್ನು ಸರಿಯಾಗಿ ಮಾಡಿದ್ದಾರೆ. ಸಿನೆಮಾದ ಪ್ರತಿಯೊಂದು ಸೀನುಗಳು ವೇಸ್ಟ್ ಆಗದಂತೆ ನೋಡಿಕೊಂಡಿದ್ದಾರೆ.

ಇಲ್ಲಿ ಕುತೂಹಲವಿರುವುದು ಚಲನಚಿತ್ರದ ಮೊದಲದೃಶ್ಯದಲ್ಲಿ ನಡೆದ ಕೊಲೆಯನ್ನು ಯಾರು ಮಾಡಿದ್ದು ಮತ್ತು ನಾಯಕ ನಟನ ತಾಯಿಯಾರು? ಆಕೆ ತನ್ನ ಗಂಡನ ಕೊಲೆಗೆ ಹೇಗೆ ಸೇಡು ತೀರಿಸಿಕೊಳ್ಳುತ್ತಾಳೆ ಎಂಬುದನ್ನು ನೀವು ಕುಟುಂಬ ಸಮೇತರಾಗಿ ಸಿನೇಮಾ ಥಿಯೇಟರಿಗೆ ಹೋಗಿ ನೋಡಬೇಕು..!

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English